2020: ಇನ್ನೂ ಬದುಕಿ ಉಳಿದಿರುವುದೇ ಸಾಧನೆ!

Update: 2021-01-01 04:58 GMT

21ನೇ ಶತಮಾನಕ್ಕೆ ಕಾಲಿಟ್ಟು 20 ವರ್ಷಗಳು ಪೂರ್ಣಗೊಂಡವು. 20ನೇ ಶತಮಾನದ ಅಂತ್ಯದಲ್ಲಿ ಭಾರತವೂ ಸೇರಿದಂತೆ ವಿಶ್ವ 21ನೇ ಶತಮಾನದ ಕುರಿತಂತೆ ಭಾರೀ ಕನಸುಗಳನ್ನು ಕಂಡಿತ್ತು. ವಿಶ್ವದ ಹಸಿವುಗಳೆಲ್ಲ ನಿರ್ನಾಮವಾಗಿ ಎಲ್ಲರೂ ಕಂಪ್ಯೂಟರ್ ಜಗತ್ತಿನ ಸುಖದ ಸುಪ್ಪತ್ತಿಗೆಯಲ್ಲಿ ತೇಲಲಿದ್ದಾರೆ ಎನ್ನುವ ಕನಸುಗಳನ್ನು ಸರಕಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭರ್ಜರಿಯಾಗಿ ಮಾರಾಟ ಮಾಡಿದ್ದರು. ಭಾರತದಲ್ಲಿ ಅದಾಗಲೇ ಅಂದಿನ ಪ್ರಧಾನ ಮಂತ್ರಿ ರಾಜೀವ್‌ಗಾಂಧಿಯವರಿಂದ ಕಂಪ್ಯೂಟರ್ ಯುಗದ ಉದ್ಘಾಟನೆಯಾಗಿತ್ತು. ಅವರು ಬಿತ್ತಿದ್ದ ಬೀಜ ಮೊಳಕೆಯೊಡೆದು ಮರವಾಗಿ ಇಂದು ಚೆನ್ನಾಗಿಯೇ ಫಸಲನ್ನು ನೀಡುತ್ತಿದೆ. ಒಂದೊಮ್ಮೆ ಶ್ರೀಮಂತರ ಮನೆಯಲ್ಲಷ್ಟೇ ಕಂಗೊಳಿಸುತ್ತಿದ್ದ ‘ದೂರವಾಣಿ’ ಇಂದು ಪ್ರತಿ ವ್ಯಕ್ತಿಯ ಕೈಯಲ್ಲಿ ರಾರಾಜಿಸುತ್ತಿದೆ. ಐಟಿ ಕ್ಷೇತ್ರದಲ್ಲಿ ಭಾರತ ಭರ್ಜರಿ ಸಾಧನೆಗಳನ್ನೇ ಮಾಡಿದೆ. ತಂತ್ರಜ್ಞಾನದಲ್ಲಿ ಮಿಂಚಿನ ವೇಗದ ಸಾಧನೆ ಕಳೆದ 20 ವರ್ಷಗಳಲ್ಲಿ ನಡೆದಿದೆಯಾದರೂ, ಅವುಗಳಿಗೆ ಈ ದೇಶದ ಹಸಿವು, ಅಪೌಷ್ಟಿಕತೆಯನ್ನು ನಿವಾರಿಸಲು ಸಾಧ್ಯವಾಗಲಿಲ್ಲ. 

ತಂತ್ರಜ್ಞಾನಗಳಿಗೆ ಸವಾಲು ಹಾಕುವಂತೆ ಇತ್ತೀಚಿನ ದಿನಗಳಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ. ಈ 21ನೇ ಶತಮಾನದಲ್ಲೂ ಮಲದ ಗುಂಡಿಯಲ್ಲಿ ಬಿದ್ದು ಸಾಯುವವರ ಸಂಖ್ಯೆ ಇಳಿಕೆಯಾಗಿಲ್ಲ. ಎಲ್ಲ ತಂತ್ರಜ್ಞಾನಗಳನ್ನು ಅಣಕಿಸುವಂತೆ ಮಲ ಹೊರುವ ಪದ್ಧತಿ ದೇಶದಲ್ಲಿ ಅಸ್ತಿತ್ವದಲ್ಲಿದೆ. ತಂತ್ರಜ್ಞಾನ, ವಿಜ್ಞಾನ ಸಣ್ಣ ಸಂಖ್ಯೆಯ ಶ್ರೀಮಂತರ ಊಳಿಗ ಮಾಡುತ್ತಿದೆಯೇ ಹೊರತು, ಅದು ರೈತರಿಗೆ, ಕಾರ್ಮಿಕರಿಗೆ ನೆರವಾಗುತ್ತಿರುವುದು ತೀರಾ ಕಡಿಮೆ. ಪರಿಣಾಮವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. 21ನೇ ಶತಮಾನದ 20 ವರ್ಷಗಳನ್ನು ಮುಗಿಸಿ 21ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ, 21ನೇ ಶತಮಾನದ ಕುರಿತಂತೆ ನಾವು ಕಂಡ ಕನಸುಗಳನ್ನು ಅಣಕಿಸುವಂತೆ ರೈತರು ದಿಲ್ಲಿಯ ಬೀದಿಯಲ್ಲಿ ಚಳಿಗೆ ಒಬ್ಬೊಬ್ಬರಾಗಿ ಸಾಯುತ್ತಿದ್ದಾರೆ. ವಲಸೆ ಕಾರ್ಮಿಕರು ದಿಕ್ಕೆಟ್ಟು ಕೂತಿದ್ದಾರೆ. 2020ನೇ ವರ್ಷದಲ್ಲಿ ನಾವು ಇನ್ನೂ ಬದುಕಿ ಉಳಿದಿದ್ದೇವೆ ಎನ್ನುವುದೇ ನಮ್ಮ ಸಾಧನೆ ಎಂದು ತೃಪ್ತಿ ಪಟ್ಟುಕೊಳ್ಳಬೇಕಾದ ಸನ್ನಿವೇಶದಲ್ಲಿದ್ದೇವೆ.

2020ನ್ನು ಇಡೀ ವಿಶ್ವವೇ ಅತ್ಯಂತ ದಯನೀಯವಾಗಿ ಕಳೆಯಿತು. ಕೊರೋನ ವೈರಸ್ ಜಗತ್ತನ್ನು ತಲ್ಲಣಿಸುವಂತೆ ಮಾಡಿತು. ಆದರೂ ಅವರು ಎದೆಗುಂದಲಿಲ್ಲ. ಆದರೆ ಭಾರತ ಮಾತ್ರ ಕೊರೋನಾವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದ ದೇಶವೆಂದು ಗುರುತಿಸಲ್ಪಟ್ಟಿತು. ಎಲ್ಲ ದೇಶಗಳೂ ಈ ಅವಧಿಯಲ್ಲಿ ಲಾಕ್‌ಡೌನ್‌ಗಳನ್ನು ವಿಧಿಸಿದವು ನಿಜ. ಆದರೆ ಭಾರತದಲ್ಲಿ ಪೂರ್ವ ಯೋಜನೆಗಳಿಲ್ಲದ ಲಾಕ್‌ಡೌನ್ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಿತು. ಫೆಬ್ರವರಿಯಲ್ಲೇ ‘ಕೊರೋನಸೋಂಕಿನ’ ಕುರಿತಂತೆ ವಿಶ್ವಸಂಸ್ಥೆ ಎಚ್ಚರಿಸಿತ್ತು. ಚೀನಾದಲ್ಲಿ ಅದಾಗಲೇ ಒಬ್ಬೊಬ್ಬರಾಗಿ ಕೊರೋನಾಗೆ ಬಲಿಯಾಗುತ್ತಿದ್ದರು. ಅಮೆರಿಕವನ್ನೂ ಅದು ಹಬ್ಬಿತ್ತು. ಸರಕಾರ ತಕ್ಷಣ ವಿಮಾನ ನಿಲ್ದಾಣಗಳಿಗೆ ನಿರ್ಬಂಧವನ್ನು ವಿಧಿಸಿದ್ದರೆ, ಆಗಮಿಸುತ್ತಿರುವ ಸರ್ವ ವಿದೇಶಿಗರಿಗೂ ಕಡ್ಡಾಯ ಕ್ವಾರಂಟೈನ್ ವಿಧಿಸಿದ್ದರೆ ಇಡೀ ದೇಶಕ್ಕೆ ಲಾಕ್‌ಡೌನ್ ವಿಧಿಸಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಮುಗಿಯುವವರೆಗೂ ಸರಕಾರ ಕೊರೋನವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. 

ಇದಾದ ಬಳಿಕ, ತನ್ನ ರಾಜಕೀಯ ದುರುದ್ದೇಶಕ್ಕಾಗಿ ದಿಲ್ಲಿ ಗಲಭೆಯೊಂದನ್ನು ಆಯೋಜಿಸಿತ್ತು. ಇಡೀ ವಿಶ್ವ ಕೊರೋನಾವನ್ನು ಎದುರಿಸಲು ತಯಾರಿ ನಡೆಸುತ್ತಿರುವಾಗ, ದೇಶದೊಳಗೆ ಸರಕಾರಿ ಪ್ರಾಯೋಜಕತ್ವದಲ್ಲಿ ಕೋಮು ವೈರಸ್‌ಗಳನ್ನು ಹಂಚುವ ಕೆಲಸ ಬಿರುಸಿನಿಂದ ನಡೆಯುತ್ತಿತ್ತು. ಇದಾದ ಬಳಿಕವೂ ಸರಕಾರ ಕೊರೋನದ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ‘ಕೊರೋನಾದಲ್ಲೂ ಧರ್ಮ’ವನ್ನು ಹುಡುಕಿತು. ‘ತಬ್ಲೀಗಿ ಕೊರೋನ’ ಎನ್ನುವ ಹೊಸ ವೈರಸ್‌ನ್ನು ಸರಕಾರದ ನೇತೃತ್ವದಲ್ಲೇ ಆವಿಷ್ಕರಿಸಲಾಯಿತು. ಕೊರೋನಾವನ್ನು ಬಳಸಿಕೊಂಡು ಜನರನ್ನು ವಿಭಜಿಸಲು ನೋಡಿತು. ಅಂತಿಮವಾಗಿ ಸರಕಾರ ಘೋಷಿಸಿದ ಲಾಕ್‌ಡೌನ್ ದೇಶವನ್ನು ಮತ್ತೆ 20ನೇ ಶತಮಾನಕ್ಕೆ ಅಂದರೆ ಹಿಂದಕ್ಕೆ ಒಯ್ಯಿತು. ವಿಶ್ವದ ಯಾವುದೇ ದೇಶಗಳಲ್ಲಿ ಲಾಕ್‌ಡೌನ್‌ನಿಂದಾಗಿ ‘ಕಾರ್ಮಿಕರ ವಲಸೆ’ಯಂತಹ ದುರಂತಗಳು ಸಂಭವಿಸಿಲ್ಲ. 

ಭಾರತದಲ್ಲಿ ಮಾತ್ರ ನಗರಗಳಲ್ಲಿ ಸೇರಿಕೊಂಡ ಸಹಸ್ರಾರು ಕಾರ್ಮಿಕರು ದಿಗ್ಬಂಧನಕ್ಕೊಳಗಾದರು. ಆಹಾರ, ವಸತಿಗಳ ಸಮಸ್ಯೆಯಿಂದಾಗಿ ಲಾಕ್‌ಡೌನ್ ಘೋಷಿಸಿದ ಕೆಲವೇ ದಿನಗಳಲ್ಲಿ ಕಾರ್ಮಿಕರು ಬೀದಿಗೆ ಬಂದರು. ಲಾಕ್‌ಡೌನ್‌ನ್ನು ಅಣಕಿಸುವಂತೆ ಬಸ್ ‌ನಿಲ್ದಾಣಗಳಲ್ಲಿ, ರಸ್ತೆಗಳಲ್ಲಿ ಹರಿದು ಹಂಚಿ ಹೋದರು. ಅತ್ತ ನಗರಗಳಲ್ಲಿ ಇರಲಾರದೆ, ಇತ್ತ ತಮ್ಮ ಗ್ರಾಮಗಳಿಗೆ ಸಲ್ಲಲಾರದೆ ಅತಂತ್ರರಾದರು. ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದರೂ, ಅಲ್ಲೂ ಅಸ್ಪಶ್ಯರಾಗಿ ಬಯಲಲ್ಲಿ, ಮರಗಳಲ್ಲಿ ಕ್ವಾರಂಟೈನ್ ಅನುಭವಿಸಿದರು.

ರೈಲು ಹಳಿಗಳಿಗೆ ಸಿಲುಕಿ ಹಲವರು ಮೃತಪಟ್ಟರು. ಪ್ರಯಾಣದ ಮಧ್ಯೆ ಹಲವರು ಅಸ್ವಸ್ಥರಾಗಿ ಸತ್ತರು. ರೈಲಿನ ಟಾಯ್ಲೆಟ್‌ಗಳಲ್ಲಿ ಕಾರ್ಮಿಕರ ಮೃತದೇಹಗಳು ಪತ್ತೆಯಾದವು. ಸ್ವಾತಂತ್ರೋತ್ತರ ಭಾರತದಲ್ಲಿ ಕಾರ್ಮಿಕರ ಬದುಕಿನಲ್ಲಿ ಇಂತಹದೊಂದು ಭೀಕರ ದುರಂತ ನಡೆದೇ ಇರಲಿಲ್ಲ. ಇಷ್ಟಾದರೂ ಈ ಕಾರ್ಮಿಕ ಸಾವಿನ ನೈತಿಕ ಹೊಣೆಯನ್ನು ಸರಕಾರ ಹೊತ್ತುಕೊಳ್ಳಲಿಲ್ಲ. ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇದೀಗ ಭಾರತದ ಆರ್ಥಿಕ ಅವ್ಯವಸ್ಥೆ, ಹೆಚ್ಚುತ್ತಿರುವ ಬಡತನ ಇತ್ಯಾದಿಗಳಿಗೆಲ್ಲ ‘ಕೊರೋನ’ವನ್ನೇ ಸರಕಾರ ಹೊಣೆ ಮಾಡುತ್ತಿದೆ. ಆದರೆ ಕೊರೋನಆಗಮಿಸುವ ಮುನ್ನವೇ ಭಾರತದ ಆರ್ಥಿಕತೆ ನೆಲಕಚ್ಚಿತ್ತು. ನೋಟು ನಿಷೇಧ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿತ್ತು. ಗ್ರಾಮೀಣ ಉದ್ಯಮ ಸರ್ವನಾಶವಾಗಿತ್ತು. ಕೊರೋನನಾಶ ಪಡಿಸಲು ಏನೂ ಉಳಿದಿರಲೇ ಇಲ್ಲ. ಚೀನಾದಂತಹ ದೇಶಗಳು ಆರ್ಥಿಕವಾಗಿ ಗಟ್ಟಿಯಾಗಿದ್ದುದರಿಂದ ಕೊರೋನ ದೊಡ್ಡ ದುಷ್ಪರಿಣಾಮಗಳನ್ನು ಉಂಟು ಮಾಡಲಿಲ್ಲ. ಆಘಾತವನ್ನು ತಾಳಿಕೊಳ್ಳುವ ಶಕ್ತಿ ಅವುಗಳಿಗೆ ಸಹಜವಾಗಿಯೇ ಇತ್ತು. ಭಾರತಕ್ಕೆ ಆ ಶಕ್ತಿ ಇದ್ದಿರಲಿಲ್ಲ.

2021ಕ್ಕೆ ಕಾಲಿಡುತ್ತಿರುವ ಸಂಭ್ರಮ ದೇಶದ ಮುಂದಿಲ್ಲ. ಈ ವರ್ಷದ ನಮ್ಮ ಅತಿ ದೊಡ್ಡ ಸಾಧನೆಯೆಂದರೆ ‘ನಾವು ಇನ್ನೂ ಸತ್ತಿಲ್ಲ, ಬದುಕಿದ್ದೇವೆ’ ಎಂದು ಹೇಳಿಕೊಳ್ಳುತ್ತಿರುವುದು. ಹೊಸ ವರ್ಷ ಹೊಸ ನಿರೀಕ್ಷೆಗಳನ್ನೇನೂ ಹುಟ್ಟಿಸಿಲ್ಲ. ಈಗಾಗಲೇ ಕೃಷಿ ನೀತಿಗಳ ವಿರುದ್ಧ ರೈತರು ದಂಗೆಯೆದ್ದಿದ್ದಾರೆ. ಹೊಸ ವರ್ಷದ ಕೊನೆಯ ದಿನವಾದರೂ ಸರಕಾರ ರೈತರ ಅಳಲನ್ನು ಆಲಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅಂತಹದೇನೂ ಸಂಭವಿಸಿಲ್ಲ. ರೈತರ ಪ್ರತಿಭಟನೆ ಹೀಗೆ ಮುಂದುವರಿದರೆ ಇದು ದೇಶವನ್ನು ಅತ್ಯಂತ ಅಪಾಯಕಾರಿ ಸ್ಥಿತಿಗೆ ಒಯ್ಯಲಿದೆ.

ಈ ಕಾರಣದಿಂದಲೇ ಹೊಸ ವರ್ಷವನ್ನು ಆತಂಕದಿಂದ ನಾವು ಎದುರುಗೊಳ್ಳಬೇಕಾಗಿದೆ. ಸರಕಾರ ಜಾರಿಗೆ ತಂದಿರುವ ಜನವಿರೋಧಿ ಕಾಯ್ದೆಗಳೆಲ್ಲ ಬರುವ ದಿನಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿವೆ. ಇದು ಬಡವರನ್ನು, ರೈತರನ್ನು ಎಂತಹ ಸ್ಥಿತಿಗೆ ತಂದು ನಿಲ್ಲಿಸಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನೂ ಇಲ್ಲ. ಆದುದರಿಂದ ಮುಂಬರುವ ವರ್ಷಗಳು ಜನಸಾಮಾನ್ಯರ ಪಾಲಿಗೆ ಇನ್ನಷ್ಟು ಸಂಘರ್ಷದ ವರ್ಷಗಳಾಗಲಿವೆ. ಅದಕ್ಕಾಗಿ ನಮ್ಮನ್ನು ನಾವು ಈಗಲೇ ಸಿದ್ಧಗೊಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News