ವಿಶ್ವದಾದ್ಯಂತ 10 ಭೀಕರ ಹವಾಮಾನ ವೈಪರೀತ್ಯ: 11 ಲಕ್ಷ ಕೋಟಿ ರೂ. ನಷ್ಟ

Update: 2020-12-28 15:49 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್ (ಫ್ರಾನ್ಸ್), ಡಿ. 28: ಈ ವರ್ಷ ಜಗತ್ತಿನಾದ್ಯಂತ ಸಂಭವಿಸಿದ 10 ಭೀಕರ ಹವಾಮಾನ ವೈಪರೀತ್ಯಗಳಿಂದಾಗಿ 150 ಬಿಲಿಯ ಡಾಲರ್ (ಸುಮಾರು 11.03 ಲಕ್ಷ ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ ಎಂದು ಸೋಮವಾರ ಬಿಡುಗಡೆಗೊಂಡ ವರದಿಯೊಂದು ತಿಳಿಸಿದೆ. ಇದು ವಿಮಾ ಕಂಪೆನಿಗಳಲ್ಲಿ ನೋಂದಣಿಯಾಗಿರುವ ನಷ್ಟವಾಗಿದೆ.

ಈ ವಿಪತ್ತುಗಳಿಂದಾಗಿ ಕನಿಷ್ಠ 3,500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1.35 ಕೋಟಿಗೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.

 ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಹಿಡಿದು, ನವೆಂಬರ್‌ವರೆಗಿನ ದಾಖಲೆಯ ಸಂಖ್ಯೆಯ ಅಟ್ಲಾಂಟಿಕ್ ಸಾಗರದ ಚಂಡಮಾರುತಗಳವರೆಗೆ ಈ ವರ್ಷ ಸಂಭವಿಸಿದ ಪ್ರಾಕೃತಿಕ ವಿಪತ್ತುಗಳಿಂದಾಗಿ ಇಷ್ಟು ಪ್ರಮಾಣದ ನಷ್ಟ ಸಂಭವಿಸಿದೆ. ಆದರೆ ಇದು ವಿಮಾ ನೋಂದಾಯಿತ ನಷ್ಟವಾಗಿದ್ದು, ನೈಜ ನಷ್ಟ ಇದಕ್ಕಿಂತ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಜಾಗತಿಕ ಎನ್‌ಜಿಒ ಕ್ರಿಶ್ಚಿಯನ್ ಏಡ್‌ನ ‘ಕೌಂಟ್ ದ ಕಾಸ್ಟ್ ಆಫ್ 2020: ಎ ಯೀಯರ್ ಆಫ್ ಕ್ಲೈಮೇಟ್ ಬೇಕ್‌ಡೌನ್’ ಎಂಬ ತಲೆಬರಹದ ವರದಿ ತಿಳಿಸಿದೆ.

ಬಡ ದೇಶಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಉಂಟಾಗಿರುವ ಒಟ್ಟು ಹಾನಿಯ ಕೇವಲ 4 ಶೇಕಡದಷ್ಟಕ್ಕೆ ಮಾತ್ರ ವಿಮೆ ಮಾಡಲಾಗಿದೆ. ಅದೇ ವೇಳೆ, ಶ್ರೀಮಂತ ದೇಶಗಳಲ್ಲಿ ಸಂಭವಿಸಿದ ಹಾನಿಯ 60 ಶೇಕಡದಷ್ಟಕ್ಕೆ ವಿಮಾ ಕವಚವಿದೆ ಎಂದು ವರದಿ ಹೇಳಿದೆ.

 ‘‘ಏಶ್ಯದಲ್ಲಿ ಸಂಭವಿಸಿದ ಪ್ರವಾಹಗಳು, ಆಫ್ರಿಕದಲ್ಲಿ ಮಿಡತೆಗಳಿಂದ ನಡೆದ ದಾಳಿಗಳು, ಯುರೋಪ್‌ನಲ್ಲಿ ಅಪ್ಪಳಿಸಿದ ಚಂಡಮಾರುತಗಳು ಸೇರಿದಂತೆ 2020ರಲ್ಲಿ ಹವಾಮಾನ ಬದಲಾವಣೆ ಸಂಬಂಧಿ ವೈಪರೀತ್ಯಗಳು ನಿರಂತರವಾಗಿ ನಡೆದವು’’ ಎಂದು ಕ್ರಿಶ್ಚಿಯನ್ ಏಡ್‌ನ ಹವಾಮಾನ ನೀತಿ ಮುಖ್ಯಸ್ಥ ಕ್ಯಾಟ್ ಕ್ರಾಮರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News