ಎಪಿಎಂಸಿ ಕಾಯ್ದೆಯನ್ನು 14 ವರ್ಷಗಳ ಹಿಂದೆಯೇ ರದ್ದುಪಡಿಸಿದ್ದ ಬಿಹಾರ: ಅಲ್ಲಿನ ರೈತರಿಗಾದ ಪ್ರಯೋಜನವೇನು ಗೊತ್ತೇ?

Update: 2021-01-03 08:50 GMT

ಹೊಸದಿಲ್ಲಿ,ಜ.03: ಬಿಹಾರ ರೈತರಿಗೆ ಹದಿನಾಲ್ಕು ವರ್ಷ ಮೊದಲೇ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆಯ ಸ್ವಾತಂತ್ರ ದೊರಕಿತ್ತು. 2006ರಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿದ್ದರೂ, ಇದರಿಂದ ರೈತರಿಗೆ ಆಗಿರುವ ಪ್ರಯೋಜನ ಶೂನ್ಯ ಎನ್ನುವುದು ಎಪಿಎಂಸಿ ಕಾಯ್ದೆ ಜಾರಿಯಲ್ಲಿದ್ದಾಗ ಮತ್ತು ಆ ಬಳಿಕದ ಬೆಲೆ ಪ್ರವೃತ್ತಿಯನ್ನು ವಿಶ್ಲೇಷಿಸಿದಾಗ ತಿಳಿದುಬರುತ್ತದೆ ಎಂದು timesofindia.com ವರದಿ ಮಾಡಿದೆ. ರಾಜ್ಯದ ಪ್ರಮುಖ ಮೂರು ಬೆಳೆಗಳಾದ ಬತ್ತ, ಗೋಧಿ ಮತ್ತು ಮೆಕ್ಕೆಜೋಳದ ಬೆಲೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ಅಂತರ ಹೆಚ್ಚಿರುವುದು ಅಥವಾ ಅದೇ ಮಟ್ಟದಲ್ಲಿ ಉಳಿದಿರುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ವರದಿ ತಿಳಿಸಿದೆ.

ಬೆಳೆಗಳ ಬೆಲೆ ಕಡಿಮೆ ಇದ್ದ ಕಾರಣದಿಂದಾಗಿ ಕೃಷಿ ಕೂಲಿ ಕಾರ್ಮಿಕರ ವೇತನ ಪಂಜಾಬ್ ಹಾಗೂ ಹರ್ಯಾಣಕ್ಕೆ ಹೋಲಿಸಿದರೆ ತೀರಾ ಕಡಿಮೆ ಇರುವುದು ಕೂಡಾ ಗಮನಾರ್ಹ. ಇದರ ಪರಿಣಾಮವಾಗಿ ಕೂಲಿಗಳು ರಾಜ್ಯದಿಂದ ವಲಸೆ ಹೋಗಿದ್ದಾರೆ. 1998-99ರಿಂದ 2016-07ರವರೆಗಿನ ಕೊಯ್ಲು ಬೆಲೆಯನ್ನು ವಿಶ್ಲೇಷಿಸಿದಾಗ ತಿಳಿದುಬರುವ ಅಂಶವೆಂದರೆ ಮೂರು ವರ್ಷಗಳಲ್ಲಿ ಕೊಯ್ಲು ಸಂದರ್ಭದ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಅಧಿಕ ಇದ್ದರೆ, ಮತ್ತೆ ಮೂರು ವರ್ಷಗಳಲ್ಲಿ ಇದು ಕನಿಷ್ಠ ಬೆಂಬಲಬೆಲೆಯ ಶೇಕಡ 90ರಿಂದ 100ರ ಆಸುಪಾಸಿನಲ್ಲಿತ್ತು. 

ಮೂರು ವರ್ಷ ಶೇಕಡ 90ಕ್ಕಿಂತ ಕಡಿಮೆ ಇತ್ತು. ಇದೇ ಅವಧಿಯಲ್ಲಿ ಪಂಜಾಬ್‍ನಲ್ಲಿ ಮೂರು ವರ್ಷ ಎಂಎಸ್‍ಪಿಗಿಂತ ಅಧಿಕ ಬೆಲೆ ಇದ್ದರೆ, ಉಳಿದ ಆರು ವರ್ಷಗಳಲ್ಲಿ ಕೊಯ್ಲು ಸಂದರ್ಭದ ಬೆಲೆ ಎಂಎಸ್‍ಪಿಯ ಶೇಕಡ 90 ಅಥವಾ ಅದಕ್ಕಿಂತ ಅಧಿಕ ಇತ್ತು. ಹರ್ಯಾಣದಲ್ಲಿ ಐದು ವರ್ಷ ಎಂಎಸ್‍ಪಿಗಿಂತ ಅಧಿಕ ಬೆಲೆ ರೈತರಿಗೆ ಸಿಕ್ಕಿದ್ದರೆ, ಉಳಿದ ನಾಲ್ಕು ವರ್ಷಗಳಲ್ಲಿ ಎಂಎಸ್‍ಪಿಯ ಶೇಕಡ 90ರಷ್ಟು ಬೆಲೆ ಇತ್ತು.

ಕೃಷಿ ಕೊಯ್ಲು ಬೆಲೆ ಎಂದರೆ ಕೃಷಿಕರು ಗ್ರಾಮಮಟ್ಟದಲ್ಲಿ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಗಟು ಬೆಲೆಯಾಗಿದ್ದು, ಕೃಷಿ ಸಚಿವಾಲಯ ಇದನ್ನು ಸಂಗ್ರಹಿಸುತ್ತದೆ.

2007-08ರ ಬಳಿಕ ಅಂದರೆ ಎಪಿಎಂಸಿ ಕಾಯ್ದೆ ರದ್ದುಪಡಿಸಿದ ಬಳಿಕ ಒಂದು ಬಾರಿಯೂ ಬಿಹಾರದಲ್ಲಿ ಈ ಆಹಾರಧಾನ್ಯಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಅಧಿಕವಾಗಿಲ್ಲ. ನಾಲ್ಕು ಹಂಗಾಮುಗಳಲ್ಲಿ ಎಂಎಸ್‍ಪಿ ಅಥವಾ ಎಂಎಸ್‍ಪಿಯ ಶೇಕಡ 90ರಷ್ಟು ಕೊಯ್ಲು ಬೆಲೆ ಇದ್ದರೆ, ಉಳಿದ ಆರು ವರ್ಷಗಳಲ್ಲಿ ಅದಕ್ಕಿಂತಲೂ ಕಡಿಮೆ ಇತ್ತು. ಪಂಜಾಬ್‍ನಲ್ಲಿ ಎರಡು ಬಾರಿ ಕನಿಷ್ಠ ಬೆಂಬಲಬೆಲೆಗಿಂತ ಅಧಿಕ ಮಾರುಕಟ್ಟೆ ಬೆಲೆ ಇದ್ದರೆ, ಒಂದು ಬಾರಿ ಮಾತ್ರ ಎಂಎಸ್‍ಪಿಯ ಶೇಕಡ 90ಕ್ಕಿಂತ ಕಡಿಮೆಯಾಗಿತ್ತು. ಅಂತೆಯೇ ಹರ್ಯಾಣದಲ್ಲಿ ಏಳು ಹಂಗಾಮುಗಳಲ್ಲಿ ರೈತರು ಕನಿಷ್ಠ ಬೆಂಬಲಬೆಲೆಗಿಂತ ಅಧಿಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಉಳಿದ ಎರಡು ಅವಧಿಯಲ್ಲಿ ಮಾತ್ರ ಕೊಯ್ಲು ಅವಧಿಯ ಬೆಲೆ ಕನಿಷ್ಠಬೆಂಬಲಬೆಲೆಯ ಶೇಕಡ 90ರಿಂದ ಶೇಡಕ 100ರ ನಡುವೆ ಇತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News