'ಸ್ವಚ್ಛ ಭಾರತ ಮಿಷನ್' ಕೆಲಸ ವಿಳಂಬ: ಅಧಿಕಾರಿಗಳ ವಿರುದ್ಧ ಸಚಿವ ನಾರಾಯಣಗೌಡ ಅಸಮಾಧಾನ

Update: 2021-01-04 13:02 GMT

ಬೆಂಗಳೂರು, ಜ. 4: 'ಸ್ವಚ್ಛ ಭಾರತ ಮಿಷನ್' ಅಡಿಯಲ್ಲಿ ಕೆಲಸ ನಿಧಾನಗತಿಯಲ್ಲಿದೆ. ಅನುದಾನವಿದ್ದರೂ ಈ ವಿಳಂಬ ಸರಿಯಲ್ಲ. ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಪೌರಾಡಳಿತ ಸಚಿವ ಡಾ.ನಾರಾಯಣ ಗೌಡ ಇಂದಿಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸ್ವಚ್ಛ ಭಾರತ ಮಿಷನ್‍ನಲ್ಲಿ ಈವರೆಗೆ ಶೇ.10ರಷ್ಟು ಕೆಲಸ ಆಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. 15 ದಿನದಲ್ಲಿ ಪ್ರಗತಿ ತೋರಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ಲಾಸ್ಟಿಕ್ ನಿಷೇಧವಾಗಿ 5 ವರ್ಷ ಕಳೆದಿದೆ. ಆದರೆ, ಇದುವರೆಗೂ ಸರಿಯಾಗಿ ಕಾರ್ಯ ರೂಪಕ್ಕೆ ಬಂದಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ. ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿಕೊಂಡಿದೆ. ಇದಕ್ಕೆಲ್ಲ ಯಾರು ಜವಾಬ್ದಾರರು. ನಿಷೇಧವಿದ್ದರೂ ಇಷ್ಟೊಂದು ಪ್ಲಾಸ್ಟಿಕ್ ಬಳಕೆಯಾಗಲು ಕಾರಣವೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ಲಾಸ್ಟಿಕ್ ನೀರಿನ ಬಾಟಲ್ ಸೇರಿದಂತೆ ನಿತ್ಯ ಬಳಕೆಯಾಗುವ ಪ್ಲಾಸ್ಟಿಕ್ ನಿಷೇಧ ಆಗಬೇಕು. ಮಣ್ಣಿನಲ್ಲಿ ಕರಗುವಂತಹ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರಲಿ. ಪ್ಲಾಸ್ಟಿಕ್ ವಸ್ತು ಉತ್ಪಾದಿಸುವ ಘಟಕಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಯಾಕೆ ಬಳಕೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಕ್ರಮ ತೆಗೆದುಕೊಳ್ಳದ ಕಾರಣ ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ತಕ್ಷಣ ಇದು ನಿಲ್ಲಬೇಕು ಎಂದು ಅವರು ಸೂಚಿಸಿದರು.

ಅಲ್ಲದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ದಂಡ ವಿಧಿಸುವ ಕಾರ್ಯ ಆಗುತ್ತಿಲ್ಲ. ಕೆಲವೆಡೆ ಕಸ ಡಂಪ್ ಮಾಡಲಾಗುತ್ತಿದೆ. ಸಂಸ್ಕರಣೆ ಆಗುತ್ತಿಲ್ಲ. ಕಸ ಹಾಕಲು ಜಾಗದ ಸಮಸ್ಯೆ ಇದೆ. ಅದನ್ನೂ ಪರಿಹರಿಸಿಲ್ಲ. ಕೇವಲ ಮೀಟಿಂಗ್‍ನಲ್ಲಿ ಸೂಚನೆ ಕೊಡುವುದು ಮಾತ್ರ ಆಗಿದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಿಲ್ಲ. ಹೀಗೆ ಆದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆ ಪರಿಷ್ಕರಣೆ ಆಗಬೇಕು. ಪ್ರತಿ ನಗರದಲ್ಲಿ ವಿದ್ಯುತ್ ಚಿತಾಗಾರ ಸ್ಥಾಪಿಸಬೇಕು ಹಾಗೂ ಸ್ಮಶಾನಕ್ಕೆ ಸ್ಥಳ ಗುರುತಿಸಬೇಕು ಎಂದ ಅವರು, ರೇಶ್ಮೆ ಮಾರುಕಟ್ಟೆಯಲ್ಲಿ ಆನ್‍ಲೈನ್ ವಹಿವಾಟು ಇನ್ನೂ ಸರಿಯಾಗಿ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿದರು.

ರೇಶ್ಮೆ ರೀಲರ್ಸ್ ಹಾಗೂ ರೈತರು ಆನ್‍ಲೈನ್ ವ್ಯವಹಾರಕ್ಕೆ ಸಿದ್ದರಿದ್ದಾರೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಇದು ಜಾರಿಯಾಗಿಲ್ಲ. ರೈತರಿಗೆ ಮಾಹಿತಿ ನೀಡಲು ಮಾರುಕಟ್ಟೆಯಲ್ಲಿ ಫಲಕ ಅಳವಡಿಸಬೇಕು. ಜನವರಿ ಅಂತ್ಯದೊಳಗೆ ಆನ್‍ಲೈನ್ ವಹಿವಾಟು ಜಾರಿಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News