ವಲಸೆ, ಕೆಲಸದ ವೀಸಾ ಮೇಲಿನ ನಿರ್ಬಂಧ ಮಾರ್ಚ್ ತನಕ ವಿಸ್ತರಿಸಿದ ಡೊನಾಲ್ಡ್ ಟ್ರಂಪ್

Update: 2021-01-01 15:23 GMT

ವಲಸೆ ನಿರ್ಬಂಧಗಳನ್ನು ಮತ್ತೆ 3 ತಿಂಗಳು ವಿಸ್ತರಿಸಿದ ಟ್ರಂಪ್

ವಾಶಿಂಗ್ಟನ್, ಜ. 1: ಹಲವಾರು ಗ್ರೀನ್ ಕಾರ್ಡ್ ಅರ್ಜಿದಾರರು ಮತ್ತು ಉದ್ಯೋಗ ವೀಸಾ ಆಧಾರದಲ್ಲಿ ತಾತ್ಕಾಲಿಕ ವಿದೇಶಿ ಉದ್ಯೋಗಿಗಳು ಅಮೆರಿಕ ಪ್ರವೇಶಿಸುವುದನ್ನು ತಡೆಯುವ ಎರಡು ವಲಸೆ ನಿರ್ಬಂಧಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಈ ವರ್ಷದ ಮಾರ್ಚ್ 31ರವರೆಗೆ ವಿಸ್ತರಿಸಿದ್ದಾರೆ. ಕೊರೋನ ವೈರಸ್‌ನಿಂದಾಗಿ ಜರ್ಝರಿತಗೊಂಡಿರುವ ಆರ್ಥಿಕತೆಗೆ ಚೈತನ್ಯ ನೀಡಲು ಈ ಕ್ರಮ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಲಸೆ ನಿರ್ಬಂಧಗಳನ್ನು ಎಪ್ರಿಲ್ ಮತ್ತು ಜೂನ್ ತಿಂಗಳುಗಳಲ್ಲಿ ಘೋಷಿಸಲಾಗಿತ್ತು ಹಾಗೂ ಅವುಗಳು ಡಿಸೆಂಬರ್ 31ರಂದು ಕೊನೆಗೊಳ್ಳಬೇಕಾಗಿತ್ತು. ಆದರೆ ಈಗ ಈ ನಿರ್ಬಂಧಗಳನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಈ ನಿರ್ಬಂಧಗಳಿಂದಾಗಿ ಹಲವು ಭಾರತೀಯರು ತೊಂದರೆಗೀಡಾಗಿದ್ದಾರೆ.

ಕೆಲವು ನಿರ್ದಿಷ್ಟ ವರ್ಗಗಳ ವಿದೇಶಿ ಉದ್ಯೋಗಿಗಳ ಮೇಲೆ ನಿರ್ಬಂಧ ವಿಧಿಸಿರುವುದನ್ನು ಅಮೆರಿಕದ ಉದ್ಯಮಗಳು ವ್ಯಾಪಕವಾಗಿ ವಿರೋಧಿಸಿವೆ.

ಅದೇ ವೇಳೆ, ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈ ನಿರ್ಬಂಧಗಳನ್ನು ಟೀಕಿಸಿದ್ದಾರೆ. ಆದರೆ, ಅವುಗಳನ್ನು ತಕ್ಷಣ ವಾಪಸ್ ಪಡೆಯಲಾಗುವುದೇ ಎನ್ನುವುದನ್ನು ಅವರು ಈವರೆಗೆ ಹೇಳಿಲ್ಲ.

ಅಧ್ಯಕ್ಷೀಯ ಆದೇಶಗಳ ರೂಪದಲ್ಲಿ ಟ್ರಂಪ್ ನಿಷೇಧಗಳನ್ನು ಹೊರಡಿಸಿದ್ದಾರೆ. ಅವುಗಳನ್ನು ತಕ್ಷಣ ವಾಪಸ್ ಪಡೆಯಬಹುದಾಗಿದೆ.

ಕ್ಯಾಲಿಫೋರ್ನಿಯದ ಫೆಡರಲ್ ನ್ಯಾಯಾಲಯವೊಂದು ಅಕ್ಟೋಬರ್‌ನಲ್ಲಿ ಈ ನಿಷೇಧಗಳಿಗೆ ತಡೆಯಾಜ್ಞೆ ನೀಡಿದೆ. ಬಳಿಕ, ಅಮೆರಿಕದ ಕಾನೂನು ಇಲಾಖೆಯು ಈ ತೀರ್ಪಿನ ವಿರುದ್ಧ 9ನೇ ಸರ್ಕೀಟ್ ಮೇಲ್ಮನವಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಅದರ ವಿಚಾರಣೆ ಜನವರಿ 19ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News