ಗ್ರಾಮಸ್ವರಾಜ್ಯದ ಕನಸು ನನಸಾಗಲಿ

Update: 2020-12-31 06:12 GMT

ಗ್ರಾಮ ಪಂಚಾಯತ್ ಚುನಾವಣೆ ಮುಗಿದು, ಫಲಿತಾಂಶವೂ ಹೊರ ಬಿದ್ದಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಪ್ರತಿನಿಧಿಸಿ ಸ್ಪರ್ಧಿಸುವಂತಿಲ್ಲ. ಹೀಗಿದ್ದರೂ, ವಿವಿಧ ಪಕ್ಷಗಳು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ ಮಾತ್ರವಲ್ಲ, ಸೋಲು ಗೆಲುವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಯೂ ತೆಗೆದುಕೊಳ್ಳುತ್ತವೆ. ಗ್ರಾಮಪಂಚಾಯತ್ ಚುನಾವಣೆಯ ಉದ್ದೇಶದ ಮೇಲೆ ಈ ಪಕ್ಷಗಳಿಂದಾಗುವ ಹಾನಿ ಒಂದೆರಡಲ್ಲ. ಗ್ರಾಮಪಂಚಾಯತ್ ಚುನಾವಣೆಯಲ್ಲಿ ಮತದಾರರು, ಅಭ್ಯರ್ಥಿಗಳ ನಡುವೆ ಯಾವುದೇ ಪರದೆಗಳಿರುವುದಿಲ್ಲ. ಅಭ್ಯರ್ಥಿ ನೇರವಾಗಿ ಮತದಾರರೊಂದಿಗೆ ಸಂಬಂಧವನ್ನು ಹೊಂದಿರುತ್ತಾನೆ. ಅಭ್ಯರ್ಥಿಯ ಯೋಗ್ಯತೆ, ಆತನ ಸಾಮರ್ಥ್ಯದ ಕುರಿತಂತೆ ಮತದಾರರಿಗೆ ಸ್ಪಷ್ಟ ಅರಿವಿರುತ್ತದೆ.

ಇಲ್ಲಿ ಮತದಾರರು ಆತ ಯಾವ ಪಕ್ಷದಿಂದ ಸ್ಪರ್ಧಿಸಿದ್ದಾನೆ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪಕ್ಷ ಯಾವುದಾದರೂ, ಅಭ್ಯರ್ಥಿ ನಿಷ್ಪ್ರಯೋಜಕನಾಗಿದ್ದರೆ ಆತನನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಮತದಾರರೊಂದಿಗೆ ಬೆರೆಯುವ, ವಿನಯ, ವಿಧೇಯತೆಯಿರುವ ಅಭ್ಯರ್ಥಿಯಷ್ಟೇ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಇದಕ್ಕೆ ಪೂರಕವಾಗಿ, ಯಾವುದೇ ಪಕ್ಷಗಳ ಚಿಹ್ನೆಗಳನ್ನೂ ಪಂಚಾಯತ್ ಚುನಾವಣೆಯಲ್ಲಿ ಬಳಸುವಂತಿಲ್ಲ. ಆದುದರಿಂದಲೇ, ಈ ದೇಶದಲ್ಲಿ ಒಂದಿಷ್ಟು ಪಾರದರ್ಶಕವಾಗಿ ನಡೆಯುವ ಚುನಾವಣೆಯಿದ್ದರೆ ಗ್ರಾಮಪಂಚಾಯತ್ ಚುನಾವಣೆಯೇ ಆಗಿದೆ. ಯಾವುದೇ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುವಂತಿಲ್ಲ ಎನ್ನುವ ಸ್ಪಷ್ಟ ನಿರ್ದೇಶನವನ್ನು ಚುನಾವಣಾ ಆಯೋಗ ನೀಡಿದ್ದರೂ, ಈ ಬಾರಿಯೂ ವಿವಿಧ ಪಕ್ಷಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಾಗಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಗ್ರಾಮಪಂಚಾಯತ್‌ನ ನಿಯಂತ್ರಣ ತಮ್ಮ ಕೈಯಲ್ಲಿರುವುದು ಬಹುತೇಕ ರಾಜಕೀಯ ಪಕ್ಷಗಳಿಗೆ ಅತ್ಯಗತ್ಯವಾಗಿದೆ.

ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಸಂದರ್ಭದಲ್ಲಿ ಗ್ರಾಮಪಂಚಾಯತ್ ಚುನಾವಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ವ್ಯಾಪಕ ಕಾರ್ಯಕರ್ತರನ್ನು ತಯಾರಿಸುವುದಕ್ಕೂ ಈ ಚುನಾವಣೆಯನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತವೆ. ಗ್ರಾಮಪಂಚಾಯತ್ ಸದಸ್ಯರಿಗೆ ಮತದಾರರೊಂದಿಗೆ ನೇರ ಸಂಪರ್ಕವಿರುವುದರಿಂದ, ಭವಿಷ್ಯದ ವಿಧಾನಸಭಾ ಚುನಾವಣೆಗೆ ಅನುಕೂಲವಾಗುತ್ತದೆಯೆನ್ನುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಗ್ರಾಮೀಣ ಪ್ರದೇಶದ ಜನರಿಗೆ ಅಭಿವೃದ್ಧಿಯೆನ್ನುವುದು ತಮ್ಮ ಗ್ರಾಮದ ರಸ್ತೆ, ನೀರು, ವಿದ್ಯುತ್ ಇತ್ಯಾದಿಗಳಿಗಷ್ಟೇ ಸೀಮಿತವಾಗಿರುತ್ತದೆ. ಯಾರು ಇದನ್ನು ಮಾಡಿಕೊಡುತ್ತಾರೆಯೋ ಅವರನ್ನು ಜನರು ಹಿಂಬಾಲಿಸುತ್ತಾರೆ. ಆದುದರಿಂದ, ಗ್ರಾಮಪಂಚಾಯತ್‌ನಲ್ಲಿ ಆಯಾ ಪಕ್ಷಗಳ ಪ್ರತಿನಿಧಿಗಳ ನಿಯಂತ್ರಣವಿದ್ದರೆ ಅದನ್ನು ಭವಿಷ್ಯದಲ್ಲಿ ಮತಗಳಾಗಿ ನಗದೀಕರಿಸಬಹುದು ಎನ್ನುವ ದೂರಾಲೋಚನೆ ಮತ್ತು ದುರಾಲೋಚನೆಗಳೆರಡೂ ರಾಜಕೀಯ ಪಕ್ಷಗಳಲ್ಲಿ ಇರುತ್ತವೆ. ಆದುದರಿಂದ, ವಿವಿಧ ರಾಜಕೀಯ ನಾಯಕರು ಗ್ರಾಮಪಂಚಾಯತ್‌ನೊಳಗೆ ತಮ್ಮ ಮೂಗು ತೂರಿಸಿ, ಚುನಾವಣೆಯ ಉದ್ದೇಶವನ್ನು ಕೆಡಿಸುತ್ತಾ ಬಂದಿದ್ದಾರೆ. ಹಲವೆಡೆ, ಈ ಬಾರಿ ಮತದಾರರಿಗೆ ಹಣ ಹಂಚಿರುವ ಕುರಿತಂತೆಯೂ ವರದಿಯಾಗಿದೆೆ. ಜೊತೆಗೆ ಗೋಹತ್ಯೆ, ಪಾಕಿಸ್ತಾನ, ಲವ್‌ಜಿಹಾದ್ ಇತ್ಯಾದಿಗಳನ್ನೂ ಈ ಚುನಾವಣೆಯಲ್ಲಿ ತುರುಕಲು ಕೆಲವರು ಹವಣಿಸಿದ್ದಾರೆ. ಅಭಿವೃದ್ಧಿಯ ಸ್ಥಾನದಲ್ಲಿ ಭಾವನಾತ್ಮಕವಾದ ವಿಷಯಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ್ದಾರೆ. ಹಲವೆಡೆ ರಾಜಕೀಯ ಪಕ್ಷಗಳ ನಡುವೆ ತಿಕ್ಕಾಟಗಳು ನಡೆದಿವೆ. ಹಿಂಸಾಚಾರ ಭುಗಿಲೆದ್ದಿದೆ. ಇಷ್ಟೆಲ್ಲಾ ಆದರೂ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆ ಭಾಗಶಃ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದೆ ಎನ್ನುವುದರಲ್ಲಿ ಅಡ್ಡಿಯಿಲ್ಲ.

ಕೊರೋನ ಮತ್ತು ಲಾಕ್‌ಡೌನ್ ದುಷ್ಪರಿಣಾಮ ಗ್ರಾಮೀಣ ಪ್ರದೇಶದ ಜನರ ಮೇಲೂ ಬಿದ್ದಿದೆ. ರೈತರೂ ತೀರಾ ಸಂಕಟದಲ್ಲಿರುವ ಸಮಯವಿದು. ಗೋ ಹತ್ಯೆ ಕಾನೂನು ರೈತರ ಗಾಯಗಳಿಗೆ ಬರೆ ಎಳೆದಿದೆ. ತಮ್ಮದೇ ಗೋವುಗಳನ್ನು ಸಂತೆಯಲ್ಲಿ ಮಾರಲಾಗದೆ ಹತಾಶರಾಗಿದ್ದಾರೆ. ಗೋವುಗಳ ಜೊತೆಗೆ ಜಾನುವಾರು ಸಂತೆಗೆ ಬಂದರೆ, ಗೋವುಗಳನ್ನು ಕೊಳ್ಳುವವರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಣ್ಣೀರಿಟ್ಟು ಮಾಧ್ಯಮಗಳ ಜೊತೆಗೆ ಸಂಕಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾಗುವ ಅರ್ಹ ಅಭ್ಯರ್ಥಿಯಷ್ಟೇ ತನ್ನ ಜನರ ಕಣ್ಣೀರನ್ನು, ಸಂಕಟಗಳನ್ನು ಅರಿಯಬಲ್ಲ. ಅರಿತು ಅವರ ನೋವುಗಳನ್ನು ರಾಜಧಾನಿಗೆ ತಲುಪಿಸಬಲ್ಲ. ಆದುದರಿಂದ ಈ ಬಾರಿಯ ಚುನಾವಣೆ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಫಲಿತಾಂಶ ತೀರಾ ನಿರಾಶೆಯನ್ನೇನೂ ತಂದಿಲ್ಲ. ಗೆದ್ದವರನ್ನೆಲ್ಲ ‘ನಾವು ಬೆಂಬಲಿಸಿದ ಅಭ್ಯರ್ಥಿಗಳು’ ಎಂದು ನಿರೂಪಿಸಲು ರಾಜಕೀಯ ಪಕ್ಷಗಳು ಹರ ಸಾಹಸ ಮಾಡುತ್ತಿವೆ. ಬಿಜೆಪಿಯಂತೂ ‘ನಮ್ಮ ಪಕ್ಷ ಸಾಧನೆ ಮಾಡಿದೆ’ ಎಂದು ಬಹಿರಂಗ ಹೇಳಿಕೆ ನೀಡುತ್ತಿದೆ. ಅದೇನೇ ಇರಲಿ, ಈ ಬಾರಿ ಯುವಕರು ಮತದಾನದಲ್ಲಿ ಮತ್ತು ಸ್ಪರ್ಧೆಯಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದಾರೆ ಎನ್ನುವುದು ಬಹುಮುಖ್ಯ ಅಂಶವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಜಾಗೃತಗೊಂಡಿದ್ದಾರೆ. ಯುವಕರು ನಿರುದ್ಯೋಗದ ದೊಡ್ಡ ಸಂತ್ರಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯ ಕುರಿತಂತೆ ಅವರೆಲ್ಲ ಗಂಭೀರವಾಗಿ ಆಲೋಚಿಸುವಂತಾಗಿದೆ. ಆಯ್ಕೆಯಾದವರಲ್ಲಿ ಯುವಕರ ಸಂಖ್ಯೆ ಹೆಚ್ಚಿರುವುದು ಸಮಾಧಾನಕರ ಸಂಗತಿ. ಹಾಗೆಯೇ ರಾಜಕೀಯ ಪಕ್ಷಗಳು ಭಾವನಾತ್ಮಕ ವಿಷಯಗಳನ್ನು ಗ್ರಾಮಪಂಚಾಯತ್‌ನೊಳಗೆ ತಂದು ಗ್ರಾಮ ಸೌಹಾರ್ದವನ್ನು ಕೆಡಿಸುವುದಕ್ಕೆ ಪ್ರಯತ್ನಿಸಿವೆಯಾದರೂ ಅದರಲ್ಲಿ ದೊಡ್ಡ ಯಶಸ್ಸನ್ನು ಕಂಡಿಲ್ಲ. ಗೆದ್ದವರು ಯಾವುದೇ ಪಕ್ಷದ ಬೆಂಬಲವನ್ನು ಪಡೆದಿದ್ದರೂ, ಚುನಾವಣೆಯಲ್ಲಿ ತಮ್ಮ ವ್ಯಕ್ತಿತ್ವದ ಕಾರಣಕ್ಕಾಗಿಯೇ ಗೆದ್ದಿದ್ದೇವೆ ಎನ್ನುವುದನ್ನು ಮರೆಯಬಾರದು. ಆದುದರಿಂದ, ಗೆದ್ದವರೆಲ್ಲರೂ ಒಂದಾಗಿ ಪಕ್ಷಭೇದ ಮರೆತು ತಮ್ಮ ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗಿದೆ. ಗ್ರಾಮದ ಸೌಹಾರ್ದವನ್ನು ಕೆಡಿಸಿ ರಾಜಕೀಯ ನಡೆಸಲು ಸಂಚು ನಡೆಸುವ ರಾಜಕೀಯ ಪಕ್ಷಗಳ ನಾಯಕರಿಗೆ ಗ್ರಾಮದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು. ಚುನಾವಣೆ ಯಶಸ್ವಿಯಾಗಿ ನಡೆದಾಕ್ಷಣ ಗ್ರಾಮಗಳು ಉದ್ಧಾರವಾಗುವುದಿಲ್ಲ. ಅಭಿವೃದ್ಧಿಗೆ ಸಂಬಂಧಿಸಿ ಆಯಾ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚು ಅಧಿಕಾರವನ್ನು ನೀಡಬೇಕು. ಹೆಚ್ಚು ಹೆಚ್ಚು ಅನುದಾನಗಳನ್ನು ನೀಡಬೇಕು. ಗ್ರಾಮಪಂಚಾಯತ್ ಅಧ್ಯಕ್ಷರು ಶಾಸಕರ ಅಥವಾ ಸಂಸದರ ಜೀತದಾಳುಗಳು ಎಂದು ಸರಕಾರ ಭಾವಿಸಬಾರದು. ಅವರಿಗೆ ಸ್ವತಂತ್ರವಾಗಿ ಕಾರ್ಯಾಚರಿಸುವ ಅವಕಾಶವನ್ನು ನೀಡಬೇಕು. ಆಗ ಮಾತ್ರ ಗಾಂಧೀಜಿಯ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News