ಕೋರೆಗಾಂವ್ ವಿಜಯ ದಿವಸ: ಸ್ಮರಣೆಯೊಂದೇ ಸಾಲದು

Update: 2021-01-02 04:46 GMT

ಜನವರಿ 1ರಂದು ಹೊಸ ವರ್ಷಕ್ಕೆ ಕಾಲಿಟ್ಟ ಸಂಭ್ರಮವನ್ನು ಜಗತ್ತು ಆಚರಿಸುತ್ತದೆ. ಆದರೆ ಈ ದೇಶದ ದಲಿತರ ಪಾಲಿಗೆ ಸ್ವಾಭಿಮಾನದ ಬದುಕು ತೆರೆದುಕೊಳ್ಳುವುದು ಇದೇ ದಿನ. ತಲೆ ತಲಾಂತರಗಳಿಂದ ಬೇರೂರಿದ್ದ ಜಾತೀಯತೆಯ ಶೋಷಣೆಯ ವಿರುದ್ಧ ಸಮರ ಸಾರಿ ಈ ದೇಶದ ದಲಿತರು ಮೊತ್ತ ಮೊದಲ ಬಾರಿ ವಿಜಯಿಯಾದ ದಿನ ಜನವರಿ 1. ಪೂನಾದಲ್ಲಿರುವ ಭೀಮಾ ಕೋರೆಗಾಂವ್ ಸ್ಮಾರಕದ ಬಳಿ ಪ್ರತಿವರ್ಷ ಈ ವಿಜಯ ದಿವಸವನ್ನು ದಲಿತರ ಸಹಿತ ದೇಶದ ಶೋಷಿತ ಸಮುದಾಯ ಮತ್ತು ಪ್ರಗತಿ ಪರರು ಸಂಭ್ರಮದಿಂದ ಆಚರಿಸುತ್ತಾರೆ. ಈ ವಿಜಯ ದಿವಸ ಆಚರಣೆಯ ಸಂಪ್ರದಾಯವನ್ನು ಹುಟ್ಟು ಹಾಕಿದ್ದು ಡಾ. ಬಿ. ಆರ್. ಅಂಬೇಡ್ಕರ್. ಆದರೆ ಈ ಕೋರೆಗಾಂವ್ ವಿಜಯ ದಿವಸದ ಆಚರಣೆ ತಡೆಯಲು ಸಂಘಪರಿವಾರ ಗರಿಷ್ಠ ಮಟ್ಟದ ಪ್ರಯತ್ನವನ್ನು ನಡೆಸುತ್ತಾ ಬಂದಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ಕೋರೆಗಾಂವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಮೇಲೆ ಸಂಘಪರಿವಾರ ಭೀಕರ ದಾಳಿ ನಡೆಸಿತು. ಪೇಶ್ವೆಗಳ ಒಳಸಂಚಿಗೆ ಸಿಲುಕಿ ಮೊಗಲರಿಂದ ಹತ್ಯೆಗೊಳಗಾಗಿದ್ದ ಶಿವಾಜಿಯ ಮಗ ಸಾಂಭಾಜಿಯ ಅಂತ್ಯಸಂಸ್ಕಾರ ಮಾಡಿದ ಮಹಾರ್ ದಲಿತನ ಗೋರಿಯನ್ನು ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದರು. ಅಷ್ಟೇ ಅಲ್ಲ, ಅಂದು ಕೋರೆಗಾಂವ್ ವಿಜಯೋತ್ಸವದಲ್ಲಿ ಭಾಗವಹಿಸಿದ ನೂರಾರು ಜನರನ್ನು ಬೇರೆ ಬೇರೆ ಕಾರಣ ಕೊಟ್ಟು ಮಹಾರಾಷ್ಟ್ರ ಸರಕಾರ ಬಂಧಿಸಿತು. ಕೋರೆಗಾಂವ್ ವಿಜಯ ದಿವಸ ಆಚರಣೆಯ ನೇತೃತ್ವವನ್ನು ವಹಿಸಿದ್ದ ಹಲವು ಮುಖಂಡರು ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ದಲಿತರ ಮೇಲೆ ಹಲ್ಲೆ ನಡೆಸಿದ ಸಂಘಪರಿವಾರ ಮುಖಂಡರ ಮೇಲಿರುವ ಪ್ರಕರಣಗಳನ್ನು ಸರಕಾರ ಹಿಂದೆಗೆಯಿತು. ಅಳಿದುಳಿದವರನ್ನು ಬಿಡುಗಡೆ ಮಾಡಿತು. ಕಳೆದ ಎರಡು ವರ್ಷಗಳಿಂದ ಕೋರೆಗಾಂವ್ ವಿಜಯೋತ್ಸವವನ್ನು ಪೊಲೀಸರ ಬಿಗಿ ಬಂದೋಬಸ್ತ್ ಜೊತೆಗೇ ಆಚರಿಸುತ್ತಿದ್ದಾರೆ. ಈ ಬಾರಿ ಕೊರೋನದ ನೆಪದಲ್ಲಿ ವಿಜಯೋತ್ಸವ ಆಚರಣೆಗೆ ಜನ ಸೇರದಂತೆ ಸರಕಾರ ತಡೆದಿದೆ. ಸಣ್ಣ ಮಟ್ಟದ ಕಾರ್ಯಕ್ರಮವಷ್ಟೇ ನಡೆದಿದೆ.

ಕೋರೆಗಾಂವ್ ವಿಜಯೋತ್ಸವದ ವಿರುದ್ಧ ಆರೆಸ್ಸೆಸ್ ಮತ್ತು ಸಂಘಪರಿವಾರಕ್ಕೆ ತೀವ್ರ ಅಸಮಾಧಾನವಿದೆ. ಎರಡನೇ ಬಾಜೀರಾಯನ 20,000ಕ್ಕೂ ಅಧಿಕ ಸಂಖ್ಯೆಯ ಸೇನೆಯನ್ನು 500ರಷ್ಟಿದ್ದ ದಲಿತ ಸೇನಾನಿಗಳು ಅಂದು ಸೋಲಿಸಿದರು. ಆ ಮೂಲಕ ಜಾತಿಯ ಹೆಸರಲ್ಲಿ ಅಂಧರಾಗಿದ್ದ ಪೇಶ್ವೆಗಳ ಆಡಳಿತವೂ ಕೊನೆಯಾಯಿತು. ದಲಿತರು ಬ್ರಿಟಿಷರ ಪರವಾಗಿ ಹೋರಾಡಿದರಾದರೂ ಆ ಗೆಲುವು ದಲಿತರ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಒಮ್ಮೆಲೆ ಬದಲಿಸಿತು. ಶಿವಾಜಿಯ ರಾಜ್ಯ ಸ್ಥಾಪನೆಯಲ್ಲಿ ಈ ದಲಿತ ಸೇನಾನಿಗಳ ಪಾತ್ರ ಬಹುದೊಡ್ಡದಿತ್ತು. ದಲಿತರು ಮತ್ತು ಮುಸ್ಲಿಮರನ್ನು ಸಂಘಟಿಸಿ ಶಿವಾಜಿ ಮೊಗಲರ ವಿರುದ್ಧ ಹೋರಾಡಿದ. ಆತನ 11 ಸೇನಾಪತಿಗಳು ಮುಸ್ಲಿಮರಾಗಿದ್ದರು. ಅಂಗರಕ್ಷಕರಾಗಿಯೂ ಮುಸ್ಲಿಮರು ಮತ್ತು ದಲಿತರನ್ನಷ್ಟೇ ಇಟ್ಟುಕೊಂಡಿದ್ದ. ಶಿವಾಜಿ ಮರಾಠಾ ಸಮುದಾಯಕ್ಕೆ ಸೇರಿರದೆ, ಬೋಸಳೆ ಎನ್ನುವ ಕೆಳಜಾತಿಗೆ ಸೇರಿರುವುದರಿಂದ ಬ್ರಾಹ್ಮಣರು ಮತ್ತು ಮೇಲ್ಜಾತಿಯ ಜನರಿಗೆ ಶಿವಾಜಿಯ ಕುರಿತಂತೆ ಅಸಹನೆಯಿತ್ತು. ಆತನ ಕುರಿತಂತೆ ಕೀಳರಿಮೆಯಿತ್ತು. ಆದುದರಿಂದಲೇ ಅವರು ಪರೋಕ್ಷವಾಗಿ ಮೊಗಲರ ಸೇನಾಧಿಪತಿ ರಜಪೂತ ಸಮುದಾಯಕ್ಕೆ ಸೇರಿದ ರಾಜ ಜಯಸಿಂಹನ ಜೊತೆಗೆ ನಿಂತರು. ಶಿವಾಜಿಯ ಪಟ್ಟಾಭಿಷೇಕಕ್ಕೂ ಅಡ್ಡಿ ಮಾಡಿದರು. ಟ್ಟಾಭಿಷೇಕ ಸಂದರ್ಭದಲ್ಲಿ ಗಾಗಾಭಟ್ಟ ತನ್ನ ಎಡಗಾಲಿನ ಹೆಬ್ಬೆಟ್ಟಿನಿಂದ ಶಿವಾಜಿಗೆ ತಿಲಕವನ್ನಿಡುತ್ತಾನೆ ಎನ್ನುವುದನ್ನು ಜ್ಯೋತಿ ಬಾ ಫುಲೆಯವರು ಬರೆಯುತ್ತಾರೆ. ಮೊದಲ ಪಟ್ಟಾಭಿಷೇಕಕ್ಕೆ ಕೆಲವರು ಮಾನ್ಯತೆ ನೀಡದ ಕಾರಣ, ಎರಡನೆಯ ಬಾರಿ ಪಟ್ಟಾಭಿಷೇಕ ಮಾಡಬೇಕಾಯಿತು. ಜಾತಿಯ ಹೆಸರಿನಲ್ಲಿ ಶಿವಾಜಿ ಮತ್ತು ಆತನ ಪುತ್ರ ಸಾಂಭಾಜಿಗೆ ಮೇಲ್‌ಜಾತಿಯ ಜನರು ಪದೇ ಪದೇ ಅವಮಾನಿಸಿದರು. ಪೇಶ್ವೆಗಳ ಸಂಚಿನಿಂದ ಶಿವಾಜಿಯ ಪುತ್ರ ಸಾಂಭಾಜಿ ಮೊಗಲರ ಸೆರೆಯಾಗುತ್ತಾನೆ. ಆತನ ಮೃತದೇಹದ ಅಂತ್ಯಸಂಸ್ಕಾರವನ್ನೂ ಪೇಶ್ವೆಗಳು ಮಾಡುವುದಿಲ್ಲ. ಈ ಸಂದರ್ಭದಲ್ಲಿ ಛಿದ್ರಗೊಂಡ ಸಾಂಭಾಜಿಯ ಮೃತದೇಹವನ್ನು ಮಹಾರ್ ದಲಿತನೊಬ್ಬ ಸಂಗ್ರಹಿಸಿ ಅದಕ್ಕೆ ಅಂತ್ಯಸಂಸ್ಕಾರಗೈಯುತ್ತಾನೆ. ಮುಂದೆ ಆ ಮಹಾರ್ ದಲಿತ ಮೃತಪಟ್ಟ ಬಳಿಕ ಸಾಂಭಾಜಿಯ ಗೋರಿಯ ಪಕ್ಕದಲ್ಲೇ ಆತನ ದಫನ ಮಾಡಲಾಗುತ್ತದೆ. ಶಿವಾಜಿಯು ಮುಸ್ಲಿಮರು ಮತ್ತು ದಲಿತರನ್ನು ಸಂಘಟಿಸಿ ಮೊಗಲರ ವಿರುದ್ಧ ಹೋರಾಡಿ ಕಟ್ಟಿದ ಸಾಮ್ರಾಜ್ಯವನ್ನು ಬಳಿಕ ಚಿತ್ಪಾವನ ಸಮುದಾಯಕ್ಕೆ ಸೇರಿದ ಪೇಶ್ವೆಗಳು ಕೈವಶ ಮಾಡುತ್ತಾರೆ. ಇವರ ಆಡಳಿತ ಕಾಲದಲ್ಲಿ ಜಾತೀಯತೆ ಉತ್ತುಂಗಕ್ಕೆ ತಲುಪುತ್ತದೆ. ಇದರಿಂದಾಗಿ ಮಹಾರ್ ದಲಿತರು ಪೇಶ್ವೆಯ ಸೇನೆಯಿಂದ ಹೊರ ಬರುತ್ತಾರೆ. ಅಂತಿಮವಾಗಿ ಎರಡನೇ ಬಾಜೀರಾಯ ಮತ್ತು ಬ್ರಿಟಿಷರ ನಡುವಿನ ಯುದ್ಧದಲ್ಲಿ ದಲಿತರು ಬಾಜೀರಾಯನ ವಿರುದ್ಧ ಬಂಡೆದ್ದು ಬ್ರಿಟಿಷರ ಪರವಾಗಿ ಹೋರಾಡುತ್ತಾರೆ. ಅಲ್ಲಿಗೆ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ವಿಪರ್ಯಾಸವೆಂದರೆ ಇಂದು ಆರೆಸ್ಸೆಸ್ ಮತ್ತು ಸಂಘಪರಿವಾರ ಶಿವಾಜಿಯ ಹೆಸರನ್ನು ಮುಂದಿಟ್ಟುಕೊಂಡು ಪೇಶ್ವೆಗಳ ಆಡಳಿತವನ್ನು ಜಾರಿಗೊಳಿಸಲು ಹೊರಟಿದೆ. ಪೇಶ್ವೆಗಳ ಸೋಲನ್ನು ಕೋರೆಗಾಂವ್ ವಿಜಯ ದಿವಸದಂದು ದೇಶದ ಜನತೆ ಆಚರಿಸುವುದು ಈ ಕಾರಣಕ್ಕೆ ಅವರಿಗೆ ಅಸಹನೆಯ ವಿಷಯವಾಗಿದೆ. ಕಾಲದ ವಿಪರ್ಯಾಸವೆಂದರೆ, ಮುಂದೆ ಇದೇ ಪೇಶ್ವೆಯ ಸಮುದಾಯದಿಂದ ನಾಥೂರಾಂ ಗೋಡ್ಸೆ ಹುಟ್ಟುತ್ತಾನೆ. ಇತ್ತ ಪೇಶ್ವೆಯ ಎದುರಾಳಿಗಳಾಗಿರುವ ಮಹಾರ್ ಸಮುದಾಯದಿಂದ ಅಂಬೇಡ್ಕರ್ ಹುಟ್ಟುತ್ತಾರೆ. ಮೂಲೆಗುಂಪಾಗಿದ್ದ ಕೋರೆಗಾಂವ್ ಸ್ಮಾರಕವನ್ನು ಬೆಳಕಿಗೆ ತಂದು, ಅಲ್ಲಿ ಪ್ರತಿ ವರ್ಷ ವಿಜಯೋತ್ಸವ ಆಚರಿಸುವ ಪರಂಪರೆಗೆ ಅಂಬೇಡ್ಕರ್ ನಾಂದಿ ಹಾಡುತ್ತಾರೆ.

ಇಂದು ಆ ವಿಜಯೋತ್ಸವವನ್ನು ತಡೆಯಲು ಸರಕಾರ ಬೇರೆ ಬೇರೆಕಾರಣಗಳನ್ನು ಹುಡುಕುತ್ತಿದೆ. ವಿಜಯೋತ್ಸವದಲ್ಲಿ ಭಾಗವಹಿಸಿದ ನಾಯಕರನ್ನು ನಗರ ನಕ್ಸಲರೆಂದು ಕರೆದು ಜೈಲಿಗೆ ತಳ್ಳಿದೆ. ಇದರ ಉದ್ದೇಶ ದಲಿತರು ಸಂಘಟಿತರಾಗುವುದನ್ನು ತಡೆಯುವುದೇ ಆಗಿದೆ. ಒಂದು ವೇಳೆ ಸಂಘಟಿತರಾದರೆ ಪೇಶ್ವೆಗಳ ಸಾಮ್ರಾಜ್ಯಕ್ಕೆ ಕುತ್ತು ಬಂದಂತೆಯೇ ಆರೆಸ್ಸೆಸ್ ಚಿಂತನೆಗೂ ಕುತ್ತು ಬರಬಹುದು ಎನ್ನುವ ಭಯವಿದೆ. ಇಂದು ಕೋರೆಗಾಂವ್ ವಿಜಯವನ್ನು ಬರೇ ಸ್ಮರಣೆಗಷ್ಟೇ ನಾವು ಸೀಮಿತ ಮಾಡಬಾರದು. ದಲಿತರು ಮತ್ತು ಮುಸ್ಲಿಮರನ್ನು ಸಂಘಟಿಸಿ ಶಿವಾಜಿ ಮೊಗಲರ ವಿರುದ್ಧ ಯಶಸ್ವಿಯಾದುದನ್ನು ನಮಗೆ ಮಾದರಿಯಾಗಿಸಿಕೊಳ್ಳಬೇಕಾಗಿದೆ. ಇಂದು ಮೇಲ್ವರ್ಗದ ಬಲಿಷ್ಠ ಜಾತಿಗಳು ಸಂಘಟಿತರಾಗಿ ಸರಕಾರವನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಅವರ ಮೂಗಿನ ನೇರಕ್ಕೆ ಆಡಳಿತ ನಡೆಯುತ್ತಿದೆ. ದಲಿತ ಸಂಘಟನೆಗಳು ದಿನದಿಂದ ದಿನಕ್ಕೆ ದುರ್ಬಲವಾಗುತ್ತಿವೆ. ಬ್ರಿಟಿಷರ ಕಾಲದಲ್ಲಿ ಮಹಾರ್ ದಲಿತರಿಗೆ ಸಾಧ್ಯವಾಗಿರುವುದು, ಪ್ರಜಾಪ್ರಭುತ್ವದ ದಿನಗಳಲ್ಲಿ ದಲಿತ ಸಮುದಾಯಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಇಲ್ಲವಾದರೆ ಈ ದೇಶದಲ್ಲಿ ದಲಿತರು ಮತ್ತೆ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಸ್ವಾತಂತ್ರ ಪೂರ್ವ ಸ್ಥಿತಿಗೆ ಮರಳಲಿದ್ದಾರೆ. ಆದುದರಿಂದ ಕೋರೆಗಾಂವ್ ವಿಜಯ ಆಚರಣೆಯ ಮೂಲಕ ದಲಿತರು ಮತ್ತೆ ಸಂಘಟಿತರಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News