ದೇಶದಲ್ಲಿ ನವ ಪೇಶ್ವೆ ಆಡಳಿತ ಬರುತ್ತಿದೆ: ಮುಂಬೈ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಕೊಲ್ಸೆ ಪಾಟೀಲ್

Update: 2021-01-01 16:20 GMT

ಬೆಂಗಳೂರು, ಜ.1:ದೇಶದಲ್ಲಿ ಆರೆಸ್ಸೆಸ್ ಸೂಚಿತ ಸರಕಾರ ಆಡಳಿತದಲ್ಲಿದ್ದು, ಅವರ ಮಾರ್ಗಸೂಚಿ ಪಾಲನೆ ಮಾಡುತ್ತಿದೆ. ಇದರಿಂದ, ನವ ಪೇಶ್ವೆ ಆಡಳಿತ ಬರುತ್ತಿದೆ ಎಂದು ಮುಂಬೈ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿ.ಜಿ.ಕೊಲ್ಸೆ ಪಾಟೀಲ್ ಹೇಳಿದರು.

ಶುಕ್ರವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಭೀಮಾ ಕೋರೆಗಾಂವ್ ಹೋರಾಟ ಸಮಿತಿ-ಕರ್ನಾಟಕ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿ ಪ್ರತಿರೋಧ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಆರೆಸ್ಸೆಸ್ ಸರಕಾರ ಇದ್ದು, ಸಂಘ ಪರಿವಾರ ಹೇಳಿದಂತೆ ನಡೆಯುತ್ತಿದೆ. ಇದರಿಂದ ಸರಕಾರದ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ನವ ಪೇಶ್ವೆ ಆಡಳಿತ ಬರುತ್ತಿದೆ ಎಂದರು.

ಇತ್ತೀಚಿಗೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳು ಹೆಚ್ಚುತ್ತಿರುವುದು ಆತಂಕಕಾರಿ. ಅಲ್ಲದೆ, ಬಹುತ್ವವನ್ನು ರಕ್ಷಿಸುವ ಗ್ರಂಥವಾದ ಸಂವಿಧಾನವನ್ನು ವಿರೋಧಿಸುವ ವಾತಾವರಣ ಹುಟ್ಟು ಹಾಕಲಾಗಿದೆ. ಇದನ್ನು ಪ್ರಶ್ನಿಸುವವರನ್ನು ‘ನಗರ ನಕ್ಸಲ’ರೆಂದು ಸರಕಾರ ಬಂಧಿಸಿದೆ. ಎಷ್ಟು ಮಂದಿಯನ್ನು ಅವರು ಬಂಧಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಹೊರಗೆ ಅಥವಾ ಒಳಗೆ ಎಲ್ಲೇ ಇದ್ದರೂ ದನಿ ಅಡಗಿಸಲು ಸಾಧ್ಯವಿಲ್ಲ ಎಂದ ಅವರು, ಮನುವಾದ ಹಾಗೂ ಮನಿವಾದ ನಮ್ಮನ್ನು ಆಳುತ್ತಿವೆ. ಇದರ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಗ್ಗೂಡಬೇಕು ಎಂದು ಬಿ.ಜಿ.ಕೊಲ್ಸೆ ಪಾಟೀಲ್ ಕರೆ ನೀಡಿದರು. 

ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಈಗಿನ ಸ್ಥಿತಿಯಲ್ಲಿ ಯಾರನ್ನಾದರೂ ಬಂಧಿಸಬಹುದು. ಭೀಮಾ ಕೋರೆಗಾಂವ್‌ ವಿಚಾರವನ್ನು ಮುಟ್ಟಿದ್ದಾರೆ. ಇದು, ಇಂದಲ್ಲಾ ನಾಳೆ ಪ್ರತಿರೋಧದ ರೂಪ ತಾಳಲಿದೆ ಎಂದು ಹೇಳಿದರು.

ನ್ಯಾಯವಾದಿ ಕ್ಲಿಫ್ಟನ್ ರೊಸಾರಿಯೊ ಮಾತನಾಡಿ, ನಾಳೆ ನಮ್ಮನ್ನೂ ಬಂಧಿಸಬಹುದು. ಏಕೆಂದರೆ, ನಗರ ನಕ್ಸಲರೆಂದು ಬಂಧಿಸಲಾಗಿರುವ 16 ಮಂದಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಈ ರೀತಿ ಸುಳ್ಳು ಪ್ರಕರಣಗಳಲ್ಲಿ ಬಂಧಿಸಿರುವ ನಿರಪರಾಧಿಗಳ ಬಿಡುಗಡೆಗಾಗಿ ಹೋರಾಟ ಅಗತ್ಯ ಎಂದರು. 

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಕೆ.ಶರೀಫಾ, ಬಿಎಸ್ಪಿ ಮುಖಂಡ ಗೋಪಿನಾಥ್, ದಲಿತ ಮುಖಂಡ ಮೋಹನ್ ರಾಜು, ಡಾ.ಕೆ.ಬಿ.ಓಬಳೇಶ್, ಮೈತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News