ಮಂಗಳೂರು –ಕೊಚ್ಚಿ ನೈಸರ್ಗಿಕ ಅನಿಲ ಪೈಪ್‌ಲೈನ್ ಪ್ರಧಾನಿಯಿಂದ ದೇಶಕ್ಕೆ ಸಮರ್ಪಣೆ

Update: 2021-01-05 09:05 GMT

ಮಂಗಳೂರು, ಜ.5: ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆ ದೇಶದ ಸುಸ್ಥಿರ ಆರ್ಥಿಕಾಭಿವೃದ್ಧಿಗೆ ಹಾಗೂ ಕರ್ನಾಟಕ-ಕೇರಳ ರಾಜ್ಯಗಳ ಸಕಾರಾತ್ಮಕ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಯೋಜನೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ವಿಡಿಯೋ ಕಾನ್ಫರೆನ್ಸ್  ಮೂಲಕ ಕರ್ನಾಟಕದ ಮಂಗಳೂರು– ಕೇರಳದ ಕೊಚ್ಚಿ ನಡುವಿನ ಗೇಲ್(ಇಂಡಿಯಾ) ಲಿಮಿಟೆಡ್‌ನ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್ ಅನ್ನು ದೇಶಕ್ಕೆ ಸಮರ್ಪಿಸಿ ಮಾತನಾಡುತ್ತಿದ್ದರು.

450 ಕಿ.ಮೀ. ಉದ್ದದ ಈ ಪೈಪ್ ಲೈನ್ ದೇಶಕ್ಕೆ ಸಮರ್ಪಿಸಿರುವುದು ನನಗೆ ಲಭಿಸಿದ ಗೌರವ. ‘ಒಂದು ದೇಶ ಒಂದು ಅನಿಲ ಸ್ಥಾವರ’ ಯೋಜನೆಯಡಿ ಈ ಪೈಪ್‌ಲೈನ್ ಯೋಜನೆ ಅನುಷ್ಠಾನಗೊಂಡಿದೆ. ಈ ನೈಸರ್ಗಿಕ ಅನಿಲ ಕೊಳವೆ ಮಾರ್ಗದಿಂದಾಗಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗುವುದಲ್ಲದೆ, ಎರಡು ರಾಜ್ಯಗಳ ಫಲಾನುಭವಿಗಳಿಗೆ ಸಾಗಾಟದ ವೆಚ್ಚ ಉಳಿಕೆಯಾಗಲಿದೆ. ಎಂಸಿಎಫ್ ಹಾಗೂ ಎಂಆರ್ ಪಿಎಲ್ ಗೆ ಅನಿಲ ಪೂರೈಕೆಯಿಂದ ರಸಗೊಬ್ಬರ ಉತ್ಪಾದನೆ ವೆಚ್ಚ ಕಡಿತಗೊಳಿಸಲಿದೆ. ಒಟ್ಟಾರೆಯಾಗಿ ಈ ಯೋಜನೆ ಕರಾವಳಿಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ಈ ಯೋಜನೆಯು ಭವಿಷ್ಯದಲ್ಲಿ ಅನೇಕ ಜನರ ಮೇಲೆ ಸಕಾರಾತ್ಮಕ  ಪರಿಣಾಮ ಬೀರಲಿದೆ. ಜನವರಿ 5 ಆತ್ಮನಿರ್ಭರ ಭಾರತದ ಅನ್ವೇಷಣೆಯಲ್ಲಿ ಒಂದು ಹೆಗ್ಗುರುತಿನ ದಿನವಾಗಲಿದೆ ಎಂದು ಪ್ರಧಾನಿ ನುಡಿದರು.

ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುರಳೀಧರನ್ , ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಉಪಸ್ಥಿತರಿದ್ದರು.
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕರ್ನಾಟಕದ ಅಭಿವೃದ್ಧಿ ಶಕೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದರು.

 ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್  ಮಾತನಾಡಿ, ಕೊಚ್ಚಿ- ಮಂಗಳೂರು ಪೈಪ್ ಲೈನ್ ಕೇರಳ ರಾಜ್ಯದ  ಅಭಿವೃದ್ಧಿಗೆ ಪೂರಕವಾದ ಮಹತ್ವದ ಯೋಜನೆಯಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮ ‘ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್’ರಚನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.  

3000 ಕೋಟಿ ರೂ.ಗಳ ಯೋಜನೆ

450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿ.ಎ.ಐ.ಎಲ್. (ಇಂಡಿಯಾ) ಲಿ., ನಿರ್ಮಿಸಿದೆ. ಇದು ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ,ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ (ಎನ್.ಎನ್.ಜಿ)  ಮರು ಹೊಂದಾಣಿಕೆಯಲ್ಲೂ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲ್ಲಪುರಂ, ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಹಾದೂ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ.

ಯೋಜನೆಯ ಒಟ್ಟು ವೆಚ್ಚ ಸುಮಾರು 3000 ಕೋಟಿ ರೂ.ಗಳಾಗಿದ್ದು, ಅದರ ನಿರ್ಮಾಣವು 12 ಲಕ್ಷ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು. ಕೊಳವೆ ಮಾರ್ಗ ಅಳವಡಿಕೆಯು ಎಂಜಿನಿಯರಿಂಗ್ ಸವಾಲಾಗಿತ್ತು, ಏಕೆಂದರೆ ಕೊಳವೆ ಮಾರ್ಗವು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು. ಇದನ್ನು ಅಡ್ಡಡ್ಡ ಕೊರೆಯುವ ವಿಧಾನದ ವಿಶೇಷ ತಂತ್ರಜ್ಞಾನದ ಮೂಲಕ ಮಾಡಲಾಯಿತು.

ಈ ಕೊಳವೆ ಮಾರ್ಗ ಪರಿಸರ ಸ್ನೇಹಿ ಮತ್ತು ಕೈಗೆಟಕುವ ದರದ ಇಂಧನವನ್ನು ಕೊಳವೆ ಮಾರ್ಗದ ನೈಸರ್ಗಿಕ ಅನಿಲ (ಪಿ.ಎನ್.ಜಿ.) ರೂಪದಲ್ಲಿ ಮನೆಗಳಿಗೆ ಪೂರೈಸಲಿದೆ ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿ.ಎನ್.ಜಿ.)ಯನ್ನು ಸಾರಿಗೆ ವಲಯಕ್ಕೆ ಸರಬರಾಜು ಮಾಡಲಿದೆ. ಇದು ನೈಸರ್ಗಿಕ ಅನಿಲವನ್ನು ಜಿಲ್ಲಾದ್ಯಂತದ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳಿಗೆ ಕೊಳವೆ ಮಾರ್ಗದಲ್ಲಿ ಪೂರೈಸಲಿದೆ. ಶುದ್ಧ ಇಂಧನದ ಬಳಕೆಯು ವಾಯು ಮಾಲಿನ್ಯವನ್ನು ನಿಗ್ರಹಿಸಿ, ವಾಯು ಗುಣಮಟ್ಟವನ್ನು ಸುಧಾರಿಸುವಂತೆ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News