ವಾಯು ಮಾಲಿನ್ಯದ ಗಂಡಾಂತರ

Update: 2020-12-29 06:21 GMT

ಆಧುನಿಕ ಅಭಿವೃದ್ಧಿಯ ಅಟ್ಟಹಾಸದಲ್ಲಿ ಈ ಜಗತ್ತು ಪ್ರತಿನಿತ್ಯ ನಲುಗಿ ಹೋಗುತ್ತಿದೆ.ಮಾರುಕಟ್ಟೆ ಪ್ರಧಾನ ಆರ್ಥಿಕತೆ ಬಂದ ನಂತರವಂತೂ ಮನುಷ್ಯ ಸರಾಗ ಉಸಿರಾಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಯು ಮಾಲಿನ್ಯ ಕೋವಿಡ್‌ಗಿಂತ ಅಪಾಯಕಾರಿಯಾಗಿ ಪರಿಣಮಿಸಿದೆ. 2019ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದಿಂದ 17 ಲಕ್ಷ ಜನ ಕೊನೆಯುಸಿರೆಳೆದಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಾಯು ಮಾಲಿನ್ಯದಿಂದಾಗಿ ಕೆಮ್ಮು, ದಮ್ಮು ಹೀಗೆ ನೂರೆಂಟು ವ್ಯಕ್ತಿಗತ ದುಷ್ಪರಿಣಾಮಗಳು ಮನುಷ್ಯನ ಮೇಲೆ ಆಗುತ್ತವೆ. ಅದಕ್ಕಿಂತ ಹೆಚ್ಚಾಗಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಇದು ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುವುದರ ಜೊತೆಗೆ ಆರ್ಥಿಕವಾಗಿ ಭಾರತ ಕಳೆದ ವರ್ಷ 2.60 ಲಕ್ಷ ಕೋಟಿ ರೂಪಾಯಿಯಷ್ಟು ಆರ್ಥಿಕ ಹಾನಿಯನ್ನು ಅನುಭವಿಸಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಇದಷ್ಟೇ ಅಲ್ಲ ನಮ್ಮ ಒಟ್ಟು ಆಂತರಿಕ ಉತ್ಪನ್ನದ ಶೇಕಡಾ 0.4ರಷ್ಟು ಭಾಗ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆ ಮತ್ತು ನಿರ್ವಹಣೆಗೆ ಖರ್ಚಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕರು ಹೇಳಿದ್ದಾರೆ.

ನಮ್ಮ ದೇಶದ ಮಹಾನಗರಗಳು ಹೆಚ್ಚು ವಾಯು ಮಾಲಿನ್ಯಕ್ಕೆ ತುತ್ತಾಗಿವೆ.ಅಪಾಯಕಾರಿಯಾದ ಔದ್ಯಮಿಕ ಘಟಕಗಳಿಂದಾಗಿ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಪ್ರಾಣ ಘಾತುಕವಾಗಿ ಪರಿಣಮಿಸಿವೆ. ನಮ್ಮ ರಾಜ್ಯವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ಹರಿಹರದ ಪಾಲಿಫೈಬರ್ ಕಾರ್ಖಾನೆಯಂತಹ ಉದ್ದಿಮೆಗಳಿಂದ ತುಂಗಭದ್ರಾ ನದಿಯ ನೀರು ಕುಡಿಯಬಾರದಷ್ಟು ಮಲಿನಗೊಂಡಿದೆ.ಇದೊಂದು ಉದಾಹರಣೆ ಮಾತ್ರ, ರಾಜ್ಯದ ಬಹುತೇಕ ನದಿಗಳ ಪರಿಸ್ಥಿತಿ ಭಿನ್ನವಾಗಿಲ್ಲ.ಕೈಗಾರಿಕೆಗಳನ್ನೇನೋ ಊರಾಚೆ ದೂರದಲ್ಲಿ ಆರಂಭಿಸಲು ಷರತ್ತು ವಿಧಿಸಿ ಪರವಾನಿಗೆ ನೀಡಲಾಗುತ್ತದೆ. ಆದರೆ ಉಸಿರಾಡುವ ಗಾಳಿಯನ್ನು ಕಟ್ಟಿ ಹಾಕಲು ಆಗುವುದಿಲ್ಲ. ಅದಕ್ಕೆ ಗಡಿಯಿಲ್ಲ. ಉದ್ದಿಮೆಗಳು ಊರಾಚೆ ಕಾರ್ಯ ನಿರ್ವಹಿಸಿದರೂ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಹೀಗಾಗಿ ದಿಲ್ಲಿಯಂತಹ ಮಹಾನಗರಗಳ ಪರಿಸ್ಥಿತಿ ಕಳವಳಕಾರಿಯಾಗಿದೆ.

ಪರಿಸರ ಮಾಲಿನ್ಯಕ್ಕೆ ಕೈಗಾರಿಕೆಗಳು ಮಾತ್ರ ಕಾರಣವಲ್ಲ. ಲಂಗು ಲಗಾಮಿಲ್ಲದ ವಾಹನಗಳ ಓಡಾಟ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ, ಇನ್ನೂ ಅಲ್ಲಲ್ಲಿ ಅಡಿಗೆ ಮಾಡಲು ಸೌದೆಗಳ ಬಳಕೆ, ಅಭಿವೃದ್ಧಿ ಹೆಸರಿನಲ್ಲಿ ಅನುಪಯುಕ್ತ ಕಾಮಗಾರಿಗಳ ಪರಿಣಾಮವಾಗಿ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಪರಿಸ್ಥಿತಿ ಆತಂಕಕಾರಿಯಾಗಿದೆ.

ಈಗಂತೂ ಶುದ್ಧ ಆಹಾರ ಎಲ್ಲೂ ಸಿಗದಂತಾಗಿದೆ. ಆಹಾರ ಪದಾರ್ಥಗಳಲ್ಲಿ ರುಚಿ ಬರಲಿ ಎಂದು ವಿಪರೀತ ರಾಸಾಯನಿಕ ವಿಷಗಳ ಸೇರ್ಪಡೆ, ಅಗ್ಗದ ಬೆಲೆಯಲ್ಲಿ ಸಿಗುವ ಆದರೆ ಅಪಾಯಕಾರಿಯಾದ ಖಾದ್ಯ ತೈಲಗಳ ಬಳಕೆ, ರಸ್ತೆ ಬದಿಯಲ್ಲಿ ಸಿಗುವ ಅಶುದ್ಧ ತಿಂಡಿ ಮತ್ತು ಊಟಗಳು, ಪ್ಲಾಸ್ಟಿಕ್ ಲೋಟ, ತಟ್ಟೆಗಳ ಬಳಕೆ, ಇವೆಲ್ಲವುಗಳ ಪರಿಣಾಮವಾಗಿ ಮಧುಮೇಹ, ಹೃದಯ ಕಾಯಿಲೆ, ಕ್ಷಯ, ಕ್ಯಾನ್ಸರ್, ಶ್ವಾಸಕೋಶದ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ನಮ್ಮ ದೇಶದಲ್ಲಿ ಕೋವಿಡ್‌ನಿಂದ ಪ್ರತಿನಿತ್ಯ ಐದು ನೂರು ಜನರು ಅಸು ನೀಗುತ್ತಿದ್ದರೆ, ವಾಯುಮಾಲಿನ್ಯ ಮತ್ತಿತರ ಕಾರಣಗಳಿಂದ ಸುಮಾರು 22 ಸಾವಿರ ಜನರು ಕೊನೆಯುಸಿರೆಳೆಯುತ್ತಿದ್ದಾರೆ. ಈ ಬಗ್ಗೆ ನಮ್ಮ ಶಾಸನ ಸಭೆಗಳಲ್ಲಿ ಚರ್ಚೆಯಾಗುವುದಿಲ್ಲ. ಅಭಿವೃದ್ಧಿಯ ಹುಚ್ಚು ಹಿಡಿದ ಸರಕಾರಕ್ಕಂತೂ ಇದು ಆದ್ಯತೆಯ ವಿಷಯವಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.

ರೂಪಾಂತರಗೊಂಡ ಕೊರೋನ ವೈರಾಣುವಿನ ಬಗ್ಗೆ ಈಗ ಎಲ್ಲರೂ ಮಾತಾಡುತ್ತಿದ್ದಾರೆ. ಆದರೆ ಕೋವಿಡ್‌ಗಿಂತ ಹೆಚ್ಚು ಜನರ ಸಾವಿಗೆ ಕಾರಣವಾಗುವ ವಾಯುಮಾಲಿನ್ಯದ ಬಗ್ಗೆ ಯಾರೂ ಮಾತಾಡುವುದಿಲ್ಲ. ಜಗತ್ತಿನ ಪಾಲಿಗೆ ವಾಯುಮಾಲಿನ್ಯ ಇಂದಿಗೂ ಪ್ರಾಣ ಘಾತುಕ ಎಂದೆನಿಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಕೋವಿಡ್‌ಗೆ ನೀಡಿದ ನೂರು ಪಟ್ಟು ಆದ್ಯತೆಯನ್ನು ವಾಯುಮಾಲಿನ್ಯಕ್ಕೂ ನೀಡಿ ಅದರ ನಿವಾರಣೆಗೆ ಸರಕಾರ ಕಾರ್ಯೊನ್ಮುಖವಾಗಬೇಕಾಗಿದೆ. ಉಸಿರಾಡಲು ಶುದ್ಧ ಗಾಳಿ, ಕುಡಿಯಲು ಶುದ್ಧ ನೀರು, ತಿನ್ನಲು ಶುದ್ಧ ಆಹಾರ ಮಾನವ ಹಕ್ಕಾಗಿದೆ. ಈ ಮಾನವ ಹಕ್ಕುಗಳನ್ನು ನಿರಾಕರಿಸುವುದು ಘೋರ ಅಪರಾಧ ಎಂದು ಜಗತ್ತಿನ ಎಲ್ಲ ದೇಶಗಳ ಸರಕಾರಗಳು ಒಮ್ಮತದಿಂದ ತೀರ್ಮಾನಿಸಬೇಕಾಗಿದೆ.

ಕುಡಿಯುವ ನೀರಿನ ಸಮಸ್ಯೆಯಂತೂ ಅತ್ಯಂತ ಆತಂಕಕಾರಿಯಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆಯ 2010 ರ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಮಾನವ ಹಕ್ಕುಗಳ ಭಾಗ ಎಂದು ಹೇಳಲಾಗಿದೆ. ಆದರೆ ಲಾಭಕೋರ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದ ಪರಿಣಾಮವಾಗಿ ಮನುಷ್ಯನಿಗೆ ಶುದ್ಧ ಗಾಳಿ, ಶುದ್ಧ ನೀರು,ಶುದ್ಧ ಆಹಾರ ಸಿಗದಂತಾಗಿದೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ನಿರಂತರವಾಗಿ ಜನ ಜಾಗೃತಿ ಮೂಡಿಸಬೇಕಾಗಿದೆ.

ಕ್ಯೂಬಾದಂತಹ ಕೆಲ ದೇಶಗಳನ್ನು ಹೊರತು ಪಡಿಸಿದರೆ ಜಗತ್ತಿನ ಬಹುತೇಕ ದೇಶಗಳ ಸರಕಾರಗಳು ವಾಯುಮಾಲಿನ್ಯದ ಬಗ್ಗೆ ಮಾತಾಡುತ್ತವೆ. ದಿನಾಚರಣೆ ಮಾಡುತ್ತವೆ, ಆದರೆ ಆ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅಭಿವೃದ್ಧಿ ಅಂದರೆ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಮತ್ತು ಲಾಭಕ್ಕಾಗಿ ಮಾರಾಟ ಎಂದಾಗಿರುವ ದಿನಗಳಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಬೇಕಾಗಿದೆ. ಭೂಮಿ ಮತ್ತು ಭೂಮಿಯ ಮೇಲಿರುವ ಯಾವುದೇ ಜೀವಿಗೆ ಮಾರಕವಾದ ಅಭಿವೃದ್ಧಿ ಮಾರ್ಗವನ್ನು ಕೈ ಬಿಡಬೇಕಾಗಿದೆ.

ಪ್ರಪಂಚದ ಮುಂದೆ ಈಗ ಎರಡು ಆಯ್ಕೆಗಳಿವೆ.ಅಳಿವು ಮತ್ತು ಉಳಿವು. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಭೂಮಿ ಮತ್ತು ಇದರ ಮೇಲಿರುವ ಮನುಷ್ಯ ಮತ್ತು ಇತರ ಜೀವಿಗಳು ಸುರಕ್ಷಿತವಾಗಿ ಉಳಿಯಬೇಕೆಂದರೆ ವಿನಾಶಕಾರಿ ಅಭಿವೃದ್ಧಿ ಮಾರ್ಗಕ್ಕೆ ತಿಲಾಂಜಲಿ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News