ಮಹಿಳೆಯ ಪಾಲಿಗೆ ಅಸುರಕ್ಷಿತವಾದ ಮನೆ!

Update: 2021-01-06 06:44 GMT

 ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳಿಗೆ ಹಲವು ಆಯಾಮಗಳಿವೆ. ಅವಳ ಮೇಲೆ ನಡೆಯುವ ಅತ್ಯಾಚಾರಗಳನ್ನು, ಲೈಂಗಿಕ ದೌರ್ಜನ್ಯಗಳನ್ನಷ್ಟೇ ನಾವು ಗುರುತಿಸಿ ಮಹಿಳಾ ಶೋಷಣೆಯನ್ನು ಚರ್ಚಿಸುತ್ತಿದ್ದೇವೆ. ಭಾರತದಲ್ಲಿ ಮಹಿಳೆಯರಿಗೆ ರಸ್ತೆಗಳು ಮಾತ್ರವಲ್ಲ, ಮನೆ ಕೂಡ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ. ಗಂಡನೆಂದು ಕರೆಸಿಕೊಂಡವನು ಮನೆಯೊಳಗೆ ಎಲ್ಲ ಬಗೆಯ ದೌರ್ಜನ್ಯಗಳನ್ನು ಪತ್ನಿಯ ಮೇಲೆ ಎಸಗುವುದಕ್ಕೆ ಸರ್ವ ಸ್ವತಂತ್ರನಾಗಿದ್ದಾನೆ. ಮಹಿಳೆಯರು ಹೆಚ್ಚಾಗಿ ಅತ್ಯಾಚಾರಕ್ಕೆ ಒಳಗಾಗುವುದು ರಸ್ತೆಗಳಲ್ಲಿ ಅಲ್ಲ, ತಮ್ಮ ತಮ್ಮ ಪತಿಯ ಕೈಯಿಂದಲೇ ಇಂತಹ ದೌರ್ಜನ್ಯಗಳಿಗೆ ಒಳಗಾಗುವ ಸಂದರ್ಭಗಳಿವೆ. ಹೊರಗೆ ನಡೆದ ಅತ್ಯಾಚಾರ ಬಹಿರಂಗವಾಗುತ್ತದೆ. ಕನಿಷ್ಠ ಆರೋಪಿಗಳು ಜೈಲು ಪಾಲಾಗುತ್ತಾರೆ. ಆದರೆ ಮನೆಯೊಳಗೆ ನಡೆಯುವ ಅತ್ಯಾಚಾರಗಳು ಕೌಟುಂಬಿಕವಾಗಿ ಮಾನ್ಯತೆಯನ್ನು ಪಡೆದಿರುತ್ತವೆ. ಅನೇಕ ಸಂದರ್ಭದಲ್ಲಿ ತಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎನ್ನುವ ಅರಿವು ಮಹಿಳೆಗೇ ಇರುವುದಿಲ್ಲ. ಕೊರೋನ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ರೈತರ ಸಮಸ್ಯೆಗಳು ಚರ್ಚೆಯಾದಷ್ಟು ಮಹಿಳೆಯರ ಸಮಸ್ಯೆಗಳು ಚರ್ಚೆಯಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಪತಿ ಮನೆಯಲ್ಲೇ ಇರಬೇಕಾಗಿರುವುದರಿಂದ ಹೆಚ್ಚಿನ ಮನೆಗಳಲ್ಲಿ ಪತ್ನಿಯರು ಖುಷಿಯಾಗಿದ್ದರು ಎಂಬ ತಿಳುವಳಿಕೆಯನ್ನು ಸುಳ್ಳು ಎನ್ನುತ್ತದೆ ಸಮೀಕ್ಷೆ. ಆರ್ಥಿಕ ಹಿಂಜರಿತ, ನಿರುದ್ಯೋಗ ಇವೆಲ್ಲ ಒತ್ತಡದಿಂದ ಜರ್ಜರಿತನಾಗಿರುವ ಪುರುಷ ತನ್ನ ಅಸಹನೆಯನ್ನು ಮನೆಯೊಳಗಿರುವ ಮಹಿಳೆಯರ ಜೊತೆಗೆ ತೀರಿಸಿಕೊಂಡಿದ್ದಾನೆ ಎನ್ನುತ್ತದೆ ವರದಿ.

    ಕೊರೋನ ಸೋಂಕಿನ ಬಳಿಕ ದೇಶದಲ್ಲಿ ಮಹಿಳೆಯರ ವಿರುದ್ಧದ ಕೌಟುಂಬಿಕ ಹಿಂಸೆಯ ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿದೆ . ಲಾಕ್ ಡೌನ್ ಕಾಲದಲ್ಲಿ ಪತಿ ಅಥವಾ ಪೋಷಕರು ಮನೆಯಲ್ಲೇ ಇರುವ ಪರಿಸ್ಥಿತಿ ಸೃಷ್ಟಿಯಾದ್ದರಿಂದ ದಿನದ 24 ಗಂಟೆಯೂ ಮಹಿಳೆ ಕಿರಿಕಿರಿ ಅನುಭವಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ಲಾಕ್‌ಡೌನ್ ಘೋಷಣೆಯಾದಂದಿನಿಂದ ಭಾರತೀಯ ಮಹಿಳೆಯರು ಎದುರಿಸಿದ ಅತ್ಯಂತ ಕಠಿಣ ಸಮಸ್ಯೆ ಕೌಟುಂಬಿಕ ಹಿಂಸಾಚಾರವಾಗಿದೆ. ಲಾಕ್‌ಡೌನ್ ಹಂತಹಂತವಾಗಿ ಸಡಿಲಗೊಂಡರೂ ಮಹಿಳೆಯರ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಕೌಟುಂಬಿಕ ಸಮಸ್ಯೆಯ ಕುರಿತು ತಮಗೆ ಬರುತ್ತಿರುವ ದೂರಿನ ಕರೆಗಳ ಪ್ರಮಾಣ ಜುಲೈ ಬಳಿಕ ನಿರಂತರ ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಇರುವ ವ್ಯವಸ್ಥೆಯ ಸೂಕ್ತ ಬಳಕೆಯಿಂದ ಈ ಸಮಸ್ಯೆ ಉಪಶಮನಕ್ಕೆ ಮುಂದಾಗಬಹುದಿತ್ತು. ಆದರೆ ಲಾಕ್‌ಡೌನ್ ಸಂದರ್ಭ ಗುರುತಿಸಿದ ಅಗತ್ಯ ಸೇವೆಗಳ ಪಟ್ಟಿಯಲ್ಲಿ ಈ ವ್ಯವಸ್ಥೆಯನ್ನು ಸೇರಿಸದ ಕಾರಣ ಸಮಸ್ಯೆ ಹೆಚ್ಚಿದೆ. ಇದೇ ರೀತಿ, ಕೊರೋನ ಸಂದರ್ಭದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಿದೆ ಎನ್ನುತ್ತದೆ ವರದಿ. ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣ ಹಲವು ಬಾರಿ ನಡೆದಿದೆ. ಕೊರೋನ ಸಮಸ್ಯೆಯಿಂದ ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೌಟುಂಬಿಕ ಹಿಂಸೆ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ. ಮಹಿಳೆಯರನ್ನು ಗುರಿಯಾಗಿಸಿ ಆನ್‌ಲೈನ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಲೈಂಗಿಕ ನಿಂದನೆ ನಡೆಯುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.7ಮಾತ್ರವಾಗಿದೆ. ಇದನ್ನು ಗಮನಿಸಿರುವ ಸರಕಾರ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಘೋಷಿಸಿದೆ. ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಿಂದ ಹಿಡಿದು, ಮೂಲ ಸೌಕರ್ಯ(ಶೌಚಾಲಯ)ದವರೆಗೆ ಮಹಿಳೆಯರು ಅನುಭವಿಸುವ ಬವಣೆಯ ಬಗ್ಗೆ ಕಾಮನ್‌ವೆಲ್ತ್ ಮಾನವ ಹಕ್ಕು ಸಮಿತಿ ಬೆಳಕು ಚೆಲ್ಲಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕಾಗಿ ಉತ್ತರ ಪ್ರದೇಶ ಕುಖ್ಯಾತವಾಗಿದೆ. ಹೆಣ್ಣಿನ ಅತ್ಯಾಚಾರಗಳಿಗಾಗಿ ಗುರುತಿಸಿಕೊಂಡಿರುವ ಈ ರಾಜ್ಯ, ಕೌಟುಂಬಿಕ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಿರೀಕ್ಷಿಸುವುದು ಅಸಾಧ್ಯ. ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಮಹಿಳೆಯ ಕುರಿತಂತೆ ಹೊಂದಿರುವ ಮನಸ್ಥಿತಿ ಯಾವ ಕಾರಣಕ್ಕೂ ಕೌಟುಂಬಿಕ ದೌರ್ಜನ್ಯಕ್ಕೊಳಗಾಗುವ ಮಹಿಳೆಯರ ಪರವಾಗಿ ನಿಲ್ಲದು.

ಲಾಕ್‌ಡೌನ್ ಆನಂತರ ಹೆಚ್ಚಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾರಣಗಳನ್ನು ಹುಡುಕಿ ಅದಕ್ಕೊಂದು ಪರಿಹಾರವನ್ನು ನೀಡುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈಗಾಗಲೇ ಅತಿಯಾದ ಕೆಲಸದ ಒತ್ತಡದಲ್ಲಿರುವ ಪೊಲೀಸರು ಪ್ರತೀ ಮನೆಯ ಮೇಲೆ ಕಣ್ಣಿಡುವುದು ಸಾಧ್ಯವಾಗದ ಮಾತು. ಆದ್ದರಿಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ(ಕೌನ್ಸೆಲಿಂಗ್), ದೂರು ದಾಖಲಾತಿ ಮತ್ತು ಕಾನೂನು ನೆರವು ಸುಲಭದಲ್ಲಿ ಲಭ್ಯವಾಗಿಸಬೇಕು. ವಿಷಯದ ಗಂಭೀರತೆಯನ್ನು ಗಮನಿಸಿ, ನೀತಿ ಆಯೋಗದ ವರದಿಯಲ್ಲಿ ಸೂಚಿಸಿದ ಸಂಭಾವ್ಯ ಉಪಕ್ರಮವನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸಬೇಕಿದೆ. ಆನ್‌ಲೈನ್ ದೂರು ದಾಖಲಿಸುವ ಲಿಂಕ್ ಒದಗಿಸುವುದು, ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳುವಿಕೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ, ಹಿಂಸಾಚಾರ ತಡೆ ಮತ್ತು ಪ್ರತಿಕ್ರಿಯೆಗೆ ಈಗ ಇರುವ ಹಾಟ್‌ಲೈನ್ ಕರೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸಬೇಕಾಗಿದೆ. ಮಹಿಳೆಯರ ಆಶ್ರಯ ತಾಣ, ಅತ್ಯಾಚಾರ ಸಂತ್ರಸ್ತೆಯರ ಸಲಹಾ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿರುವ ಸಮಾಲೋಚಕರ ಬಗ್ಗೆ ವಿವರವನ್ನು ಮಹಿಳೆಯರಿಗೆ ಸುಲಭದಲ್ಲಿ ಲಭ್ಯವಾಗಿಸಬೇಕು. ಆಪ್ತ ಸಮಾಲೋಚನೆಯೆಂದರೆ ಕೇವಲ ಮಹಿಳೆಯರಿಗೆ ಮಾತ್ರ ಸಲಹೆಯಲ್ಲ, ಕುಟುಂಬದವರನ್ನೂ ಈ ಪ್ರಕ್ರಿಯೆಗೆ ಒಳಪಡಿಸಬೇಕಾಗಿದೆ. ಹಿಂಸೆ ಎದುರಿಸುತ್ತಿರುವವರಿಗೆ ಮಾನಸಿಕ ಆರೋಗ್ಯ ಥೆರಪಿ ಮತ್ತು ಟೆಲಿಮೆಡಿಸಿನ್ ಸೌಲಭ್ಯವನ್ನೂ ಒದಗಿಸಬೇಕು. ಕೆಲವು ರಾಜ್ಯಗಳು ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿವೆ. ಉದಾಹರಣೆಗೆ ಒಡಿಶಾ ಮತ್ತು ತಮಿಳುನಾಡಿನಲ್ಲಿ ಫೋನ್-ಅಪ್ ಕಾರ್ಯಕ್ರಮದ ಮೂಲಕ ಸಂಬಂಧಿತ ಇಲಾಖೆಗಳು ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತರು, ಈ ಹಿಂದೆ ಕೌಟುಂಬಿಕ ಹಿಂಸೆಯ ಬಗ್ಗೆ ದೂರು ನೀಡಿದ್ದ ಮಹಿಳೆಯರ ಮೇಲೆ ನಿಕಟ ನಿಗಾ ವಹಿಸುತ್ತಾರೆ. ಕೇರಳ ಸರಕಾರ 24 ಗಂಟೆಯೂ ಕಾರ್ಯ ನಿರ್ವಹಿಸುವ ವಾಟ್ಸ್‌ಆ್ಯಪ್ ಹೆಲ್ಪ್‌ಲೈನ್ ನಂಬರ್‌ನ ಮೂಲಕ ಈ ಕುರಿತ ದೂರು ದಾಖಲಿಸಲು ಅನುವು ಮಾಡಿಕೊಟ್ಟಿದೆ. ರಾಷ್ಟ್ರೀಯ ಮಹಿಳಾ ಆಯೋಗವೂ ಇಂತಹ ವಾಟ್ಸ್‌ಆ್ಯಪ್ ಸೇವೆ ಆರಂಭಿಸಿದೆ.

ಅಗತ್ಯವಿರುವ ಮಹಿಳೆಯರಿಗೆ ಪರ್ಯಾಯ ವಾಸಸ್ಥಳದ ವ್ಯವಸ್ಥೆ ಮಾಡಬೇಕು. ಬಡ, ದುರ್ಬಲ ವರ್ಗದವರಿಗೆ ನೇರ ನಗದು ವರ್ಗಾವಣೆ ಮತ್ತು ಪಡಿತರ ಒದಗಿಸುವುದು ಸಮಸ್ಯೆಗೆ ತುಸುಮಟ್ಟಿನ ಪರಿಹಾರ ಒದಗಿಸಬಹುದು. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳ ಸ್ವಯಂಸೇವಕರನ್ನು ನಿಯೋಜಿಸಬೇಕು. ಸುರಕ್ಷಿತ ನಗರ ಯೋಜನೆಯಡಿ ಸೂಚಿಸಿರುವಂತೆ ಸಾರ್ವಜನಿಕ ಸಾರಿಗೆಯಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಸಬೇಕು. ಮೂಲಸೌಕರ್ಯ ಬಳಸಿಕೊಂಡು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಮಹಿಳೆಯಿಂದಲೇ ಮನೆ. ಮಹಿಳೆ ಸುರಕ್ಷಿತವಾಗಿಲ್ಲದ ಮನೆಯಲ್ಲಿ ಮಕ್ಕಳೂ ಸುರಕ್ಷಿತವಾಗಿರಲಾರರು. ಮಕ್ಕಳು ನಮ್ಮ ಭವಿಷ್ಯ ಎಂಬ ನಂಬಿಕೆ ಸತ್ಯವಾಗಬೇಕಾದರೆ ಆ ಭವಿಷ್ಯವನ್ನು ರೂಪಿಸಲು ಸಕಲ ಕೊಡುಗೆ ನೀಡುವ ಮಹಿಳೆಯ ಬದುಕು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News