ಗೋರಕ್ಷಣೆ: ಸಾವರ್ಕರ್ ಚಿಂತನೆ ಬಿಜೆಪಿಗೆ ಮಾದರಿಯಾಗಲಿ

Update: 2020-12-30 07:26 GMT

‘‘ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದೃಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪವನ್ನು ಕೊಡುವುದು ಬಿಟ್ಟು, ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು, ಎತ್ತುಗಳನ್ನು ದೇವರೆಂದು ತೋರಿಸುತ್ತಾ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು. ಅವನನ್ನು ದೇಶಸೇವೆಗೆ ದುಡಿಸಬೇಕು’’ ಈ ಮಾತನ್ನು ಹೇಳಿದವರು ಇನ್ನಾರೂ ಅಲ್ಲ, ಸಂಘಪರಿವಾರದ ಪ್ರಾತಃಸ್ಮರಣೀಯರಾಗಿರುವ ವಿನಾಯಕ ದಾಮೋದರ ಸಾವರ್ಕರ್. ‘ಮಹಾರಾಷ್ಟ್ರ ಶಾರದಾ’ದ ಎಪ್ರಿಲ್ 1935ರ ಸಂಚಿಕೆಯಲ್ಲಿ ಗೋವುಗಳ ಕುರಿತಂತೆ ಇಂದಿನ ನಕಲಿ ಗೋರಕ್ಷಕರ ಕೆನ್ನೆಗೆ ಬಾರಿಸುವಂತೆ ಬರೆದಿದ್ದಾರೆ. ಅವರು ಗೋವಿನ ಕುರಿತಂತೆ ಅದೇ ಲೇಖನದಲ್ಲಿ ಇನ್ನೂ ಕೆಲವು ಅಂಶಗಳನ್ನು ಬರೆಯುತ್ತಾರೆ. ಅವು ಕೆಳಗಿನಂತಿವೆ.

‘‘ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗ ಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು. ಈ ಪ್ರವೃತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂತಹ ಮೂರ್ಖತನ ಧರ್ಮ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿ ಹತ್ಯೆ ಮಾತ್ರ ಆಗಬಾರದು’’. ಸಾವರ್ಕರ್ ಇಲ್ಲಿಗೇ ನಿಲ್ಲಿಸುವುದಿಲ್ಲ. ‘‘ಹಸು ಮತ್ತು ಎತ್ತು ನಮ್ಮ ಕೃಷಿ ಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೋ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರು ಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ’’ ಎಂದು ಅವರು ಎಚ್ಚರಿಸುತ್ತಾರೆ.

ಗೋವಿನ ಹೆಸರಿನಲ್ಲಿ ನಡೆಸುವ ರಾಜಕೀಯ ಅಂತಿಮವಾಗಿ ಈ ದೇಶಕ್ಕೆ ಭಾರೀ ನಷ್ಟವನ್ನುಂಟು ಮಾಡಬಹುದು ಎನ್ನುವುದು ಸ್ವತಃ ಸಂಘಪರಿವಾರದ ಅತ್ಯುನ್ನತ ನಾಯಕರಾದ ಸಾವರ್ಕರ್ ಅವರಿಗೇ ಅರಿವಿತ್ತು. ಇಂದು ಬಿಜೆಪಿಯು ಸಾವರ್ಕರ್ ಹೇಳುವಂತೆ ‘ಚುನಾವಣೆಯ ಅತ್ಯಲ್ಪ ಲಾಭ’ವನ್ನು ಮುಂದಿಟ್ಟುಕೊಂಡು ಈ ದೇಶದ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ನಾಡಿನ ಚಿಂತಕರು, ರೈತರ ಮಾತುಗಳನ್ನು ಆಲಿಸದೇ ಇದ್ದರೂ ಪರವಾಗಿಲ್ಲ, ಗೋರಕ್ಷಣೆಯ ಕುರಿತಂತೆ ತಮ್ಮದೇ ನಾಯಕರಾಗಿರುವ ವಿ.ಡಿ. ಸಾವರ್ಕರ್ ಬರೆದಿರುವ ಲೇಖನವನ್ನು ಓದಿ ಅವರ ಗೌರವಾರ್ಥವಾದರೂ ಗೊಂದಲಕಾರಿ ಕಾನೂನಿಂದ ಬಿಜೆಪಿ ಹಿಂದೆ ಸರಿಯಬೇಕಾದ ಅಗತ್ಯವಿದೆ. ಪಕ್ಷಕ್ಕೆ ಲಾಭವಾಗುತ್ತದೆಯೆಂದು ದೇಶಕ್ಕೆ ಹಾನಿ ಮಾಡಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ರಾಜ್ಯದ ರೈತರು ಮತ್ತು ಜನತೆ ಒಂದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂದು ರಾಜ್ಯ ತರುವ ಕಾನೂನು ಗೋಮಾಂಸ ಸೇವನೆಯ ವಿರುದ್ಧವಲ್ಲ ಅಥವಾ ಗೋಹತ್ಯೆಯ ವಿರುದ್ಧವೂ ಅಲ್ಲ. ಬದಲಿಗೆ ರೈತರು ತಮ್ಮ ಜಾನುವಾರುಗಳನ್ನು ಮಾರುವ ಹಕ್ಕನ್ನು ಅವರಿಂದ ಕಿತ್ತುಕೊಳ್ಳುವುದಕ್ಕಾಗಿ ಈ ಕಾನೂನನ್ನು ಜಾರಿಗೊಳಿಸುತ್ತಿದೆ. ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳುವಂತೆ ‘ದನದ ಮಾಂಸ ಮಾರಾಟ, ಸೇವನೆಗೆ ಯಾವುದೇ ನಿರ್ಬಂಧವಿಲ್ಲ’. ಈ ಕಾನೂನಿನಿಂದ ಮಾಂಸ ಪೂರೈಕೆಯಲ್ಲಿ ಯಾವ ವ್ಯತ್ಯಯವೂ ಆಗುವುದಿಲ್ಲ. ಯಾಕೆಂದರೆ, ಮುಂದಿನ ದಿನಗಳಲ್ಲಿ ಮಾಂಸ ಪೂರೈಕೆಯ ಗುತ್ತಿಗೆಯನ್ನು ಬೃಹತ್ ಕಾರ್ಪೊರೇಟ್ ಸಂಸ್ಥೆಗಳೇ ವಹಿಸಿಕೊಳ್ಳಲಿವೆ. ಈಗಾಗಲೇ ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮುಂದೆಯೂ ಈ ಸ್ಥಾನವನ್ನು ದೇಶ ಕಾಪಾಡಿಕೊಂಡು ಹೋಗುತ್ತದೆ.

ಯಾಕೆಂದರೆ, ಗೋಮಾಂಸ ರಫ್ತು ಉದ್ಯಮದಲ್ಲಿ ಬಿಜೆಪಿಯೂ ಸೇರಿದಂತೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಇದ್ದಾರೆ. ಕೋಟಿಗಟ್ಟಲೆ ಹಣವನ್ನು ತಂದುಕೊಡುವ ಉದ್ಯಮವನ್ನು ಮುಚ್ಚಲು ಯಾವ ಉದ್ಯಮಿಗಳೂ ಸಿದ್ಧರಿರುವುದಿಲ್ಲ. ಸರಕಾರ ಮಾಡಿರುವ ಕಾನೂನಿನ ಪ್ರಕಾರ, ಮಾರಾಟ ಮಾಡುವ ಅಥವಾ ಕಸಾಯಿಖಾನೆಯಲ್ಲಿ ಹತ್ಯೆ ಮಾಡುವ ಹಸು 13 ವರ್ಷ ದಾಟಿರಬೇಕು. ಆದರೆ ರಫ್ತಾಗುವ ಮಾಂಸ ಅತ್ಯಂತ ಉತ್ತಮ ಗುಣಮಟ್ಟವನ್ನು ಹೊಂದಿರಬೇಕು. ಇಲ್ಲವಾದರೆ, ಆಯಾ ದೇಶಗಳು ಆ ಮಾಂಸವನ್ನು ತಿರಸ್ಕರಿಸುತ್ತವೆ. ಹಾಗಾದರೆ, ರಫ್ತು ಮಾಡಲು ಇವರಿಗೆ ಆರೋಗ್ಯವಂತ ಹಸುವನ್ನು ಪೂರೈಸುವವರು ಯಾರು ಎನ್ನುವ ದೊಡ್ಡ ಪ್ರಶ್ನೆಯೊಂದು ಎದುರಾಗುತ್ತದೆ. ಗೋಹತ್ಯೆಯ ನಿಷೇಧದ ಹೆಸರಿನಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು ಎನ್ನುವುದಕ್ಕೆ ಈ ಪ್ರಶ್ನೆಯಲ್ಲೇ ಉತ್ತರವಿದೆ.

ಗೋಹತ್ಯೆ ಕಾಯ್ದೆಯಿಂದ ನಿಜಕ್ಕೂ ಸಂತ್ರಸ್ತರಾಗುವವರು ಯಾರು? ಈ ಕಾಯ್ದೆ ತಂದಿರುವುದು, ರೈತರು ತಮ್ಮ ದನಗಳನ್ನು ಬಹಿರಂಗವಾಗಿ ಮಾರಾಟ ಮಾಡದಂತೆ ತಡೆಯುವುದಕ್ಕಾಗಿಯೇ ಹೊರತು, ಗೋಮಾಂಸ ಸೇವನೆಯನ್ನು ತಡೆಯುವುದಕ್ಕಾಗಿ ಅಲ್ಲ. ಇಂದು ದೇಶದಲ್ಲಿ ಗೋವನ್ನು ಪೂಜಿಸುವ ಬ್ರಾಹ್ಮಣರು ಗೋವನ್ನು ಸಾಕುವುದಿಲ್ಲ. ಪೂಜಿಸುವುದಕ್ಕಾಗಿಯೇ ಗೋವನ್ನು ಸಾಕುವ ಪರಿಪಾಠವೂ ನಮ್ಮಲ್ಲಿಲ್ಲ. ಗೋವುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳೂ ಗೋವುಗಳನ್ನು ಸಾಕುವುದಿಲ್ಲ. ಗೋವುಗಳನ್ನು ಸಾಕುವವರು ಹೈನೋದ್ಯಮವನ್ನು ಅವಲಂಬಿಸಿದ ಗ್ರಾಮೀಣ ರೈತರು. ಅವರಿಗೆ ಈ ಉದ್ಯಮದಲ್ಲಿ ಅದರ ಸೆಗಣಿ, ಮೂತ್ರ, ಮಾಂಸ, ಚರ್ಮ, ಎಲುಬು ಎಲ್ಲವೂ ವ್ಯವಹಾರದ ಭಾಗವೇ ಆಗಿದೆ. ಮಾಂಸಾಹಾರಿಗಳು ಕೂಡ. ಗೊಡ್ಡು ಹಸುಗಳು, ಹಾಲು ಕೊಡದ ಹಸುಗಳನ್ನು ಮಾರಿ ಅದರಿಂದ ಬಂದ ಹಣವನ್ನು ತಮ್ಮ ಉದ್ಯಮಕ್ಕೆ ಮರು ಬಳಕೆ ಮಾಡುತ್ತಾರೆ. ಸರಕಾರದ ಕಾಯ್ದೆಯಿಂದಾಗಿ ರೈತರು ಈ ಅನುಪಯುಕ್ತ ಹಸುವನ್ನು ಮಾರುವ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಹಟ್ಟಿಯಲ್ಲೂ ಸಾಕಲಾರದೆ ಅದನ್ನು ಒಂದೋ ಕಾಡಿಗೆ ಬಿಡಬೇಕು, ಇಲ್ಲವೇ ವಿಷಕೊಟ್ಟು ಸಾಯಿಸಬೇಕು ಎನ್ನುವ ಪರಿಸ್ಥಿತಿ ಎದುರಾಗುತ್ತದೆ.

ಸರಕಾರದ ನಿಯಮಗಳ ವ್ಯಾಪ್ತಿಯಲ್ಲಿ ಬರುವ ಗೋವುಗಳನ್ನು ಮಾರುವ ಅವಕಾಶವೂ ರೈತರಿಗೆ ಇಲ್ಲ. ಆಗಲೂ ನಕಲಿ ಗೋರಕ್ಷಕರ ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ. ಪೊಲೀಸರೇನಾದರೂ ಪ್ರಕರಣ ದಾಖಲಿಸಿದರೆ ಜೀವನ ಪರ್ಯಂತ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ. ಅಂತಿಮವಾಗಿ, ಈ ಉದ್ಯಮದ ಸಹವಾಸವೇ ಬೇಡ ಎಂದು ಹಟ್ಟಿಗಳನ್ನು ಅವರು ಅನಿವಾರ್ಯವಾಗಿ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಬಹುಶಃ ಸರಕಾರದ ಉದ್ದೇಶವೂ ಇದೇ ಆಗಿದೆ. ಸಣ್ಣ ಪುಟ್ಟ ರೈತರ ಕೈಯಿಂದ ಹೈನೋದ್ಯಮವನ್ನು ಕಿತ್ತುಕೊಂಡು ಅದನ್ನು ಬೃಹತ್ ಕಾರ್ಪೊರೇಟ್ ಶಕ್ತಿಗಳಿಗೆ ಒಪ್ಪಿಸುವ ಭಾಗವಾಗಿ ಈ ಕಾನೂನನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಈ ಕಾಯ್ದೆ ಜಾರಿಯಾದರೆ ಗೋರಕ್ಷಕರ ವೇಷದಲ್ಲಿರುವ ಸಂಘಪರಿವಾರದ ಕಾರ್ಯಕರ್ತರಿಗೆ, ಪುಂಡರಿಗೆ, ಗೂಂಡಾಗಳಿಗೆ ಹಬ್ಬವೇ ಸರಿ.

ದನ ಸಾಕುವ ರೈತರಿಗೆ ಕಿರುಕುಳ ಕೊಟ್ಟು ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ನೇರವಾಗಿ ಕಸಾಯಿಖಾನೆಗೆ ಸಾಗಿಸಿ ಹಣ ಮಾಡುವುದಕ್ಕೆ ಇದು ದಾರಿ ಮಾಡಿಕೊಡುತ್ತದೆ. ಗೋಶಾಲೆಗಳು ಈಗಾಗಲೇ ಅವ್ಯವಹಾರದ ಕೂಪಗಳಾಗಿವೆ. ಗೋಶಾಲೆಗಳಿಗೆಂದು ಸಾಗಿಸಿದ ಬಹುತೇಕ ಹಸುಗಳು ಬೃಹತ್ ಗೋಮಾಂಸ ಸಂಸ್ಕರಣ ಘಟಕಕ್ಕೆ ಸಾಗುತ್ತವೆ ಎಂಬ ಆರೋಪ ಈಗಾಗಲೇ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗೋಶಾಲೆಗಳು ತೆರೆಯಲಿವೆ. ಅತ್ತ ಸರಕಾರದಿಂದಲೂ ಅನುದಾನ ಪಡೆಯುತ್ತಾ, ಇತ್ತ ರೈತರಿಂದ ಪುಕ್ಕಟೆಗೋವುಗಳನ್ನು ತಮ್ಮದಾಗಿಸಿಕೊಂಡು ಕೋಟ್ಯಂತರ ರೂಪಾಯಿ ಎಣಿಸುವ ದಂಧೆ ಬೆಳೆಯಲಿದೆ. ರೈತರನ್ನು ಅಳಿಸಿ, ಪುಂಡು ಪೋಕರಿಗಳನ್ನು, ಕಾರ್ಪೊರೇಟ್ ದನಿಗಳನ್ನು ಸಾಕುವ ಈ ಕಾನೂನಿಂದಾಗಿ ಗ್ರಾಮೀಣ ಭಾರತ ಇನ್ನಷ್ಟು ಸರ್ವನಾಶದೆಡೆಗೆ ಸಾಗಲಿದೆ. ಸಾವರ್ಕರ್ ಹೇಳಿದ ‘‘ಗೋರಕ್ಷಣೆಯೇ ಧರ್ಮ, ಸ್ವಧರ್ಮೇ ನಿಧನಂ ಶ್ರೇಯಃ ಎನ್ನುವಾಗ ನಮ್ಮ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಸ್ಥಿತಿಗೆ ತಲುಪಬಾರದು...’’ ಎಂಬ ಸಂದೇಶವನ್ನು ತುರ್ತಾಗಿ ಬಿಜೆಪಿಯ ನಾಯಕರಿಗೆ ಯಾರಾದರೂ ತಲುಪಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News