ಕೊರೋನ ಕಾಲದ ಅಪಾಯಕಾರಿ ‘ಲಸಿಕೆ ರಾಷ್ಟ್ರೀಯತೆ’ ರಾಜಕಾರಣ

Update: 2021-01-07 06:21 GMT

ಕೊರೋನ ವೈರಸ್ ಸೋಂಕಿನ ಹಾವಳಿಯಿಂದಾಗಿ 2020ನೇ ಇಸವಿಯು ಮಾನವ ಇತಿಹಾಸದಲ್ಲೇ ಅತ್ಯಂತ ಸಂಕಷ್ಟಕರ ವರ್ಷಗಳಲ್ಲೊಂದಾಗಿದೆ. ಈ ವೈರಸ್ ಇಡೀ ಜಗತ್ತಿನ ಜನಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಕೊರೋನದಿಂದಾಗಿ ಆಧುನಿಕ ವಿಜ್ಞಾನ ಹಾಗೂ ಮಾನವ ಕುಲವು ಅತ್ಯಂತ ಕಷ್ಟಕರವಾದ ಸಮಯವನ್ನು ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ವಿವಿಧ ದೇಶಗಳು ಈ ಕೊರೋನವನ್ನು ತಮ್ಮ ತಮ್ಮ ರಾಜಕೀಯಗಳಿಗಾಗಿ ಬಳಸಿಕೊಂಡಿವೆ. ತಮ್ಮ ವೈಫಲ್ಯಗಳನ್ನು ಸಾಧನೆಗಳಾಗಿ ಬಿಂಬಿಸುವುದಕ್ಕೆ ಚೀನಾ, ಅಮೆರಿಕ ಮಾತ್ರವಲ್ಲ ಭಾರತವೂ ಸಾಕಷ್ಟು ಪ್ರಯತ್ನ ಪಡುತ್ತಾ ಬಂದಿದೆ. ಆರಂಭದಲ್ಲಿ ಕೊರೋನವನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಅಸ್ತಿತ್ವದಲ್ಲಿರುವ ಜಾತಿ, ಅಸ್ಪಶ್ಯತೆಯನ್ನು ಸಮರ್ಥಿಸಲು ಯತ್ನಿಸಿತು. ‘ನಮಸ್ತೆ’ಯನ್ನು ಇಡೀ ವಿಶ್ವ ಒಪ್ಪಿಕೊಂಡಿದೆ ಎಂದು ಸ್ವತಃ ಪ್ರಧಾನಿಯೇ ಹೇಳಿಕೆ ನೀಡಿದರು. ಇದನ್ನೇ ಕೊರೋನ ಕಾಲದ ಭಾರತದ ಸಾಧನೆಯಾಗಿ ಬಿಜೆಪಿ ಬಿಂಬಿಸಲು ಯತ್ನಿಸಿತು. ತಟ್ಟೆ, ದೀಪಗಳಿಂದ ಕೊರೋನ ಓಡಿಸಲು ಯತ್ನಿಸಿ ಭಾರತ ವಿಶ್ವದ ಮುಂದೆ ನಗೆಪಾಟಲಿಗೀಡಾಯಿತು. ಯೋಗದಿಂದ ಕೊರೋನಾ ವಾಸಿಯಾಗುತ್ತದೆ ಎಂದು ಹೇಳಿ ಯೋಗದ ಹಿರಿಮೆಯನ್ನು ಘೋಷಿಸಲಾಯಿತು.

ವಿಶ್ವ ಕೊರೋನಕ್ಕಾಗಿ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಸ್ವಯಂಘೋಷಿತ ಬಾಬಾ ರಾಮ್‌ದೇವ್ ಒಂದೇ ತಿಂಗಳಲ್ಲಿ ಲಸಿಕೆಯೊಂದನ್ನು ತಯಾರಿಸಿ ‘ಕೊರೋನಕ್ಕೆ ಔಷಧಿ ಕಂಡು ಹಿಡಿದಿದ್ದೇನೆ’ ಎಂದು ಘೋಷಿಸಿದರು. ಆದರೆ ಸರಕಾರ ಎಚ್ಚರಿಕೆಯನ್ನು ನೀಡಿದ ಬಳಿಕ ತಮ್ಮ ಹೇಳಿಕೆಯಿಂದ ಹಿಂದಕ್ಕೆ ಸರಿದರು. ದುರಂತವೆಂದರೆ, ಹಿಂದುತ್ವ ರಾಜಕೀಯದ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಜೆಪಿ ಇದೀಗ ಕೊರೋನ ಕಾಲದಲ್ಲಿ ‘ಲಸಿಕೆ ರಾಷ್ಟ್ರೀಯತೆ’ಯ ರಾಜಕೀಯಕ್ಕೆ ಹೊರಟಿದೆ. ಆ ಮೂಲಕ ಕೊರೋನ ನಿರ್ವಹಣೆಯ ಎಲ್ಲ ವೈಫಲ್ಯಗಳನ್ನು ಮುಚ್ಚಿ ಹಾಕಲು ಹವಣಿಸುತ್ತಿದೆ. ಆದುದರಿಂದಲೇ ಭಾರತ ಸರಕಾರ ಆತುರಾತುರವಾಗಿ ಸ್ವದೇಶಿ ಲಸಿಕೆಯೊಂದನ್ನು ದೇಶದ ಜನರ ಮೇಲೆ ಹೇರುವುದಕ್ಕೆ ಮುಂದಾಗಿದೆ. ಭಾರತ ಸರಕಾರವು ಈಗಾಗಲೇ ಸ್ವದೇಶಿ ಉತ್ಪಾದಿತ ಕೊರೋನ ಲಸಿಕೆಗೆ ಅನುಮೋದನೆ ನೀಡಿದೆ. ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ದೊರೆತಿರುವುದನ್ನು ಇದೀಗ ಹಲವು ತಜ್ಞರು ಪ್ರಶ್ನಿಸುತ್ತಿದ್ದಾರೆ.

ಭಾರತ್ ಬಯೋಟೆಕ್ ಈವರೆಗೂ ತನ್ನ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿಲ್ಲ. ಅದರ ಮೊದಲನೇ ಹಂತ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಯಾವ ರೀತಿಯ ಫಲಿತಾಂಶ ಲಭ್ಯವಾಗಿದೆ ಎನ್ನುವುದರ ಮಾಹಿತಿಯನ್ನು ಸರಕಾರ ಮುಚ್ಚಿಟ್ಟಿದೆ. ಭಾರತದಂತಹ ಅಗಾಧ ಜನಸಂಖ್ಯೆಯ ದೇಶದಲ್ಲಿ ಮೂರನೇ ಹಂತದ ಪ್ರಯೋಗವನ್ನು ಪೂರೈಸದ ಲಸಿಕೆಯನ್ನು ಬಿಡುಗಡೆ ಮಾಡುವುದು ವಿಶ್ವಸನೀಯವಾಗಲಾರದು. ಮೊದಲನೇ ಹಂತ ಹಾಗೂ ಎರಡನೇ ಹಂತದಲ್ಲಿ ಅತ್ಯಂತ ಸಣ್ಣ ಪ್ರಮಾಣದ ಜನರ ಮೇಲೆ ಮಾತ್ರ ಪ್ರಯೋಗಿಸಿದ ಲಸಿಕೆಗೆ ತರಾತುರಿಯಲ್ಲಿ ಯಾಕೆ ಅನುಮೋದನೆಯನ್ನು ನೀಡಲಾಯಿತು ಎನ್ನುವುದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಫೈಝರ್-ಬಯೋಟೆಕ್ ಹಾಗೂ ಮೊಡೆರ್ನಾ ನಿರ್ಮಿತ ಲಸಿಕೆಗೆ ಬ್ರಿಟನ್ ಅನುಮೋದನೆ ನೀಡುವವರೆಗೂ ಅವುಗಳಿಗೆ ಅನುಮತಿಯನ್ನು ನೀಡಲು ಅಮೆರಿಕದ ಆಹಾರ ಹಾಗೂ ಔಷಧಿ ಆಡಳಿತ (ಎಫ್‌ಡಿಎ) ಇಲಾಖೆಯು ಹಿಂದೇಟು ಹಾಕಿತ್ತು. ಕೊರೋನ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್ ಆಗಿದೆ. ಆದಾದ ನಂತರ ಹಲವಾರು ದೇಶಗಳು ಫೈಝರ್-ಬಯೋಎನ್‌ಟೆಕ್‌ನ ಲಸಿಕೆಗೆ ಅನುಮತಿ ನೀಡಿದರೆ, ಇನ್ನು ಕೆಲವು ದೇಶಗಳು ಸ್ವದೇಶಿ ನಿರ್ಮಿತ ಲಸಿಕೆಗಳಿಗೆ ಹಸಿರುನಿಶಾನೆ ತೋರಿಸಿವೆ.

ಇತರ ದೇಶಗಳ ಜೊತೆಗೆ ಸ್ಪರ್ಧಿಸಲು ಮತ್ತು ಸ್ವದೇಶಿ ಹಿರಿಮೆಯನ್ನು ಎತ್ತಿ ಹಿಡಿಯಲು ಸರಕಾರ ಲಸಿಕೆಯ ಕುರಿತಂತೆ ಆತುರದ ನಿರ್ಧಾರವನ್ನು ತಾಳಿದೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಭಾರತದಂತಹ ದೇಶದಲ್ಲಿ ಕೊರೋನಕ್ಕಿಂತ ಕ್ಷಯದಂತಹ ರೋಗಗಳಿಗೆ ಹೆಚ್ಚು ಹಣ ಹೂಡಿಕೆಯಾಗಬೇಕಾಗಿದೆ. ಕೊರೋನದಿಂದಾಗಿ ದೇಶದಲ್ಲಿ ಕ್ಷಯ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿದೆ ಮಾತ್ರವಲ್ಲ ಕ್ಷಯರೋಗಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಸೋಂಕು ರೋಗಕ್ಕಾಗಿ ಹಾಗೂ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯನ್ನು ಪೂರ್ಣಗೊಳಿಸಿರದ ಲಸಿಕೆಗೆ ಕೇಂದ್ರ ಸರಕಾರವು 70 ಸಾವಿರ ಕೋಟಿ ರೂ.ಯಿಂದ 1 ಲಕ್ಷ ಕೋಟಿ ರೂ.ವರೆಗೆ ಖರ್ಚು ಮಾಡಲು ಯಾಕೆ ಸಿದ್ಧ್ದವಿದೆಯೆಂಬ ಪ್ರಶ್ನೆಯು ಸಹಜವಾಗಿಯೇ ಉದ್ಭವಿಸುತ್ತದೆ. ಕೋವ್ಯಾಕ್ಸಿನ್ ಉತ್ಪಾದಿಸುವ ಕಂಪೆನಿಯಾದ ಭಾರತ್ ಬಯೋಟೆಕ್, ಲಸಿಕೆಯ ಕುರಿತಾದ ಯಾವುದೇ ದತ್ತಾಂಶವನ್ನು ಸಾರ್ವಜನಿಕರ ಮುಂದೆ ಈವರೆಗೆ ಬಹಿರಂಗ ಪಡಿಸಿಲ್ಲ ಮತ್ತು ಅದಕ್ಕೆ ಸಿದ್ಧವೂ ಇಲ್ಲ. ಆಶ್ಚರ್ಯಕರವೆಂದರೆ, ಈ ಲಸಿಕೆಯು ಶೇ.110ರಷ್ಟು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆಯೆಂದು ಸರಕಾರಿ ಅಧಿಕಾರಿಗಳು ಕೊಚ್ಚಿಕೊಳ್ಳುತ್ತಿದ್ದಾರೆ. ಆಧುನಿಕ ವಿಜ್ಞಾನದಲ್ಲಿ ಯಾವುದೇ ಲಸಿಕೆಗೂ ಶೇ.99ರಷ್ಟು ಪರಿಣಾಮಕಾರಿತ್ವವನ್ನು ಸಾಧಿಸುವುದು ಸಾಧ್ಯವಿಲ್ಲ. ಹಲವಾರು ದಶಕಗಳ ಕಾಲ ಲಸಿಕೆ ನೀಡಿಕೆಯ ಅಭಿಯಾನವನ್ನು ನಿರಂತರವಾಗಿ ನಡೆಸಿದ ಬಳಿಕವಷ್ಟೇ ಭಾರತದಲ್ಲಿ ಪೋಲಿಯೊ ನಿರ್ಮೂಲನೆಗೊಂಡಿತೆಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ.

ಒಂದನ್ನು ಗಮನಿಸಬೇಕು. ಆತುರಾತುರವಾಗಿ ಲಸಿಕೆಗಳನ್ನು ಪ್ರಯೋಗಿಸುವುದು ಭಾರತದಂತಹ ದೇಶಗಳಿಗೆ ಒಳ್ಳೆಯದಲ್ಲ. ಇಂತಹ ಆತುರದ ನಿರ್ಧಾರಗಳಿಗಾಗಿ ಭಾರತ ಈಗಾಗಲೇ ಸಾಕಷ್ಟು ಬೆಲೆ ತೆತ್ತಿದೆ. ತಂತ್ರಜ್ಞಾನದ ಏಕಪಕ್ಷೀಯ ದುರ್ಬಳಕೆ ಹಾಗೂ ಲಾಬಿಗಳ ಪ್ರಭಾವದಿಂದ ಭಾರತದಲ್ಲಿ ಬಿಡುಗಡೆ ಮಾಡಲಾದ ಪೋಲಿಯೊ ಲಸಿಕೆಯೊಂದು 17 ವರ್ಷಗಳ ಅವಧಿಯಲ್ಲಿ (2001-2017) 4.91 ಲಕ್ಷಕ್ಕೂ ಅಧಿಕ ಮಕ್ಕಳನ್ನು ಪಾರ್ಶ್ವವಾಯು ಪೀಡಿತರಾಗುವಂತೆ ಮಾಡಿರುವುದನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ. ಒಂದು ವೇಳೆ ಲಸಿಕೆ ನೀಡಿಕೆಯಲ್ಲಿ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಈ ದುರಂತವನ್ನು ತಪ್ಪಿಸಬಹುದಾಗಿತ್ತು. ಕೊರೋನ ಲಸಿಕೆ ಮಾನವ ಇತಿಹಾಸದಲ್ಲೇ ಅತ್ಯಂತ ಶೀಘ್ರವಾಗಿ ಸಿದ್ಧಗೊಂಡಿರುವ ಲಸಿಕೆ. ಅನೇಕ ಸಂದರ್ಭದಲ್ಲಿ ಬೃಹತ್ ಕಂಪೆನಿಗಳು ಭಾರತದಂತಹ ದೇಶಗಳನ್ನು ಗಿನಿಪಿಗ್ ಆಗಿ ಬಳಸುವ ಸಾಧ್ಯತೆಗಳಿರುತ್ತದೆ. ಆದುದರಿಂದಲೇ ಲಸಿಕೆಯನ್ನು ಸರಕಾರ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಳ್ಳದೆ, ಸಾವಧಾನದಿಂದ ಹೆಜ್ಜೆ ಇಡಬೇಕು. ಇಷ್ಟೊಂದು ಪ್ರಮಾಣದಲ್ಲಿ ಈ ಲಸಿಕೆಗೆ ಹಣವನ್ನು ಹೂಡಿ ಬಳಿಕ ಲಸಿಕೆ ದುಷ್ಪರಿಣಾಮ ಬೀರಿದ್ದೇ ಆದಲ್ಲಿ ಅದು ದೇಶಕ್ಕೆ ತೆರಬೇಕಾದ ಬೆಲೆ ಊಹಿಸುವುದಕ್ಕೆ ಅಸಾಧ್ಯ.

2020ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿತ್ತೆಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಬೃಹತ್ ಜನಸಂಖ್ಯೆ ಹಾಗೂ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರವಾದ ಭಾರತವು ಪ್ರತಿಯೊಂದು ಕಾರ್ಯಕ್ರಮ, ಯೋಜನೆಗಳಿಗೂ ಅನುದಾನವನ್ನು ಬಿಡುಗಡೆಗೊಳಿಸುವ ಮುನ್ನ ವಿವೇಚನೆಯನ್ನು ಹೊಂದಿರಬೇಕು. ವಿವೇಚನೆಯಿಲ್ಲದೆ ಮಾಡಿದ ನೋಟು ನಿಷೇಧ, ಜಿಎಸ್‌ಟಿ, ಲಾಕ್‌ಡೌನ್ ನಿರ್ಧಾರಗಳು ಈಗಾಗಲೇ ದೇಶವನ್ನು ಚಿಂದಿಮಾಡಿದೆ. ಇದೀಗ ತನ್ನ ‘ಲಸಿಕೆ ರಾಷ್ಟ್ರೀಯವಾದ’ವನ್ನು ಪ್ರಚುರ ಪಡಿಸುವುದಕ್ಕಾಗಿ ಜನರ ಹಣದ ಜೊತೆಗೆ, ಜನರ ಆರೋಗ್ಯದ ಜೊತೆಗೆ ಸರಕಾರ ಚೆಲ್ಲಾಟವಾಡಲು ಹೋದರೆ ಅದರ ಪರಿಣಾಮ ಇನ್ನಷ್ಟು ಭೀಕರವಾಗಲಿದೆ. ಭಾರತದಲ್ಲಿ ಸಾಧ್ಯವಾದಷ್ಟು ಶೀಘ್ರದಲ್ಲೇ ಕೊರೋನ ಮೂಲೋತ್ಪಾಟನೆಯಾಗಬೇಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು ನಮ್ಮ ‘ಲಸಿಕಾ ರಾಷ್ಟ್ರವಾದ’ವನ್ನು ಸಾಬೀತುಪಡಿಸಲು, ಎರಡನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ಮಾತ್ರವೇ ಪೂರ್ಣಗೊಳಿಸಿರುವ ಲಸಿಕೆಯನ್ನು ನೀಡುವುದು ಎಷ್ಟು ಸರಿ? ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷಾ ದತ್ತಾಂಶವನ್ನು ಬಿಡುಗಡೆಗೊಳಿಸುವವರೆಗೆ ಹಾಗೂ ಫೈಝರ್-ಬಯೋಎನ್‌ಟೆಕ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಆ್ಯಸ್ಟ್ರಝೆನೆಕ ಲಸಿಕೆಗಳು ಪಾಶಾತ್ಯ ದೇಶಗಳಲ್ಲಿ ಎಷ್ಟರ ಮಟ್ಟಿಗೆ ಸಫಲತೆಯಿಂದ ಕಾರ್ಯನಿರ್ವಹಿಸುತ್ತವೆಂಬುದನ್ನು ಸ್ವಲ್ಪ ಸಮಯದವರೆಗಾದರೂ ಕಾದು ನೋಡಬೇಕಾಗಿದೆ. ಸರಕಾರದ ಇನ್ನೊಂದು ಪ್ರಮಾದವನ್ನು ತಾಳಿಕೊಳ್ಳುವ ಯಾವುದೇ ಶಕ್ತಿ ಸದ್ಯಕ್ಕೆ ಭಾರತಕ್ಕೆ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News