ಬೆಂಗಳೂರು: ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ; ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣಗಳಿಗೆ ಹಾನಿ

Update: 2021-01-05 15:26 GMT

ಬೆಂಗಳೂರು, ಜ.5: ನಗರದ ಹೊರವಲಯದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ನಡೆದಿದೆ.

ಶಕ್ತಿ ಅಕ್ಯುಮಲೇಟರ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಬ್ಯಾಟರಿಗಳು ಸೇರಿದಂತೆ ಇನ್ನಿತರೆ ಯಂತ್ರೋಪಕರಣಗಳು ಸುಟ್ಟುಹೋಗಿದ್ದು, ಕೋಟ್ಯಂತರ ರೂಪಾಯಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆ ವಿವರ: ಸಂಜೆ 4:30 ಸುಮಾರಿಗೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಆಗಷ್ಟೇ ಕಾರ್ಖಾನೆಯಲ್ಲಿ ಹತ್ತಾರು ಕಾರ್ಮಿಕರು ಕೆಲಸ ಆರಂಭಿಸಿದ್ದರು. ಕಾರ್ಖಾನೆಯೊಳಗೆ ಬೆಂಕಿಯನ್ನು ಕಂಡ ಕಾರ್ಮಿಕರು ಭಯಭೀತರಾಗಿ ಹೊರಗೆ ಓಡಿ ಬಂದರು. ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿತು. 

ಅಲ್ಲದೆ ಆವರಣದಲ್ಲಿನ ಇತರೆ ಕಾರ್ಖಾನೆಗಳ ಕಟ್ಟಡಕ್ಕೂ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿತು. ದೊಡ್ಡದಾಗಿರುವ ಈ ಕಾರ್ಖಾನೆಯಲ್ಲಿ ಬೆಂಕಿ ಧಗಧಗನೇ ಉರಿಯಲಾರಂಭಿಸಿತು. ಅವಘಡ ಸಂಭವಿಸುವ ಮೊದಲೇ ಕಾರ್ಮಿಕರು ಹೊರಗೆ ಬಂದಿದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಸುದ್ಧಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಾರ್ಖಾನೆ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿತ್ತು. ಸಮೀಪದಲ್ಲಿದ್ದ ಇತರೆ ಕಾರ್ಖಾನೆಗಳಿಗೂ ಬೆಂಕಿ ತಗಲುವ ಆತಂಕವಿತ್ತು ಎನ್ನಲಾಗಿದೆ. ಆದರೆ, ಹೆಚ್ಚುವರಿಯಾಗಿ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಂಡು ಬೆಂಕಿ ಶಮನ ಮಾಡಲಾಯಿತು.

ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಹಾಗೂ ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಬಂದು ಭಯಭೀತರಾಗಿ ವೀಕ್ಷಣೆ ಮಾಡಿದ ದೃಶ್ಯ ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News