ಕೊರೋನ ಲಸಿಕೆ: ಮುಂಚೂಣಿ ಕಾರ್ಯಕರ್ತರ ಖರ್ಚು ಕೇಂದ್ರ ಸರಕಾರದ ಖಾತೆಗೆ

Update: 2021-01-11 18:55 GMT

ಹೊಸದಿಲ್ಲಿ, ಜ.11: ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ 3 ಕೋಟಿ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯಕಾರ್ಯಕರ್ತರ ಕೊರೋನ ಲಸಿಕೆಯ ಖರ್ಚನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ ಕೊರೋನ ಲಸಿಕೆಯನ್ನು ನೇರವಾಗಿ ಸಂಸ್ಥೆಯಿಂದಲೇ ಪಡೆಯದೆ ಕೇಂದ್ರ ಸರಕಾರದಿಂದ ಖರೀದಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದ್ದಾರೆ.

ಸೋಮವಾರ ರಾಜ್ಯಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕೊರೋನ ಸೋಂಕಿನ ಪರಿಸ್ಥಿತಿ ಅವಲೋಕನ ಹಾಗೂ ದೇಶಾದ್ಯಂತ ನಡೆಯಲಿರುವ ಕೊರೋನ ಲಸಿಕೆ ಅಭಿಯಾನದ ಮಾಹಿತಿ ಹಾಗೂ ಪೂರ್ವಸಿದ್ಧತೆ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನಪ್ರತಿನಿಧಿಗಳು, ಅಥವಾ ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಬರುವವರು ಆದ್ಯತೆಯ ನಿಯಮ ಉಲ್ಲಂಘಿಸಿ ಲಸಿಕೆ ಪಡೆಯಲು ಅವಕಾಶ ನೀಡದಂತೆ ರಾಜ್ಯಗಳಿಗೆ ಕಿವಿಮಾತು ನುಡಿದರು.

ಜನವರಿ 16ರಿಂದ ಲಸಿಕೆ ಅಭಿಯಾನಕ್ಕೆ ಚಾಲನೆ ದೊರಕಲಿದೆ. ಪ್ರಥಮ ಹಂತದಲ್ಲಿ 3 ಕೋಟಿ ಕೊರೋನ ಸೇನಾನಿಗಳಿಗೆ ಆದ್ಯತೆ ನೀಡುತ್ತಿದ್ದು ಈ ಪಟ್ಟಿಯಲ್ಲಿ ಜನಪ್ರತಿನಿಧಿಗಳು ಇರುವುದಿಲ್ಲ. ಈಗಾಗಲೇ ಅನುಮೋದನೆ ಪಡೆದಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು ದೇಶದ ಅಗತ್ಯತೆಗೆ ಅನುಸಾರವಾಗಿ ಅಭಿವೃದ್ಧಿಗೊಳಿಸಲಾಗಿದೆ. ಇವೆರಡೂ ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ದೇಶದಲ್ಲಿ ಕೊರೋನ ಸೋಂಕಿನ ವಿರುದ್ಧ ಕನಿಷ್ಟ 7 ಇತರ ಲಸಿಕೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ವಿಶ್ವದ ಬೃಹತ್ ಔಷಧ ತಯಾರಿಕಾ ಸಂಸ್ಥೆ ಫೈಝರ್ ಭಾರತದಲ್ಲಿ ಕೊರೋನ ಲಸಿಕೆ ಆಮದು ಮಾಡಿಕೊಂಡು ಮಾರಾಟ ಮಾಡಲು ಅರ್ಜಿ ಸಲ್ಲಿಸಿದೆ ಎಂದವರು ಹೇಳಿದರು.

ಕೊರೋನ ಲಸಿಕೆಯ ವಿರುದ್ಧ ವದಂತಿ ಮತ್ತು ಗಾಳಿಸುದ್ಧಿ, ಅಪಪ್ರಚಾರ ಹರಡದಂತೆ ರಾಜ್ಯಗಳು ಎಚ್ಚರ ವಹಿಸಬೇಕು. ಗಾಳಿಸುದ್ಧಿ ಮತ್ತು ಅಪಪ್ರಚಾರ ಹಬ್ಬಿಸುವುದನ್ನು ತಡೆಯುವ ಕಾರ್ಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ನೆರವನ್ನು ಪಡೆಯಬಹುದು ಎಂದವರು ರಾಜ್ಯಗಳಿಗೆ ಸಲಹೆ ನೀಡಿದರು.

ಕೇಂದ್ರದಿಂದಲೇ ಖರೀದಿಸಿ: ರಾಜ್ಯಗಳಿಗೆ ಸೂಚನೆ ಕೊರೋನ ಲಸಿಕೆಯನ್ನು ಕೇಂದ್ರ ಸರಕಾರ ಮಾತ್ರ ಖರೀದಿಸುತ್ತದೆ. ಕೇಂದ್ರ ಸರಕಾರದ ಪರವಾಗಿ ಸಾರ್ವಜನಿಕ ಕ್ಷೇತ್ರದ ಸಂಸ್ಥೆ ಎಚ್‌ಎಲ್‌ಎಲ್ ಲೈಫ್‌ಕ್ಯಾರ್‌ಗೆ ಈ ಜವಾಬ್ದಾರಿ ವಹಿಸಿದ್ದು ರಾಜ್ಯ ಸರಕಾರಗಳು ಲಸಿಕೆಯನ್ನು ಕೇಂದ್ರದಿಂದಲೇ ಪಡೆಯುವಂತೆ ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News