ಸ್ಮೃತಿ ಇರಾನಿ ವಿರುದ್ದ ಭ್ರಷ್ಟಾಚಾರ ಆರೋಪ: ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್

Update: 2020-12-28 15:51 GMT

ಹೊಸದಿಲ್ಲಿ: ಅಂತರ್ ರಾಷ್ಟ್ರೀಯ ಮಟ್ಟದ ಶೂಟರ್ ವೊಬ್ಬರು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವುದರಿಂದ ಇರಾನಿ ರಾಜೀನಾಮೆ ನೀಡಬೇಕು. ಸತ್ಯವನ್ನು ಕಂಡುಕೊಳ್ಳಲು ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಸೋಮವಾರ  ಬೇಡಿಕೆ ಇಟ್ಟಿದೆ.

"ಇರಾನಿ ವಿರುದ್ಧ ಕೇಳಿಬಂದಿರುವ ಆರೋಪ ಗಂಭೀರವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಯುಪಿಎ ಸರಕಾರ ವಿದ್ದಾಗ ಇಂತಹ ಆರೋಪ ಕೇಳಿಬಂದಾಗ ಕಾಂಗ್ರೆಸ್ ಕಚೇರಿಯ ಹೊರಗೆ ಕುಳಿತು ಇರಾನಿ ಧರಣಿ ನಡೆಸುತ್ತಿದ್ದರು'' ಎಂದು  ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಜವಳಿ ಸಚಿವೆ ಹಾಗೂ ಇತರ ಇಬ್ಬರು ತನ್ನನ್ನು ಕೇಂದ್ರೀಯ ಮಹಿಳಾ ಆಯೋಗದ ಸದಸ್ಯೆಯನ್ನಾಗಿ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಅಂತರ್ ರಾಷ್ಟ್ರೀಯ ಮಟ್ಟದ ಶೂಟರ್ ವರ್ತಿಕಾ ಸಿಂಗ್ ಇತ್ತೀಚೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಉತ್ತರಪ್ರದೇಶದ ಸುಲ್ತಾನ್ ಪುರದಲ್ಲಿರುವ ಸಂಸದರು-ಶಾಸಕರ ನ್ಯಾಯಾಲಯವು ಜನವರಿ 2ಕ್ಕೆ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಪ್ರಕರಣವು ತನ್ನ ವ್ಯಾಪ್ತಿಗೆ ಬರಲಿದೆಯೇ ಎಂದು ನಿರ್ಧರಿಸಲಿದೆ ಎಂದು ವರ್ತಿಕಾ ಸಿಂಗ್ ವಕೀಲರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News