60 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ರಾಜಸ್ವ ನಿರೀಕ್ಷಕ ಎಸಿಬಿ ಬಲೆಗೆ, ಇನ್‍ಸ್ಪೆಕ್ಟರ್ ಪರಾರಿ

Update: 2021-01-08 16:20 GMT
ಆರ್.ಐ. ಪುಟ್ಟಹನುಮಯ್ಯ 

ಬೆಂಗಳೂರು, ಜ.8: ಜಮೀನಿನ ದಾಖಲಾತಿ ಮಾಡಿಕೊಡುವ ಕೆಲಸಕ್ಕೆ 60 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣವೊಂದನ್ನು ಎಸಿಬಿ ಭೇದಿಸಿದ್ದು, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕನೋರ್ವ(ಆರ್‍ಐ) ಬಲೆಗೆ ಬಿದ್ದರೆ, ಪೊಲೀಸ್ ಇನ್ಸ್‍ಪೆಕ್ಟರ್ ಪರಾರಿಯಾಗಿದ್ದಾರೆ.

ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ(ಆರ್‍ಐ) ಪುಟ್ಟಹನುಮಯ್ಯ ಯಾನೆ ಪ್ರವೀಣ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೇ ಪ್ರಕರಣದಲ್ಲಿ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್, ಪೊಲೀಸ್ ಇನ್‍ಸ್ಪೆಕ್ಟರ್ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ ಎಂದು ಎಸಿಬಿ ತಿಳಿಸಿದೆ.

ಏನಿದು ಪ್ರಕರಣ?: ನಗರದ ನಿವಾಸಿಯೊಬ್ಬರು ಬೆಂಗಳೂರು ಉತ್ತರ ತಾಲೂಕು ಚಿಕ್ಕಜಾಲ ಹೋಬಳಿಯಲ್ಲಿ 2018ನೇ ಸಾಲಿನಲ್ಲಿ ಐದು ಎಕರೆ ಭೂಮಿಯನ್ನು ಖರೀದಿಸಿದ್ದರು. ಆದರೆ, ಜಮೀನಿನ ಹಿಂದಿನ ಮಾಲಕರು ಇದೇ ಜಾಗವನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡುವ ಸಲುವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು.

ಈ ಸಂಬಂಧ ನ್ಯಾಯಾಲಯದಲ್ಲಿ  ಧಾವೆ  ಹೂಡಿದ್ದರು. ನಂತರ ನ್ಯಾಯಾಲಯವು ದೂರುದಾರರ ಪರವಾಗಿ ತಾತ್ಕಾಲಿಕವಾಗಿ ತಡೆಯಾಜ್ಞೆಯನ್ನು ನೀಡಿದ ಹಿನ್ನೆಲೆ ಜಮೀನಿನ ಪೋಡಿ, ಪವತಿ ಖಾತೆ ಮತ್ತು ಮ್ಯುಟೇಷನ್ ಅನ್ನು ಮಾಡಿಕೊಡುವಂತೆ ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಂಬಂಧ ದಾಖಲಾತಿ ಮಾಡಿಕೊಡಲು ಪುಟ್ಟಹನುಮಯ್ಯ 50 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.

ಇನ್ನು, ಇದೇ ಜಮೀನಿಲ್ಲಿ ನ್ಯಾಯಾಲಯದಲ್ಲಿ ಧಾವೆ ಇರುವ ಬಗ್ಗೆ ಫಲಕ ಅಳವಡಿಸಲು ಮತ್ತು ಸೂಕ್ತ ರಕ್ಷಣೆ ನೀಡುವ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ 10 ಲಕ್ಷ  ರೂ. ಲಂಚದ  ಬೇಡಿಕೆ ಇಟ್ಟಿರುವ ಬಗ್ಗೆ ದೂರು ದಾಖಲಾಗಿತ್ತು.

ಇದರನ್ವಯ ಕಾರ್ಯಾಚರಣೆ ನಡೆಸಿದ ಎಸಿಬಿ ತನಿಖಾಧಿಕಾರಿಗಳು, ಪುಟ್ಟ ಹನುಮಯ್ಯ ಮುಂಗಡವಾಗಿ 5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದರೆ, ಚಿಕ್ಕಜಾಲ ಪೊಲೀಸ್ ಠಾಣೆ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ರಾಜು ಎಂಬಾತ 6 ಲಕ್ಷ ಲಂಚಕ್ಕೆ ಪಡೆಯುವಾಗ ಸಿಕ್ಕಿದ್ದಾನೆ. ಇನ್ನು, ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಜಾಲ ಠಾಣೆಯ ಇನ್‍ಸ್ಪೆಕ್ಟರ್ ಯಶವಂತ್ ತಲೆಮರೆಸಿಕೊಂಡಿರುವುದಾಗಿ ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News