ಅಂದಿನ ಪೋಲಿಯೊ ಪೀಡಿತ ಬಳೆ ಮಾರಾಟಗಾರ ಇಂದು ಐಎಎಸ್ ಅಧಿಕಾರಿ

Update: 2021-01-10 10:48 GMT
photo/facebook

ಜಾರ್ಖಂಡ್‌,ಜ.10:ವೈಯಕ್ತಿಕ ಪ್ರತಿಭೆಯಿಂದ ಸಾಧಿಸಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಕೆಲಸದಲ್ಲಿ ಶ್ರದ್ಧೆ ಮತ್ತು ಸಾಧಿಸಬೇಕೆನ್ನುವ ಛಲವಿದ್ದರೆ ಯಾವುದೇ ವ್ಯಕ್ತಿಯೂ ಯಶಸ್ಸಿನ ಉತ್ತುಂಗವನ್ನು ತಲುಪಲು ಸಾಧ್ಯ.ಯಾವುದೇ ಸಮಯದಲ್ಲಿಯೂ ಬದುಕು ಬದಲಾಗಬಹುದು ಮತ್ತು ಇದಕ್ಕಾಗಿ ಮಾಡಬೇಕಿರುವುದು ಇಷ್ಟೇ,ಎತ್ತರದ ಗುರಿಯನ್ನುಟ್ಟುಕೊಂಡು ಅದನ್ನು ತಲುಪಲು ಶ್ರಮಿಸುವುದು. ಎಳವೆಯಲ್ಲಿ ಬಳೆಗಳನ್ನು ಮಾರಾಟ ಮಾಡಿ ಕುಟುಂಬದ ತುತ್ತಿನ ಚೀಲಗಳನ್ನು ತುಂಬಲು ವಿಧವೆ ತಾಯಿಗೆ ನೆರವಾಗುತ್ತಿದ್ದ ಪೋಲಿಯೊ ಪೀಡಿತ ಬಾಲಕ ರಮೇಶ್ ಘೋಲಪ್ ಇಂದು ಜಾರ್ಖಂಡ್ ಸರಕಾರದ ಶಕ್ತಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿರುವುದು ಇದಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ.

2012ನೇ ತಂಡದ ಐಎಎಸ್ ಅಧಿಕಾರಿಯಾಗಿರುವ ರಮೇಶ್ ಒಂಭತ್ತು ವರ್ಷಗಳ ಬಳಿಕ ಇಂದು ಸರಕಾರದ ಉನ್ನತ ಹುದ್ದೆಗೆ ತಲುಪಿದ್ದಾರೆ. ಈ ಮಟ್ಟವನ್ನು ಏರಲು ಅವರು ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಅನುಭವಿಸಿದ್ದಾರೆ. ಈ ಏಳುಬೀಳುಗಳು ಅವರಿಂದು ಏನಾಗಿದ್ದಾರೆಯೋ ಅದನ್ನು ಆಗುವುದನ್ನು ತಡೆಯಲಿಲ್ಲ.
‘ಬೆಟರ್ ಇಂಡಿಯಾ ’ಅನಾವರಣಗೊಳಿಸಿರುವ ರಮೇಶರ ಬದುಕಿನ ಕಥೆ ಖಂಡಿತವಾಗಿಯೂ ಹಲವಾರು ರೀತಿಗಳಲ್ಲಿ ಇಂದಿನ ಯುವಜನಾಂಗಕ್ಕೆ ಸ್ಫೂರ್ತಿದಾಯಕವಾಗಿದೆ.

ರಮೇಶರ ತಂದೆ ಗೋರಖ್ ಘೋಲಪ್ ಸೈಕಲ್ ರಿಪೇರಿ ಅಂಗಡಿಯನ್ನು ಹೊಂದಿದ್ದರು ಮತ್ತು ನಾಲ್ವರ ಕುಟುಂಬದ ಹೊಟ್ಟೆ ಹೊರೆಯಲು ಅಂಗಡಿಯ ಸಂಪಾದನೆ ಸಾಕಾಗುತ್ತಿತ್ತು. ಆದರೆ ನಿರಂತರ ಕುಡಿತದಿಂದಾಗಿ ಆರೋಗ್ಯ ಕೆಟ್ಟಿದ್ದರಿಂದ ಅವರ ವೃತ್ತಿ ಬಹಳ ಸಮಯ ಮುಂದುವರಿಯಲಿಲ್ಲ, ರಮೇಶ ಇನ್ನೂ ಶಾಲೆಯಲ್ಲಿರುವಾಗಲೇ ಅವರು ತೀರಿಕೊಂಡಿದ್ದರು.

ತಾಯಿಯೊಂದಿಗೆ ಬಳೆ ಮಾರಾಟ

ಕೈ ಹಿಡಿದಿದ್ದ ಪತಿ ತನ್ನನ್ನು ಮತ್ತು ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿ ಹೋದಾಗ ರಮೇಶರ ತಾಯಿ ವಿಮಲ ಘೋಲಪ್ ಧೃತಿಗೆಡಲಿಲ್ಲ. ಆಕೆ ಸಂಸಾರವನ್ನು ಪೋಷಿಸಲು ಸಮೀಪದ ಗ್ರಾಮಗಳಲ್ಲಿ ಬಳೆ ಮಾರಾಟವನ್ನು ಆರಂಭಿಸಿದ್ದರು. ಎಡಗಾಲು ಪೋಲಿಯೊ ಪೀಡಿತವಾಗಿದ್ದರೂ ರಮೇಶ ತಮ್ಮನೊಂದಿಗೆ ಸೇರಿಕೊಂಡು ಬಳೆ ವ್ಯಾಪಾರದಲ್ಲಿ ತಾಯಿಗೆ ನೆರವಾಗುತ್ತಿದ್ದರು. ತಾಯಿಯೊಂದಿಗೆ ಬೀದಿ ಬೀದಿಗಳನ್ನು ಸುತ್ತುತ್ತ ‘ಬಳೆ ತಗೊಳ್ಳಿ ಬಳೆ ’ಎಂದು ಕೂಗುತ್ತಿದ್ದರು.

ಶಿಕ್ಷಕ ವೃತ್ತಿ

ರಮೇಶ ಜನಿಸಿದ್ದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನ ಕುಗ್ರಾಮ ಮಹಗಾಂವ್ನಲ್ಲಿ. ಅಲ್ಲಿ ಇದ್ದುದು ಏಕೈಕ ಪ್ರಾಥಮಿಕ ಶಾಲೆ. ನಂತರದ ಶಿಕ್ಷಣವನ್ನು ರಮೇಶ ಬಾರ್ಶಿಯಲ್ಲಿ ಸೋದರಮಾವನ ಮನೆಯಲ್ಲಿದ್ದುಕೊಂಡು ಮುಂದುವರಿಸಿದ್ದರು. ಓದಿನಲ್ಲಿ ಮುಂದಿದ್ದರೂ ರಮೇಶ ಸಾಮಾನ್ಯ ಡಿಎಡ್ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರು. ಅವರ ಆರ್ಥಿಕ ಸ್ಥಿತಿ ಆ ಕೋರ್ಸ್ನ್ನು ಬಿಟ್ಟರೆ ಬೇರೆ ಕೋರ್ಸ್ಗೆ ಸೇರಲು ಅವಕಾಶ ನೀಡಿರಲಿಲ್ಲ. ಡಿಎಡ್ಗೇ ತನ್ನ ಓದನ್ನು ನಿಲ್ಲಿಸದ ರಮೇಶ ಮುಕ್ತ ವಿವಿಯಲ್ಲಿ ಶಿಕ್ಷಣವನ್ನು ಮುಂದುವರಿಸಿ ಆರ್ಟ್ಸ್ನಲ್ಲಿ ಪದವಿ ಪಡೆದಿದ್ದರು. 2009ರಲ್ಲಿ ಶಿಕ್ಷಕನಾಗಿ ವೃತ್ತಿಜೀವನವನ್ನು ಆರಂಭಿಸಿದ್ದರು.

ಯುಪಿಎಸ್ಸಿ ಕನಸು

ತನ್ನ ಕಾಲೇಜು ದಿನಗಳಲ್ಲಿ ಕಾರ್ಯನಿಮಿತ್ತ ತಹಶೀಲ್ದಾರರನ್ನು ಹಲವಾರು ಬಾರಿ ಭೇಟಿಯಾಗಿದ್ದ ರಮೇಶ ಅವರಿಂದ ಸ್ಫೂರ್ತಿ ಪಡೆದು ತಾನೂ ತಹಶೀಲ್ದಾರನಾಗಬೇಕು ಎಂದು ಬಯಸಿದ್ದರು. ಮಗನ ಕನಸನ್ನು ಉತ್ತೇಜಿಸಿದ ತಾಯಿ ಸ್ವಸಹಾಯ ಗುಂಪಿನಿಂದ ಸಾಲ ಪಡೆದುಕೊಂಡು ನೀಡಿದ್ದರು. ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ ರಮೇಶ ಯುಪಿಎಸ್ಸಿ ಸಿದ್ಧತೆಗಾಗಿ ಪುಣೆಗೆ ತೆರಳಿದ್ದರು.
 
ತಾನು ಮರಾಠಿಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಬರೆಯಬಹುದೇ, ಪೋಲಿಯೊ ಪೀಡಿತನಾಗಿರುವ ತಾನು ಅದಕ್ಕೆ ಅರ್ಹನೇ ಇತ್ಯಾದಿ ಪ್ರಶ್ನೆಗಳು ರಮೇಶರನ್ನು ಕಾಡುತ್ತಿದ್ದವು. ಅವರ ಮೊದಲ ಶಿಕ್ಷಕ ಅತುಲ್ ಲಾಂಡೆ ಅವರು ಈ ಎಲ್ಲ ಸಂಶಯಗಳನ್ನು ನಿವಾರಿಸಿದ್ದರು ಮತ್ತು ರಮೇಶ ಯುಪಿಎಸ್ಸಿ ಪರೀಕ್ಷೆಯನ್ನು ಬರೆಯಲು ಯಾವುದೇ ತೊಡಕು ಇಲ್ಲ ಎಂದು ಆತ್ಮವಿಶ್ವಾಸ ತುಂಬಿದ್ದರು. ಅವರ ಆ ಆತ್ಮವಿಶ್ವಾಸದ ನುಡಿಯಿಂದಲೇ ತನಗೆ ಐಎಎಸ್ ಮಾಡಲು ಸಾಧ್ಯವಾಯಿತು ಎಂದು ರಮೇಶ ಇಂದಿಗೂ ನೆನೆಸಿಕೊಳ್ಳುತ್ತಾರೆ.

2010ರಲ್ಲಿ ರಮೇಶ ಯುಪಿಎಸ್ಸಿ ಪರೀಕ್ಷೆಯನ್ನು ಬರೆದಿದ್ದರಾದರೂ ಸಫಲರಾಗಿರಲಿಲ್ಲ. ಬಳಿಕ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಅಡ್ಮಿನಸ್ಟ್ರೇಟಿವ್ ಕರಿಯರ್ಸ್ (ಎಸ್ಐಎಸಿ)ನ ಪ್ರವೇಶ ಪರೀಕ್ಷೆಯನ್ನು ಅವರು ಭೇದಿಸಿದ್ದರು. ಇದರೊಂದಿಗೆ ಅವರಿಗೆ ಹಾಸ್ಟೆಲ್ ಸೌಲಭ್ಯ ಮತ್ತು ವಿದ್ಯಾರ್ಥಿವೇತನ ಲಭಿಸಿದ್ದವು. ದೈನಂದಿನ ಖರ್ಚುಗಳಿಗಾಗಿ ಅವರು ಪೋಸ್ಟರ್ಗಳನ್ನು ಬರೆಯುತ್ತಿದ್ದರು ಮತ್ತು ಜೊತೆಗೆ ವ್ಯಾಸಂಗಕ್ಕೂ ಗಮನ ನೀಡುತ್ತಿದ್ದರು.

ಕನಸು ಕೊನೆಗೂ ನನಸು
 
2012ರಲ್ಲಿ ಕೊನೆಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ರಮೇಶ ಅಖಿಲ ಭಾರತ ಮಟ್ಟದಲ್ಲಿ 287 ರ್ಯಾಂಕ್ ಗಳಿಸಿದ್ದರು. ಕೆಲವು ತಿಂಗಳುಗಳ ಬಳಿಕ ಮಹಾರಾಷ್ಟ್ರ ಲೋಕಸೇವಾ ಆಯೋಗದ ಫಲಿತಾಂಶಗಳೂ ಪ್ರಕಟಗೊಂಡಿದ್ದು,ರಮೇಶ ಒಟ್ಟು 1,800 ಅಂಕಗಳಲ್ಲಿ 1,244 ಅಂಕಗಳನ್ನು ಗಳಿಸಿದ್ದರು. ಅದಕ್ಕೂ ಮುನ್ನ ಈ ಪರೀಕ್ಷೆಯಲ್ಲಿ ಇಷ್ಟೊಂದು ಅಧಿಕ ಅಂಕಗಳನ್ನು ಯಾವುದೇ ಅಭ್ಯರ್ಥಿ ಗಳಿಸಿರಲಿಲ್ಲ. ಸದ್ಯ ರಮೇಶ ಜಾರ್ಖಂಡ್ನ ಶಕ್ತಿ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


 
‘ಸೀಮೆಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕೆ ನ್ಯಾಯಬೆಲೆ ಅಂಗಡಿ ಮಾಲಿಕನ ಪರವಾನಿಗೆಯನ್ನು ನಾನು ರದ್ದುಗೊಳಿಸಿದಾಗ ಸೀಮೆಎಣ್ಣೆ ಇಲ್ಲದೆ ಲಾಟನ್ ನಂದಿ ಹೋಗಿದ್ದ ಅಂದಿನ ನನ್ನ ದಿನಗಳು ನೆನಪಾಗುತ್ತವೆ. ನಾನು ಯಾವುದೇ ವಿಧವೆಗೆ ನೆರವಾದಾಗ ಮನೆ ಅಥವ ಪಿಂಚಣಿಗಾಗಿ ಅವರಿವರ ಕಾಲು ಹಿಡಿದು ಬೇಡುತ್ತಿದ್ದ ನನ್ನ ತಾಯಿ ನೆನಪಾಗುತ್ತಾಳೆ. ಯಾವುದೇ ಸರಕಾರಿ ಆಸ್ಪತ್ರೆಗೆ ಇನ್‌ ಸ್ಪೆಕ್ಷನ್‌ ಗೆ ತೆರಳಿದಾಗ ಕುಡಿತವನ್ನು ಬಿಟ್ಟಿದ್ದ ನನ್ನ ತಂದೆ ಉತ್ತಮ ಚಿಕಿತ್ಸೆಗಾಗಿ ಹಂಬಲಿಸಿದ್ದು ನೆನಪಾಗುತ್ತದೆ. ಓದಿ ದೊಡ್ಡವನಾದ ಬಳಿಕ ತನ್ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ನನಗೆ ಹೇಳುತ್ತಿದ್ದರು. ಬಡಮಗುವಿಗೆ ನೆರವಾದಾಗ ನಾನು ನನ್ನನ್ನೇ,ಅಂದಿನ ‘ರಮು’ವನ್ನೇ ನೆನಪಿಸಿಕೊಳ್ಳುತ್ತೇನೆ ’ಎಂದು ರಮೇಶ ಸಂದರ್ಶನದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News