"ಮಾಲಕನ ತಪ್ಪು ಸಾಬೀತಾಗುವ ಮುಂಚೆ ಆತನ ʼಜಾನುವಾರುಗಳನ್ನು ವಶಪಡಿಸುವʼ ಕಾನೂನನ್ನು ರದ್ದು ಮಾಡಿ"

Update: 2021-01-05 18:46 GMT

ಹೊಸದಿಲ್ಲಿ, ಜ.5: ಜಾನುವಾರುಗಳ ವಿರುದ್ಧ ಕ್ರೂರವಾಗಿ ವರ್ತಿಸಿದ ಆರೋಪ ಸಾಬೀತಾಗುವ ಮೊದಲೇ, ಮಾಲಕರಿಂದ ಜಾನುವಾರುಗಳನ್ನು ವಶಕ್ಕೆ ಪಡೆದು ಅವುಗಳನ್ನು ಗೋಶಾಲೆಗೆ ಒಪ್ಪಿಸಲು ಅವಕಾಶ ನೀಡುವ 2017ರ ಕಾನೂನನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಜಾನುವಾರುಗಳು ತಮ್ಮ ಮಾಲಕರಿಂದ ಕ್ರೂರ ಹಿಂಸೆಯನ್ನು ಅನುಭವಿಸಿವೆ ಅಥವಾ ಅವುಗಳನ್ನು ವಧೆಗಾಗಿ ಆಯ್ಕೆ ಮಾಡಲಾಗಿದೆ ಎಂಬ ಅನುಮಾನದ ಮೇಲೆ ಜಾನುವಾರುಗಳನ್ನು ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಡುವ ಈ ಕಾನೂನನ್ನು ರದ್ದುಪಡಿಸದಿದ್ದರೆ ತಡೆಯಾಜ್ಞೆ ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಈ ಪ್ರಾಣಿಗಳು ಕೆಲವರಿಗೆ ಜೀವನೋಪಾಯವಾಗಿದೆ. ಕೇವಲ ಅನುಮಾನದ ಆಧಾರದಲ್ಲಿ ಅವುಗಳನ್ನು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನಿಯಮದ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ . ಪ್ರಾಣಿಗಳ ವಿರುದ್ಧ ವಾಸ್ತವವಾಗಿ ಕ್ರೌರ್ಯ ನಡೆಯುತ್ತಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರಕಾರದ ಪ್ರತಿನಿಧಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಜಯಂತ್ ಕೆ ಸೂದ್ ಹೇಳಿದರು.

 2017ರಲ್ಲಿ ಅಧಿಸೂಚನೆ ಹೊರಡಿಸಲಾದ ‘ಪ್ರಾಣಿಗಳಿಗೆ ಕ್ರೌರ್ಯವನ್ನು ತಡೆಗಟ್ಟುವ (ಕೇಸ್ ಪ್ರಾಪರ್ಟಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ) ಕಾನೂನಿಗೆ’ ಸಂಬಂಧಿಸಿದ ಪ್ರಕರಣ ಇದಾಗಿದೆ. ಕೇಸ್ ಪ್ರಾಪರ್ಟಿ ಎಂದರೆ ಅಪರಾಧ ಮಾಡಿದಂತೆ ಕಂಡುಬರುವ ಅಥವಾ ಕಾಣಿಸಿಕೊಳ್ಳುವ ಸ್ವತ್ತು ಹಾಗೂ ಸಾಮಾಗ್ರಿ.

 ಪ್ರಾಣಿಗಳಿಗೆ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವ ಮಾಲಕನಿಂದ ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಧಿಕಾರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಮುಟ್ಟುಗೋಲು ಹಾಕಿಕೊಂಡ ಜಾನುವಾರುಗಳನ್ನು ಬಳಿಕ ಗೋಶಾಲೆ ಅಥವಾ ಪಶು ಚಿಕಿತ್ಸಾಲಯಕ್ಕೆ ಒಪ್ಪಿಸಲಾಗುತ್ತದೆ. ಅಲ್ಲದೆ, ಈ ಜಾನುವಾರುಗಳನ್ನು ಯಾರಿಗಾದರೂ ದತ್ತು ನೀಡಲೂ ಕಾನೂನಿನಲ್ಲಿ ಅವಕಾಶವಿದೆ.

ತಮ್ಮಲ್ಲಿರುವ ಜಾನುವಾರುಗಳನ್ನು ಅನಗತ್ಯವಾಗಿ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಲು ಈ ನಿಯಮವನ್ನು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ . ಸಮಾಜವಿರೋಧಿ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಳ್ಳಲು ಹಾಗೂ ಜಾನುವಾರು ವ್ಯಾಪಾರಿಗಳನ್ನು ಲೂಟಿ ಮಾಡಲು ಈ ನಿಯಮದ ಬಳಕೆಯಾಗುತ್ತಿದೆ. ಈ ಘಟನೆಗಳು ಸಮಾಜದ ಕೋಮು ಧ್ರುವೀಕರಣಕ್ಕೆ ಪ್ರಚೋದನೆ ನೀಡುತ್ತವೆ. ಇದಕ್ಕೆ ತಕ್ಷಣ ಮತ್ತು ಪರಿಣಾಮಕಾರಿ ತಡೆ ನೀಡದಿದ್ದರೆ ದೇಶದ ಸಾಮಾಜಿಕ ಚೌಕಟ್ಟಿನ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಜಾನುವಾರು ವ್ಯಾಪಾರಿಗಳ ಕ್ಷೇಮಾಭ್ಯುದಯ ಸಂಘದ ಪರ ವಕೀಲರು ವಾದ ಮಂಡಿಸಿದರು.

ಈ ಕಾನೂನನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದ್ದಾಗ, ನಿಯಮದ ಬಗ್ಗೆ ಮರುಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಮತ್ತು ತಿದ್ದುಪಡಿಯಾಗುವ ನಿಯಮದ ಬಗ್ಗೆ ಮರು ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿತ್ತು. ಆದರೆ ನಿಯಮ ತಿದ್ದುಪಡಿಯಾದ ಬಗ್ಗೆ ಸರಕಾರದಿಂದ ಇದುವರೆಗೂ ಅಧಿಸೂಚನೆ ಹೊರಬಿದ್ದಿಲ್ಲ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಸರಕಾರದ ಪ್ರತಿಕ್ರಿಯೆಗೆ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News