ಲಾಕ್‍ಡೌನ್ ಮುಗಿದರೂ ಕಲಾವಿದರ ಸಂಕಷ್ಟ ದೂರವಾಗಿಲ್ಲ: ಸಂಗೀತ ನಿರ್ದೇಶಕ ವಿ.ಮನೋಹರ್

Update: 2021-01-01 18:19 GMT

ಬೆಂಗಳೂರು, ಜ.1: ರಾಜ್ಯದಲ್ಲಿ ಕೋವಿಡ್ ಲಾಕ್‍ಡೌನ್ ತೆರವಾದರೂ ಕರಕುಶಲ ಕಾರ್ಮಿಕರ ಸಮಸ್ಯೆ ನಿವಾರಣೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಕರಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳನ್ನು ಕೊಳ್ಳುವ ಮೂಲಕ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಆಟ್ರ್ಸ್ ಮತ್ತು ಕ್ರಾಫ್ಟ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನ ಸಂಕಷ್ಟದಿಂದಾಗಿ ಕಲಾವಿದರುಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ. ಅವರ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ಸಾರ್ವಜನಿಕರ ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕರಕುಶಲಕಾರರಿಗೆ ಹಾಗೂ ಅವರ ಕಲೆಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‍ನಂತಹ ಸಂಸ್ಥೆಗಳು ಒಳ್ಳೆಯ ಕಾರ್ಯವನ್ನು ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸಕಾರಾತ್ಮಕವಾಗಿ ಬದಲಾಗುವ ಮೂಲಕ ನಿರೀಕ್ಷೆಯಿದ್ದು, ಕಲಾವಿದರುಗಳಿಗೆ ಒಳ್ಳೆಯ ದಿನಗಳು ಮರಳಲಿವೆ ಎಂದು ಅವರು ಆಶಿಸಿದ್ದಾರೆ.

ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಅಪ್ಪಾಜಯ್ಯ, ಚಿತ್ರನಟ ನಿರಂಜನ್, ರೂಪದರ್ಶಿ ಹಾಗೂ ನಟಿ ಐಶಾನ ಸಣ್ಣಪ್ಪನವರ್ ಮತ್ತಿತರರಿದ್ದರು.

ಜನವರಿ 1 ರಿಂದ 10 ರವರೆಗೆ ನಡೆಯಲಿರುವ ಈ ಕಲಾವಸ್ತು ಪ್ರದರ್ಶನ ಹಾಗೂ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್‍ಗಳಲ್ಲಿ ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ಮನೆಯ ಗಾರ್ಡನ್ ಅಲಂಕರಿಸಲು, ಹ್ಯಾಂಡ್ ಲೂಮ್ ಸ್ಯಾರಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿದೆ.

-ಅಪ್ಪಾಜಯ್ಯ, ಕಾರ್ಯದರ್ಶಿ, ಚಿತ್ರಕಲಾ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News