ಕೃಷಿ ಕಾಯ್ದೆಯನ್ನು ನೀವು ತಡೆಹಿಡಿಯುತ್ತೀರೋ? ನಾವದನ್ನು ಮಾಡಬೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

Update: 2021-01-11 18:46 GMT

ಹೊಸದಿಲ್ಲಿ, ಜ.11: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಉಂಟಾಗಿರುವ ಬಿಕ್ಕಟ್ಟನ್ನು ಕೇಂದ್ರ ಸರಕಾರ ಸೂಕ್ತವಾಗಿ ನಿರ್ವಹಿಸಿಲ್ಲ ಎಂದು ಅಸಮಾಧಾನ ಸೂಚಿಸಿರುವ ಸುಪ್ರೀಂಕೋರ್ಟ್, ಕೃಷಿ ಕಾನೂನು ಜಾರಿಯಾಗದಂತೆ ನೀವೇ ತಡೆಹಿಡಿಯುತ್ತೀರೋ ಅಥವಾ ನಾವೇ ಆ ಕೆಲಸ ಮಾಡಬೇಕೇ ? ಇದನ್ನು ಪ್ರತಿಷ್ಟೆಯ ವಿಷಯವನ್ನಾಗಿ ಯಾಕೆ ಪರಿಗಣಿಸುತ್ತೀರಿ ಎಂದು ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.

ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ದಿಲ್ಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಆರೋಗ್ಯಸ್ಥಿತಿಯ ಬಗ್ಗೆ ಕಳವಳ ಸೂಚಿಸಿದ ಮುಖ್ಯ ನ್ಯಾಯಮೂರ್ತಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹಿರಿಯ ನಾಗರಿಕರು ಮನೆಗೆ ತೆರಳುವಂತೆ ಮನವಿ ಮಾಡಿದರು. ಕೃಷಿ ಕಾಯ್ದೆಯ ಬಗ್ಗೆ ಚರ್ಚಿಸಲು ಸಮಿತಿ ರಚಿಸುವ ಪ್ರಸ್ತಾವ ಮುಂದಿರಿಸಿದ ಸುಪ್ರೀಂಕೋರ್ಟ್, ನಿಮಗೆ ವಿಶ್ವಾಸ ಇರಲಿ, ಇಲ್ಲದಿರಲಿ. ಆದರೆ ಭಾರತದ ಸರ್ವೋಚ್ಛ ನ್ಯಾಯಾಲಯವಾಗಿರುವ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆ. ರೈತರ ಆತಂಕಕ್ಕೆ ಯಾರೂ ಕಿವಿಗೊಡುವುದಿಲ್ಲ ಎಂಬ ಭಾವನೆ ಬೇಡ ಎಂದು ಆಶ್ವಾಸನೆ ನೀಡಿದೆ.

ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಮುಂದುವರಿಸಿದ ಸುಪ್ರೀಂಕೋರ್ಟ್, ರೈತರ ಪ್ರತಿಭಟನೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಅಸಮಾಧಾನ ಸೂಚಿಸಿತು. ‘ಯಾವುದೇ ಗಾಯ ಅಥವಾ ಕೈಯಲ್ಲಿ ರಕ್ತ ಇರುವುದು ನಮಗಿಷ್ಟವಿಲ್ಲ. ಏನಾದರೂ ತಪ್ಪು ಘಟಿಸಿದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ’ ಎಂದು ರೈತರೊಂದಿಗೆ 8 ಸುತ್ತು ಮಾತುಕತೆ ನಡೆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಕಟು ಮಾತಿನ ಪ್ರಹಾರ ನಡೆಸಿದರು. ರೈತರೊಂದಿಗೆ ಮಾತುಕತೆ ನಡೆಯುತ್ತಿದೆ. ಪರಿಹಾರ ಕಂಡುಕೊಳ್ಳಲು ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ಕೇಂದ್ರ ಸರಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಳೆದ ಕಲಾಪದಲ್ಲೂ ಇದನ್ನೇ ಹೇಳಿದ್ದೀರಿ. ನೀವು ಮಾತುಕತೆಗೆ ಸಮಿತಿಯನ್ನು ಯಾಕೆ ರೂಪಿಸುವುದಿಲ್ಲ. ಕಾಯ್ದೆ ಜಾರಿಯನ್ನು ತಡೆಹಿಡಿಯದಿದ್ದರೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿತು.

ನ್ಯಾಯಾಲಯ ಆದೇಶ ಜಾರಿಗೊಳಿಸಲು ಯಾಕೆ ಅವಸರ ಪಡುತ್ತಿದೆ ಎಂದು ಅಟಾರ್ನಿ ಜನರಲ್ ಪ್ರಶ್ನಿಸಿದರು. ನಮಗೆ ತಾಳ್ಮೆಯ ಬಗ್ಗೆ ಪಾಠ ಮಾಡಬೇಡಿ. ನಿಮಗೆ ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿತು.

 ನ್ಯಾಯಾಲಯ ಸಮಿತಿಯನ್ನು ರಚಿಸಬಹುದು. ಆದರೆ ಕಾನೂನಿಗೆ ತಡೆ ನೀಡಲು ಸಾಧ್ಯವಿಲ್ಲ . ಯಾವುದೇ ಕಾನೂನು ಅಸಾಂವಿಧಾನಿಕ ಎಂದು ಸಾಬೀತಾಗುವವರೆಗೆ ನ್ಯಾಯಾಲಯ ಕಾಯ್ದೆಗೆ ತಡೆ ನೀಡುವಂತಿಲ್ಲ ಎಂಬ ಈ ಹಿಂದಿನ ತೀರ್ಪನ್ನು ಉಲ್ಲೇಖಿಸಿ ಅಟಾರ್ನಿ ಜನರಲ್ ಹೇಳಿದರು.

ಕಾಯ್ದೆಯ ಜಾರಿಗೆ ತಡೆ ನೀಡಿದ ಬಳಿಕವೂ ಪ್ರತಿಭಟನೆ ಮುಂದುವರಿಸಬಹುದು. ಆದರೆ ಈಗಿರುವ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸುತ್ತೀರಾ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಿರಾ ಎಂದು ನೀವೇ ನಿರ್ಧರಿಸಬೇಕು ಎಂದು ನ್ಯಾಯಾಲಯ ರೈತಸಂಘದ ಪರ ವಕೀಲರನ್ನುದ್ದೇಶಿಸಿ ಹೇಳಿತು.

ಸರಕಾರಕ್ಕೆ ಸಿಜೆಐ ತರಾಟೆ

► ನೀವು ಪರಿಹಾರದ ಭಾಗವಾಗಿದ್ದೀರಾ ಅಥವಾ ಸಮಸ್ಯೆಯ ಭಾಗವಾಗಿದ್ದೀರಾ ಎಂಬುದು ನಮಗೆ ಸ್ಪಷ್ಟವಾಗಿಲ್ಲ.

► ಈ ಹಿಂದಿನ ಸರಕಾರವನ್ನು ದೂಷಿಸಬೇಡಿ.

► ಪರಿಸ್ಥಿತಿ ದಿನೇ ದಿನೇ ಕೆಟ್ಟದಾಗುತ್ತಿದೆ. ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಮೈಕೊರೆಯುವ ಚಳಿಯಲ್ಲೂ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಿರಿಯರು ಮತ್ತು ಮಹಿಳೆಯರೂ ಯಾಕೆ ಭಾಗವಹಿಸುತ್ತಿದ್ದಾರೆ ?

► ರೈತರೊಂದಿಗೆ ಮಾತುಕತೆ ನಡೆಸಲು ಸಮಿತಿಯನ್ನು ಯಾಕೆ ರಚಿಸುವುದಿಲ್ಲ ?

► ಕೃಷಿ ಮತ್ತು ಆರ್ಥಿಕತೆಯ ವಿಷಯದಲ್ಲಿ ನಾವು ತಜ್ಞರಲ್ಲ. ಕೃಷಿ ಕಾಯ್ದೆ ಜಾರಿಯನ್ನು ನೀವೇ ತಡೆಹಿಡಿಯುತ್ತೀರೋ ಅಥವಾ ನಾವೇ ಕ್ರಮ ಕೈಗೊಳ್ಳಬೇಕೇ ?

► ಪ್ರಕರಣವನ್ನು ಸರಕಾರ ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ತೋರುತ್ತಿಲ್ಲ. ಯಾವ ಸಮಾಲೋಚನೆ ನಡೆಸಲಾಗಿದೆ ಎಂಬುದು ನಮಗೆ ತಿಳಿದಿಲ್ಲ. ಕಾನೂನಿನಿಂದ ಅನುಕೂಲವಾಗಲಿದೆ ಎಂದು ಬಹುಪಾಲು ಜನರ ಅಭಿಪ್ರಾಯವಾಗಿದ್ದರೆ ಅವರು ಇದನ್ನು ಸಮಿತಿಯ ಎದುರು ಹೇಳಲಿ.

► ಒಂದು ದಿನ ಬಹುಷಃ ಶಾಂತಿಯ ಉಲ್ಲಂಘನೆಯಾಗಬಹುದು ಎಂಬ ಆತಂಕ ನಮಗಿದೆ. ಯಾವುದೇ ಗಾಯ ಅಥವಾ ನಮ್ಮ ಕೈಯಲ್ಲಿ ರಕ್ತ ಇರುವುದು ನಮಗಿಷ್ಟವಿಲ್ಲ. ಏನಾದರೂ ತಪ್ಪು ಘಟಿಸಿದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News