ಭಾರತವನ್ನು ಎಚ್ಚರಿಸುತ್ತಿರುವ ಅಮೆರಿಕದ ಬೆಳವಣಿಗೆ

Update: 2021-01-11 05:55 GMT

2021ರ ಜನವರಿ 7ರಂದು ನಡೆದ ಘಟನೆಯಿಂದ ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವದ ದೇಶವಾಗಿರುವ ಅಮೆರಿಕದ ಮಾನ ಹರಾಜಾಯಿತು ಎನ್ನುವುದು ಬಹುತೇಕ ರಾಜಕೀಯ ತಜ್ಞರ ವಾದ. ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದ್ದೂ ವಿಶ್ವಾದ್ಯಂತ ಸರ್ವಾಧಿಕಾರಿ ರಾಷ್ಟ್ರಗಳ ಜೊತೆಗೆ ಪರೋಕ್ಷವಾಗಿ ಅಥವಾ ನೇರವಾಗಿ ಕೈ ಜೋಡಿಸುತ್ತಾ ಬಂದಿರುವ, ವಿಶ್ವದ ಇನ್ನಿತರ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದ ದೇಶಗಳ ಮೇಲೆ ತನ್ನ ಮೂಗಿನ ನೇರಕ್ಕೆ ಅಧಿಕಾರ ಚಲಾಯಿಸುತ್ತಾ ಬಂದಿರುವ ಅಮೆರಿಕದಲ್ಲಿ ಇದು ಒಂದಲ್ಲ ಒಂದು ದಿನ ನಡೆಯಲೇ ಬೇಕಾಗಿತ್ತು. ಪ್ರಜಾಸತ್ತೆಯ ಮುಖವಾಡದೊಂದಿಗೆ ಅಮೆರಿಕ ಇತರ ಸಾರ್ವಭೌಮ ರಾಷ್ಟ್ರಗಳ ಜೊತೆಗೆ ನಡೆಸಿದ ಪುಂಡಾಟಿಕೆಯ ಮುಂದುವರಿದ ಭಾಗ, ಅಧ್ಯಕ್ಷ ಟ್ರಂಪ್ ಕೈಯಲ್ಲಿ ಅತ್ಯಂತ ಕಳಪೆಯಾಗಿ ತನ್ನದೇ ದೇಶದ ವಿರುದ್ಧ ಪ್ರದರ್ಶನಗೊಂಡಿದೆ.

ಪ್ರಜಾಸತ್ತೆ ಮತ್ತು ಸಾಮಾನ್ಯ ಮನುಷ್ಯನ ಘನತೆಯ ಕುರಿತಂತೆ ಎಳ್ಳಷ್ಟು ಕಾಳಜಿಯಿಲ್ಲದ ಜನಾಂಗೀಯವಾದಿಯೊಬ್ಬನನ್ನು ಅಧಿಕಾರಕ್ಕೆ ತಂದ ದಿನವೇ ಪ್ರಜಾಸತ್ತೆಯ ಜೊತೆಗಿರುವ ಅಮೆರಿಕದ ಸಂಬಂಧ ದುರ್ಬಲಗೊಂಡಿತ್ತು. ಟ್ರಂಪ್ ತನ್ನ ಅಧಿಕಾರವಧಿಯಲ್ಲಿ ನಡೆಸಿದ ಜನಾಂಗೀಯವಾದಿ ಆಡಳಿತ ಅಮೆರಿಕದ ಪ್ರಜಾಪ್ರಭುತ್ವದ ಮುಖವಾಡವನ್ನು ಯಾವತ್ತೋ ಹರಿದಿದೆ. ಟ್ರಂಪ್ ಆಡಳಿತ ಇಂತಹದೊಂದು ಪ್ರಹಸನದ ಜೊತೆಗೆ ಅಂತ್ಯವಾಗುವುದು ಅವರ ವ್ಯಕ್ತಿತ್ವಕ್ಕೆ ಮತ್ತು ಅಮೆರಿಕದ ಸದ್ಯದ ವರ್ತಮಾನಕ್ಕೆ ಪೂರಕವಾಗಿದೆ. ಇದಕ್ಕಾಗಿ ಕೇವಲ ಟ್ರಂಪ್‌ರನ್ನಷ್ಟೇ ನಾವು ಹೊಣೆ ಮಾಡಲಾಗುವುದಿಲ್ಲ. ಅಮೆರಿಕವನ್ನು ಸದ್ಯಕ್ಕೆ ನಿಯಂತ್ರಿಸುತ್ತಿರುವ ಬಲಪಂಥೀಯ ಶಕ್ತಿಗಳೇ ಆ ದೇಶದ ಪ್ರಜಾಸತ್ತೆಯನ್ನು ಈ ಹಂತಕ್ಕೆ ತಲುಪಿಸಿವೆ. ಟ್ರಂಪ್ ನಿರ್ಗಮಿಸಿದಾಕ್ಷಣ ಅಮೆರಿಕದಲ್ಲಿ ಎಲ್ಲವೂ ಸರಿಯಾಗಿ ಬಿಡುತ್ತದೆ ಎನ್ನುವುದನ್ನು ನಾವು ನಿರೀಕ್ಷಿಸುವಂತಿಲ್ಲ. ಶ್ವೇತ ಜನಾಂಗೀಯವಾದಿಯಾಗಿ ಡೊನಾಲ್ಡ್ ಟ್ರಂಪ್ ಅವರು ನಡೆಸಿದ ಅತ್ಯಂತ ಅಪಾಯಕಾರಿ, ಕಳಪೆ ಆಡಳಿತವನ್ನು ಗಮನಿಸಿದರೆ, ಅಮೆರಿಕದ ಕಾಂಗ್ರೆಸ್‌ನಿಂದ ನಿಯೋಜಿತ ಅಧ್ಯಕ್ಷರಾಗಿ ಜೋ ಬೈಡನ್ ಅವರ ಪ್ರಮಾಣೀಕರಣದ ಆ ದಿನ ಬೇರೆ ರೀತಿಯಲ್ಲಿ ಇರಲು ಸಾಧ್ಯವೇ ಇರಲಿಲ್ಲ. ಅಧಿಕಾರದಿಂದ ನಿರ್ಗಮಿಸುವ ಮುನ್ನ ಟ್ರಂಪ್ ಆಯ್ಕೆ ಮಾಡಿಕೊಂಡಿದ್ದ ಹಿಂಸಾಚಾರದ ವಿಧಾನವು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಆತ್ಮಹತ್ಯೆಯನ್ನು ಹೋಲುತ್ತದೆ.

ಸಾವಿರ ವರ್ಷಗಳ ನಾಝಿ ಆಡಳಿತದ ತನ್ನ ಬಹು ನಿರೀಕ್ಷಿತ ಕನಸು ತನ್ನ ಕಣ್ಣೆದುರೇ ಭಂಗಗೊಂಡಿದ್ದನ್ನು ಸಹಿಸಲು ಸಾಧ್ಯವಾಗದಿದ್ದಾಗ ಹಿಟ್ಲರ್ ಫ್ಯಾಶಿಸ್ಟ್ ಕ್ರಿಮಿನಲ್‌ಗಳ ತನ್ನ ಆಪ್ತ ವಲಯದೊಂದಿಗೆ ಬರ್ಲಿನ್‌ನ ಭೂಗತ ಬಂಕರ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಟ್ರಂಪ್ ಅಂತಹುದೇ ನಡೆಯನ್ನು ಪ್ರದರ್ಶಿಸಿದ್ದಾರೆ. ಇದರಿಂದ ಟ್ರಂಪ್ ಕಳೆದುಕೊಂಡದ್ದು ಏನೇನೂ ಇಲ್ಲ. ಆದರೆ ಅಮೆರಿಕ ಮುಂದಿನ ದಿನಗಳಲ್ಲಿ ತನ್ನನ್ನು ತಾನು ‘ಬಲಿಷ್ಟ ಪ್ರಜಾಪ್ರಭುತ್ವವನ್ನು ಹೊಂದಿದ ರಾಷ್ಟ್ರ’ ಎಂದು ಕರೆದುಕೊಳ್ಳುವಾಗ ಮುಜುಗರ ಅನುಭವಿಸಬೇಕಾಗುತ್ತದೆ. ತನ್ನದೇ ಪಕ್ಷದ ನಾಯಕರ ಪೂರ್ಣ ಬೆಂಬಲವಿಲ್ಲದೆಯೇ ಒಬ್ಬ ಅಧ್ಯಕ್ಷ ತನ್ನ ಜೊತೆಗಿರುವ ಜನಾಂಗೀಯವಾದಿ ದುಷ್ಕರ್ಮಿಗಳನ್ನು, ಗೂಂಡಾಗಳನ್ನು ಬಳಸಿಕೊಂಡು ಚುನಾವಣೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸುತ್ತಾನೆನ್ನುವುದು ಅಮೆರಿಕಕ್ಕೆ ಬಹುದೊಡ್ಡ ಮುಖಭಂಗವೇ ಸರಿ. ಈ ಸಣ್ಣ ವಿಫಲ ಕ್ರಾಂತಿ, ಭವಿಷ್ಯದಲ್ಲಿ ಇನ್ನೊಂದು ದೊಡ್ಡ ವಿಪ್ಲವವೊಂದಕ್ಕೆ ಕಾರಣವಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಜನವರಿ ಏಳರಂದು ಅಮೆರಿಕದಲ್ಲಿ ನಡೆದಿರುವುದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉರುಳಿಸುವ ದೇಶದ್ರೋಹಿ ಕೆಲಸಗಳು. ಇದು ಅಲ್ಲಿನ ಕರಿಯರಿಂದ ಏನಾದರೂ ನಡೆದಿದ್ದರೆ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಟ್ರಂಪ್ ಮತ್ತು ಆತನ ಹಿಂಬಾಲಕರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದರೂ ಅದನ್ನು ಮಾಡಲಾಗದೆ ಅಮೆರಿಕ ಕೈ ಕೈ ಹಿಸುಕಿ ಕೊಳ್ಳುತ್ತಿರುವುದೇ ಅಮೆರಿಕದೊಳಗಿನ ವಿಭಜನೆಯ ಆಳವನ್ನು ಹೇಳುತ್ತಿದೆ.

ಜನಾಂಗೀಯವಾದ, ಲಿಂಗಭೇದ ಮತ್ತು ಕಾರ್ಪೊರೇಟ್ ವ್ಯವಸ್ಥೆ ಅಮೆರಿಕವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ. ಟ್ರಂಪ್ ಮತ್ತು ಆತನ ಹಿಂಬಾಲಕರ ವಿರುದ್ಧ ಎಲ್ಲಿಯವರೆಗೆ ಕ್ರಮ ತೆಗೆದುಕೊಳ್ಳಲು ಅಲ್ಲಿನ ಸರಕಾರ ವಿಫಲವಾಗುತ್ತದೆಯೋ ಅಲ್ಲಿಯವರೆಗೆ ಅಮೆರಿಕದಲ್ಲಿ ಪ್ರಜಾಸತ್ತೆ ಮರುಸ್ಥಾಪನೆಯಾಗಿರುವುದನ್ನು ಪೂರ್ಣವಾಗಿ ಒಪ್ಪುವಂತಿಲ್ಲ. ಇಂದು ತನ್ನ ಕೆಟ್ಟ ಆಡಳಿತದ ಮೂಲಕ ಟ್ರಂಪ್ ಅಂತರ್‌ರಾಷ್ಟ್ರೀಯ ಮಟ್ಟದ ಅಪರಾಧಿಯಾಗಿ ಬೆಳೆದಿದ್ದಾರೆ. ಹಲವು ದೇಶಗಳು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿವೆ. ಉಳಿದ ದೇಶಗಳ ವಿಷಯ ಪಕ್ಕಕ್ಕಿರಲಿ, ತನ್ನದೇ ದೇಶದ ವಿರುದ್ಧ ಸಂಚು ನಡೆಸಿದ ಆರೋಪಕ್ಕೆ ಅಮೆರಿಕ ಯಾವ ರೀತಿಯಲ್ಲಿ ಟ್ರಂಪ್‌ರನ್ನು ಶಿಕ್ಷಿಸುತ್ತದೆ ಎನ್ನುವುದನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ.

 ವಿಪರ್ಯಾಸವೆಂದರೆ, ಅಮೆರಿಕದ ಸಂಸತ್‌ನ ಮೇಲೆ ನಡೆದ ದಾಳಿಯ ಕಳಂಕವನ್ನು ಭಾರತವೂ ಪರೋಕ್ಷವಾಗಿ ತನ್ನದಾಗಿಸಿಕೊಳ್ಳಬೇಕಾಗಿದೆ. ದಾಳಿಯ ಸಂದರ್ಭದಲ್ಲಿ ಕಾಣಿಸಿಕೊಂಡಿದೆಯೆನ್ನುವ ರಾಷ್ಟ್ರಧ್ವಜ, ಭಾರತವನ್ನು ಮುಜುಗರಕ್ಕೆ ಸಿಲುಕಿಸಿದೆ. ಇದರ ಹಿನ್ನೆಲೆ ಹುಡುಕುವುದು ಕಷ್ಟವೇನಲ್ಲ. ಒಂದು ಕಾಲದಲ್ಲಿ ಅಲಿಪ್ತ ನೀತಿಯ ಮೂಲಕ ವಿಶ್ವದಲ್ಲಿ ತೃತೀಯ ಶಕ್ತಿಯಾಗಿ ಗುರುತಿಸಿಕೊಂಡಿದ್ದ ಭಾರತ, ಇಂದು ಅಮೆರಿಕದ ಓಲೈಕೆಗೆ ತನ್ನ ವಿದೇಶಾಂಗ ನೀತಿಯನ್ನು ಒತ್ತೆ ಇಟ್ಟಿದೆ. ಅಮೆರಿಕದ ಕುರಿತಂತೆ ಭಾರತದ ಓಲೈಕೆ ನರೇಂದ್ರ ಮೋದಿಯ ಕಾಲದಲ್ಲಿ ಇನ್ನಷ್ಟು ದೈನೇಸಿ ಸ್ಥಿತಿಗೆ ತಲುಪಿದೆ. ಅಮೆರಿಕದ ಅಧ್ಯಕ್ಷ ಅಭ್ಯರ್ಥಿಯ ಪರವಾಗಿ ಭಾರತದ ಪ್ರಧಾನಿ ಪ್ರಚಾರ ಮಾಡಿ, ಅಮೆರಿಕದ ಚುನಾವಣಾ ಪ್ರಕ್ರಿಯೆಯೊಳಗೆ ಮೂಗು ತೂರಿಸುವ ಮಟ್ಟಕ್ಕೆ ಇದು ಹೋಯಿತು. ಈ ಮೂಲಕ ಅಮೆರಿಕದ ಒಂದು ಪಕ್ಷದ ಚುನಾವಣಾ ಅಭ್ಯರ್ಥಿಯ ಕಾರ್ಯಕರ್ತನಾಗಿ ಭಾರತ ಗುರುತಿಸಿಕೊಂಡಿತು. ‘ಅಬ್ ಕಿ ಬಾರ್ ಟ್ರಂಪ್‌ಸರಕಾರ್’ ಎಂದು ಅಮೆರಿಕದ ನೆಲದಲ್ಲೇ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಚುನಾವಣೆಯಲ್ಲಿ ಟ್ರಂಪ್ ಸೋತರೆ ಅದು ಭಾರತದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಊಹಿಸುವ ಸಣ್ಣ ವಿವೇಕವೂ ಮೋದಿಯ ಬಳಿ ಇರಲಿಲ್ಲ.

ಇಂದು ಅಲ್ಲಿನ ಸಂಸತ್ ದಾಳಿಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದ್ದರೆ ಅದಕ್ಕೆ ಕಾರಣ ನರೇಂದ್ರ ಮೋದಿಯವರ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎನ್ನುವ ಘೋಷಣೆೆ. ಅಮೆರಿಕದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ನರೇಂದ್ರ ಮೋದಿಯವರು ತಮ್ಮ ವಿಷಾದ ವ್ಯಕ್ತಪಡಿಸಿದ್ದರಾದರೂ, ಸ್ವತಃ ಮೋದಿಯ ಕಾರಣದಿಂದಲೇ ಘಟನೆಯನ್ನು ಖಂಡಿಸುವ ನೈತಿಕತೆಯನ್ನು ಭಾರತ ಕಳೆದುಕೊಂಡಿದೆ. ಟ್ರಂಪ್‌ನನ್ನು ತನಗೆ ಮಾದರಿಯಾಗಿಸಿಕೊಂಡಿರುವ ಸರಕಾರವೊಂದು ಭಾರತದಲ್ಲೂ ಅಸ್ತಿತ್ವದಲ್ಲಿದೆ ಎನ್ನುವ ಅಂಶವನ್ನು ಈ ಸಂದರ್ಭದಲ್ಲಿ ಮರೆಯಬಾರದು. ಟ್ರಂಪ್‌ಗಿಂತಲೂ ಜನಾಂಗೀಯವಾದಿಗಳಾಗಿರುವ, ಜಾತೀಯವಾದಿಗಳಾಗಿರುವ ಸಂಘಟನೆಗಳ ಕೈಗೊಂಬೆಯಾಗಿರುವ ಭಾರತದ ಪ್ರಧಾನಿ ಈ ದೇಶವನ್ನು ಆಳುತ್ತಿದ್ದಾರೆ. ವ್ಯಕ್ತಿಗಿಂತ ದೇಶ ಮುಖ್ಯ ಎನ್ನುವ ಜಾಗದಲ್ಲಿ, ದೇಶಕ್ಕಿಂತ ವ್ಯಕ್ತಿ ಮುಖ್ಯ ಎನ್ನುವ ಜನಸಮೂಹವೊಂದು ಬೆಳೆಯುತ್ತಿದೆ. ದೇಶ ಸರ್ವನಾಶವಾಗುತ್ತಿದ್ದರೂ, ಪ್ರಧಾನಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಿದ್ಧವಿಲ್ಲದ ‘ಭಕ್ತ’ರು ಮುಂದೊಂದು ದಿನ ಈ ದೇಶಕ್ಕೆ ಟ್ರಂಪ್ ಹಿಂಬಾಲಕರಿಗಿಂತಲೂ ಅಪಾಯಕಾರಿಯಾಗಿ ಪರಿಣಮಿಸಬಲ್ಲರು. ಅಮೆರಿಕದ ಬೆಳವಣಿಗೆ ಭಾರತದ ಪಾಲಿಗೆ ಒಂದು ಎಚ್ಚರಿಕೆಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News