‘ಹರಕೆಯ ಕುರಿ’ ಬೂಟಾ ಸಿಂಗ್

Update: 2021-01-04 05:58 GMT

ದಿಲ್ಲಿಯಲ್ಲಿ ಪಂಜಾಬಿನ ರೈತರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಪ್ರತಿಭಟಿಸುತ್ತಿರುವ ಸಂದರ್ಭದಲ್ಲೇ, ಪಂಜಾಬಿನ ದಲಿತ ಸಮುದಾಯವನ್ನು ಪ್ರತಿನಿಧಿಸಿದ, ಕಾಂಗ್ರೆಸ್ ವೌಲ್ಯಗಳ ಮೇಲೆ ತೀವ್ರ ನಂಬಿಕೆಯಿಟ್ಟ ಜೀವವೊಂದು ಕಣ್ಮುಚ್ಚಿದೆ. ಅಹ್ಮದ್ ಪಟೇಲ್ ನಿಧನದ ಬಳಿಕ ಕಾಂಗ್ರೆಸ್ ಪಕ್ಷ ಇನ್ನೊಬ್ಬ ನಿಷ್ಠಾವಂತ ಮುಖಂಡನನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ನ ಹತ್ತು ಹಲವು ವಿವಾದಿತ ನಿರ್ಧಾರಗಳಿಗೆ ತನ್ನ ತಲೆಯನ್ನು ಕೊಟ್ಟು ಇಂದಿರಾ ಮತ್ತು ರಾಜೀವ್‌ಗಾಂಧಿಯವರನ್ನು ಹಲವು ಬಾರಿ ರಕ್ಷಿಸಿದ, ಆಪರೇಷನ್ ಬ್ಲೂ ಸ್ಟಾರ್ ಬಳಿಕ ಮಾಡಿದ ತಪ್ಪಿಗಾಗಿ ಅಮೃತಸರ ದೇಗುಲದಲ್ಲಿ ಬೂಟ್ ಪಾಲಿಶ್ ಮಾಡಿ ಪಶ್ಚಾತ್ತಾಪ ಮಾಡಿಕೊಂಡ, ಕೊನೆಯವರೆಗೂ ಸಿಖ್ಖರಿಂದ ಪೂರ್ಣವಾಗಿ ಕ್ಷಮಿಸಲ್ಪಡದ ಬೂಟಾ ಸಿಂಗ್ ನಿಧನ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಒಂದು ರೂಪಕವಾಗಿದೆ.

ಸರ್ದಾರ್ ಬೂಟಾ ಸಿಂಗ್ ಅವರ ರಾಜಕೀಯ ವೃತ್ತಿ ಹಾಗೂ ಬದುಕು, ಭಾರತೀಯ ಸಮಾಜದ ಬಹುತ್ವ ಹಾಗೂ ಏಕತೆಗೆ ಜೀವಂತ ಉದಾಹರಣೆಯಾಗಿದೆ. ಸಾಧಾರಣ ಮಝಹಬಿ ಸಿಖ್ ಕುಟುಂಬದಲ್ಲಿ ಜನಿಸಿದ ಬೂಟಾ ಸಿಂಗ್ ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರ ನಂಬಿಕಸ್ಥ ಸಹವರ್ತಿಯಾಗುವ ಹಂತದವರೆಗೂ ಬೆಳೆದುಬಿಟ್ಟರು. ಕಾಂಗ್ರೆಸ್ ರಾಜಕೀಯದ ಸಂಕೀರ್ಣ ಘಟ್ಟದಲ್ಲಿ ಗ್ಯಾನಿ ಜೈಲ್ ಸಿಂಗ್ ಹಾಗೂ ಬೂಟಾ ಸಿಂಗ್ ಅವರು ಪಕ್ಷಕ್ಕಾಗಿ ಅಪಾರವಾಗಿ ದುಡಿದಿದ್ದರು. ಸಿಖ್ಖರು ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಇವರಿಬ್ಬರು ನಿರ್ಣಾಯಕವಾದ ಸೇತುವೆಯಾಗಿದ್ದರು. 70ರ ದಶಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತಾದಳವು ಪದಚ್ಯುತಗೊಳಿಸಿದಾಗ ಬೂಟಾ ಸಿಂಗ್ ಅವರು ಅಕ್ಬರ್ ರಸ್ತೆಯಲ್ಲಿನ ತನ್ನ ಅಧಿಕೃತ ನಿವಾಸವನ್ನು ಪಕ್ಷದ ಕಚೇರಿಯಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಿದರು. ಅದರಲ್ಲಿದ್ದ ಒಂದು ಮಂಚ ಮತ್ತು ಖಾಲಿ ಕೊಠಡಿಯೊಂದನ್ನು ಮಾತ್ರ ಸ್ವಂತಕ್ಕಾಗಿ ಉಳಿಸಿಕೊಂಡರು. ಕಾಂಗ್ರೆಸ್‌ನಲ್ಲಿ ಆರಾಮದಾಯಕವಾದ ಸ್ಥಾನಗಳನ್ನು ಅಲಂಕರಿಸಿದ್ದ ಸಹದ್ಯೋಗಿಗಳು ಪಕ್ಷವನ್ನು ತೊರೆದುಹೋಗುತ್ತಿದ್ದಾಗ ನಿಷ್ಠೆ ಹಾಗೂ ದೃಢಸಂಕಲ್ಪಕ್ಕೆ ಅವರೊಂದು ಅಭೂತಪೂರ್ವ ನಿದರ್ಶನವಾಗಿದ್ದರು. ಎಲ್ಲಾ ಸಮಯಗಳಲ್ಲೂ ಶಾಂತ, ಸೌಮ್ಯ ಹಾಗೂ ಅಚಲವಾದ ವ್ಯಕ್ತಿತ್ವವುಳ್ಳವರೆಂಬ ಹಣೆಪಟ್ಟಿ ಬೂಟಾ ಸಿಂಗ್ ಅವರಿಗೆ ಹಲವರು ಕಟ್ಟಿದ್ದಾರೆ. ಕಾಂಗ್ರೆಸ್‌ನ ಜಾತ್ಯತೀತ ವೌಲ್ಯಗಳ ಮೇಲೆ ಬೂಟಾ ಸಿಂಗ್ ಅಗಾಧ ನಂಬಿಕೆಯಿಟ್ಟಿದ್ದರು. ಆದರೆ ಸ್ವತಃ ಕಾಂಗ್ರೆಸ್ ಮೃದು ಹಿಂದುತ್ವಕ್ಕೆ ತನ್ನನ್ನು ಒಡ್ಡಿಕೊಂಡಂತೆಯೇ ಅದರ ದುಷ್ಪರಿಣಾಮಗಳನ್ನು ಬೂಟಾ ಸಿಂಗ್ ವೈಯಕ್ತಿಕವಾಗಿಯೂ ಅನುಭವಿಸಬೇಕಾಯಿತು. ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲಿ ಬೂಟಾ ಸಿಂಗ್ ರಾಜಕೀಯ ಬದುಕು ಅಗ್ನಿ ಪರೀಕ್ಷೆಗೆ ಒಳಗಾಯಿತು.

ಒಂದೆಡೆ ಇಂದಿರಾಗಾಂಧಿ. ಮಗದೊಂದೆಡೆ ಸಿಖ್ ಸಮುದಾಯ. ಇವೆರಡರ ಮಧ್ಯೆ ಅವರು ಸಮತೋಲನವನ್ನು ಸಾಧಿಸುವುದು ಸುಲಭವಿರಲಿಲ್ಲ. ಸಿಖ್ಖರನ್ನು ಸಮಾಧಾನಿಸುವ ಕಾರಣಕ್ಕಾದರೂ ಅವರು ಕಾಂಗ್ರೆಸ್ ತೊರೆಯಬೇಕಾಗಿತ್ತು. ಆದರೆ ಬೂಟಾ ಸಿಂಗ್ ಕಾಂಗ್ರೆಸ್ ಜೊತೆಗೆ ಬಲವಾಗಿ ನಿಂತರು. ಆಪರೇಷನ್ ಬ್ಲೂಸ್ಟಾರ್ ಬಳಿಕ ಸಿಖ್ಖರಲ್ಲಿ ಕಾಂಗ್ರೆಸ್ ವಿರುದ್ಧ ಉಂಟಾಗಿದ್ದ ಅಸಮಾಧಾನವನ್ನು ಪ್ರತಿರೋಧಿಸುವುದು ಕಷ್ಟವಾಗಿದ್ದರಿಂದ ಅಮರೀಂದರ್ ಸಿಂಗ್ ಅವರು ಪಕ್ಷವನ್ನು ತೊರೆದು, ಅಕಾಲಿದಳವನ್ನು ಸೇರಿಕೊಂಡಿದ್ದರು. ಆದರೆ ಬೂಟಾ ಸಿಂಗ್ ಅವರಿಗೆ ಅಂತಹ ಯಾವುದೇ ಅನಿಶ್ಚಿತತೆ ಅಥವಾ ಅಭದ್ರತೆ ಕಾಡಲಿಲ್ಲ. ಪಕ್ಷದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಹಾಗೂ ಸಿಖ್ಖರ ಸಮಾಧಾನಕ್ಕೆ ಪ್ರತಿಕ್ರಿಯಿಸಲು ತಾನು ಅಸಹಾಯಕನಾಗಿದ್ದೇನೆ ಎಂಬ ದೂರು ಅವರ ಬಾಯಿಯಿಂದ ಯಾವತ್ತೂ ಕೇಳಿಬರಲಿಲ್ಲ. ಆದರೆ ಅವರ ಈ ದೃಢ ನಿರ್ಧಾರ ಅವರ ವೈಯಕ್ತಿಕ ರಾಜಕೀಯದ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು ಸುಳ್ಳಲ್ಲ. 80ರ ದಶಕದಲ್ಲಿ ರಾಜೀವ್‌ಗಾಂಧಿ ಸರಕಾರ ವಿವಾದಿತ ಅಯೋಧ್ಯೆಯಲ್ಲಿ ಶಿಲಾನ್ಯಾಸ ಮಾಡಲು ಅನುಮತಿ ನೀಡಿದಾಗ ಬೂಟಾ ಸಿಂಗ್ ಗೃಹ ಸಚಿವರಾಗಿದ್ದರು.

ಒಬ್ಬ ಅಲ್ಪಸಂಖ್ಯಾತ ಸಮುದಾಯದೊಳಗಿನ ದಲಿತ ನಾಯಕನಾಗಿದ್ದುಕೊಂಡು ಇದು ಅವರಿಗೆ ಮುಜುಗರವನ್ನು ತಂದಿತ್ತಾದರೂ, ಬಾಯಿ ಮುಚ್ಚಿ ರಾಜೀವ್‌ಗಾಂಧಿಯನ್ನು ರಕ್ಷಿಸಿದರು. ರಾಜೀವ್‌ಗಾಂಧಿ ಅವರು ನಾಯಕರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವಾಗಲೆಲ್ಲ ಬೂಟಾ ಸಿಂಗ್‌ರನ್ನು ಬಳಸಿಕೊಂಡರು. ಬಹುಶಃ ಬೂಟಾ ಸಿಂಗ್ ಅವರ ವೌನ ಕಾಂಗ್ರೆಸನ್ನು ಹಲವು ಬಾರಿ ಕಾಪಾಡಿದೆ. ಬಿಹಾರದ ರಾಜ್ಯಪಾಲರಾಗಿಯೂ ಅವರು ಹಲವು ಸಂಘರ್ಷಗಳನ್ನು ಎದುರಿಸಬೇಕಾಯಿತು. ಬಿಹಾರದ ಏಳುಬೀಳಿನ ಚುನಾವಣೆ ಹಾಗೂ ಪಕ್ಷದೊಳಗಿನ ಸಂಘರ್ಷ ಅವರಲ್ಲಿ ತೀವ್ರವಾದ ಹತಾಶೆಯನ್ನು ಮೂಡಿಸಿತು. ಸುಮ್ಮನೆ ಹುದ್ದೆಯಲ್ಲಿ ಜೋತುಬೀಳುವುದರ ಬದಲು ಬೂಟಾ ಸಿಂಗ್ ಅವರು ರಾಜಕೀಯ ನಿವೃತ್ತಿಯ ನಿರ್ಧಾರ ಕೈಗೊಂಡರು.

ಹಲವಾರು ಕಠಿಣವಾದ ಕದನಗಳನ್ನು ಗೆದ್ದ ಸೇನಾನಿಯು, ಕದನದ ನಿಯಮಗಳನ್ನು ವ್ಯಾಪಕವಾಗಿ ಬದಲಾಯಿಸಿದ ಕಾರಣದಿಂದಾಗಿ ತನ್ನ ಕೊನೆಯ ಸಮರವನ್ನು ಗೆಲ್ಲಲು ಸಾಧ್ಯವಾಗದ ಕಾರಣಕ್ಕಾಗಿ ನಿವೃತ್ತಿಗೊಂಡಂತಹ ಪರಿಸ್ಥಿತಿ ಅವರದ್ದಾಗಿತ್ತು. ಕಾಂಗ್ರೆಸ್‌ನ ವೌಲ್ಯಗಳಿಗಾಗಿ ಸಿಖ್ ಧರ್ಮದಿಂದಲೇ ಬಹಿಷ್ಕೃತನಾಗಿ, ಅಂತಿಮವಾಗಿ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಂತೆ ಸಿಖ್ ದೇಗುಲದ ಮುಂದೆ ಬೂಟ್ ಪಾಲಿಶ್ ಮಾಡಿ ತನ್ನ ತಪ್ಪನ್ನು ಒಪ್ಪಿಕೊಂಡ ಬೂಟಾ ಸಿಂಗ್ ಎದೆಯಲ್ಲಿ ಗಾಯಗೊಂಡ ಪಂಜಾಬನ್ನು ಬಚ್ಚಿಟ್ಟುಕೊಂಡು ಓಡಾಡಿದವರು. ಕಾಂಗ್ರೆಸ್‌ನ ಉಳಿವಿಗಾಗಿ ಆ ಗಾಯದ ನೋವನ್ನು ಮರೆ ಮಾಚಿದವರು. ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿಯೆಡೆಗೆ ಬಿಟ್ಟ ಬಾಣಗಳಿಗೆ ಹಲವು ಬಾರಿ ಎದೆಯೊಡ್ಡಿದವರು. ಸೀತಾರಾಮ್ ಕೇಸರಿಯ ನೇತೃತ್ವದ ಕಾಂಗ್ರೆಸ್‌ನಿಂದ ಹೊರಬಂದು ಅಟಲ್ ಬಿಹಾರಿ ವಾಜಪೇಯಿ ಸರಕಾರದ ಜೊತೆಗೆ ಕೆಲಕಾಲ ನಿಂತರಾದರೂ, ಸೋನಿಯಾಗಾಂಧಿ ಪಕ್ಷದ ನೇತೃತ್ವ ವಹಿಸಿದಾಗ ಮತ್ತೆ ಕಾಂಗ್ರೆಸ್ ಸೇರಿಕೊಂಡರು. ಬೂಟಾ ಸಿಂಗ್ ಕಾಂಗ್ರೆಸ್‌ನೊಳಗೆ ಅಪ್ರಸ್ತುತರಾಗುತ್ತಾ ಹೋದಂತೆಯೇ ಕಾಂಗ್ರೆಸ್ ಕೂಡ ದೇಶದೊಳಗೆ ಅಪ್ರಸ್ತುತವಾಗುತ್ತಾ ಹೋದದ್ದು ಕಾಕತಾಳೀಯವಲ್ಲ. ಬೂಟಾ ಸಿಂಗ್‌ನಂತಹ ಬದ್ಧತೆಯುಳ್ಳ ನಾಯಕರ ಕೊರತೆ ಕಾಂಗ್ರೆಸನ್ನು ಹೇಗೆ ನಾಶ ಮಾಡುತ್ತಿದೆ ಎನ್ನುವುದನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News