ಕೃಷಿ ಕಾಯ್ದೆಗಳು ಮತ್ತು ಅದಾನಿ-ಅಂಬಾನಿಗೆ ಆಗುವ ಲಾಭಗಳು

Update: 2021-01-12 19:30 GMT

ಮೋದಿ ಸರಕಾರದ ಈ ಮೂರು ಕಾಯ್ದೆಗಳಿಂದ ಹಾಗೂ ಈ ಹಿಂದಿನ ಯುಪಿಎ ಸರಕಾರ ಪ್ರಾರಂಭಿಸಿದ ಕೃಷಿ ಮಾರುಕಟ್ಟೆ ಖಾಸಗೀಕರಣ ನೀತಿಗಳಿಂದ ಈ ದೇಶದಲ್ಲಿ ಅಪಾರ ಲಾಭ ಮಾಡಿದವರು, ಮಾಡುತ್ತಿರುವವರು ಹಾಗೂ ಮುಂದೆಯೂ ಮಾಡಲಿರುವವರು ಅದಾನಿ ಮತ್ತು ಅಂಬಾನಿಗಳೇ ಆಗಿದ್ದಾರೆ.
ಆದ್ದರಿಂದಲೇ ಈ ಹೋರಾಟದಲ್ಲಿ ಈಗಾಗಲೇ 60ಕ್ಕೂ ಹೆಚ್ಚು ರೈತರು ಜೀವತೆತ್ತಿದ್ದರೂ ಅಂಬಾನಿ-ಅದಾನಿಗಳ ಅಪರಿಮಿತ ಲಾಭಕ್ಕೆ ಅವಕಾಶ ಕೊಡುವ ನೀತಿಗಳನ್ನು ಹಿಂದೆಗೆದುಕೊಳ್ಳಲು ಮೋದಿ ಸರಕಾರ ಸಿದ್ಧವಿಲ್ಲ.


ಕಳೆದ 47 ದಿನಗಳಿಂದ ದಿಲ್ಲಿಗೆ ಮುತ್ತಿಗೆ ಹಾಕಿರುವ ಚರಿತ್ರಾರ್ಹ ರೈತ ಚಳವಳಿ ಒಂದು ದೇಶವ್ಯಾಪಿ ಬೃಹತ್ ಜನಾಂದೋಲನದ ರೂಪ ಪಡೆದುಕೊಂಡು ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಅದರಲ್ಲೂ ರೈತ ಚಳವಳಿಯು ಜನವರಿ 26ರಂದು ಮಾಡಲು ಉದ್ದೇಶಿಸಿರುವ ಜನಗಣ ಪೆರೇಡ್ ಅಂತೂ ಆಳುವವರ ನಿದ್ದೆಗೆಡಿಸಿದೆ. ಆದ್ದರಿಂದಲೇ ಆಳುವ ಸರಕಾರವು ಸುಪ್ರೀಂ ಕೋರ್ಟನ್ನು ಮಧ್ಯಪ್ರವೇಶಿಸುವಂತೆ ಮಾಡುವ ಮೂಲಕ ರೈತರು ಬೀಸುತ್ತಿರುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿದೆ. ಸುಪ್ರೀಂ ಕೋರ್ಟ್ ನಿನ್ನೆ ನೀಡಿರುವ ಮಧ್ಯಂತರ ಆದೇಶ ಹಾಗೂ ಅದು ರಚಿಸಿರುವ ಸಮಿತಿಗಳಂತೂ ದಿನದಿನಕ್ಕೂ ಉಕ್ಕೇರುತ್ತಿರುವ ರೈತರ ಚಳವಳಿಗೆ ನಿಧಾನದ್ರೋಹ ಬಗೆದು ಮೋದಿ ಸರಕಾರವನ್ನೂ ಹಾಗೂ ಕಾರ್ಪೊರೇಟ್ ಆಸಕ್ತಿಯನ್ನು ರಕ್ಷಿಸುವ ಉದ್ದೇಶವನ್ನೇ ಹೊಂದಿರುವುದು ಮುಖಕ್ಕೆ ರಾಚುವಷ್ಟು ನಿಚ್ಚಳವಾಗಿದೆ. ಆದರೆ ಈ ಕಾಯ್ದೆಗಳ ಹಿಂದೆ ಇರುವ ಅಂಬಾನಿ ಹಾಗೂ ಅದಾನಿಗಳಂತಹವರ ಕಾರ್ಪೊರೇಟ್ ಹಿತಾಸಕ್ತಿಯನ್ನು ರೈತ ಚಳವಳಿ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ.

ಹೀಗಾಗಿಯೇ ರೈತ ಚಳವಳಿ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳನ್ನು ತನ್ನ ದಾಳಿಗೆ ಗುರಿಯಾಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಅಂಬಾನಿ ಹಾಗೂ ಅದಾನಿಗಳ ವಿರುದ್ಧವೂ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಅಂಬಾನಿ ಕಂಪೆನಿಗೆ ಸೇರಿದ ನೂರಾರು ಜಿಯೋ ಟವರ್‌ಗಳನ್ನು ಹಾನಿಗೊಳಿಸಿದ್ದಾರೆ. ಅದಾನಿಯ ಗೂಡ್ಸ್ ರೈಲು ಪಂಜಾಬಿನಲ್ಲಿ ಸಂಚರಿಸಿದಂತೆ ಯಶಸ್ವಿಯಾಗಿ ತಡೆಹಿಡಿದಿದ್ದಾರೆ. ಇವೆಲ್ಲವೂ, ಈಗಾಗಲೇ ಅಂಬಾನಿ ಹಾಗೂ ಅದಾನಿಗಳ ವಹಿವಾಟಿನಲ್ಲಿ ಗಣನೀಯ ಪ್ರಮಾಣದ ನಷ್ಟವನ್ನು ಉಂಟು ಮಾಡಲು ಪ್ರಾರಂಭಿಸಿದೆ. ಆದ್ದರಿಂದ ಎಚ್ಚೆತ್ತುಕೊಂಡಿರುವ ಅಂಬಾನಿ-ಅದಾನಿ ಕಂಪೆನಿಗಳು ಒಂದೆಡೆ ಸರಕಾರಕ್ಕೆ ತಮ್ಮ ಆಸ್ತಿ-ಪಾಸ್ತಿಗಳ ರಕ್ಷಣೆ ಮಾಡಬೇಕೆಂದು ತಾಕೀತುಮಾಡುತ್ತಾ ಮತ್ತೊಂದೆಡೆ ತಮ್ಮಂತಹ ‘ಸ್ವದೇಶಿ’ ಹಾಗೂ ‘ಆತ್ಮ ನಿರ್ಭರ’ ಉದ್ಯಮಿಗಳನ್ನು ನಾಶಮಾಡಲೆಂದೇ ವಿದೇಶೀ ಶಕ್ತಿಗಳು ಕೆಲವು ಗುಂಪುಗಳಿಗೆ ದುಡ್ಡುಕೊಟ್ಟು ಈ ಹೋರಾಟವನ್ನು ಮಾಡಿಸುತ್ತಿವೆಯೆಂದೂ, ಅವರನ್ನು ದೇಶದ್ರೋಹದ ಅಪರಾಧಗಳಿಗಾಗಿ ಬಂಧಿಸಬೇಕೆಂದೂ ಗೃಹ ಇಲಾಖೆಗೆ ದೂರು ಕೊಟ್ಟಿವೆ. ಮತ್ತೊಂದೆಡೆ, ಅಂಬಾನಿಯ ರಿಲಯನ್ಸ್ ಕಂಪೆನಿ ತಾನು ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡುವ ಯಾವುದೇ ಇರಾದೆಯನ್ನು ಹೊಂದಿಲ್ಲವೆಂದೂ, ತಮ್ಮ ವಿರೋಧಿಗಳ ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದೂ ಮನವಿ ಮಾಡಿದೆ.

ಮತ್ತೊಂದು ಕಡೆ ಅದಾನಿ ಕಂಪೆನಿ ತಾನು ವ್ಯವಹಾರ ನಡೆಸುತ್ತಿರುವುದೇ ರೈತರ ಉದ್ಧಾರಕ್ಕಾಗಿಯೆಂದೂ, ತಾನು FCI- ಭಾರತೀಯ ಆಹಾರ ನಿಗಮವು- ರೈತರಿಂದ ಕೊಂಡ ಧಾನ್ಯಗಳನ್ನು ತನ್ನ ಗೋದಾಮಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುವ ಕೆಲಸ ಮಾತ್ರ ಮಾಡುತ್ತಾ ದೇಶಕ್ಕೆ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದೆ. ಒಟ್ಟಿನಲ್ಲಿ ಅಂಬಾನಿ ಹಾಗೂ ಅದಾನಿಗಳಿಬ್ಬರೂ ತಮಗೂ ಮತ್ತು ಕೃಷಿ ಕಾಯ್ದೆಗಳಿಗೂ ಯಾವ ಸಂಬಂಧವೂ ಇಲ್ಲವೆಂದು ರುಜುವಾತುಪಡಿಸಲು ಹೆಣಗುತ್ತಿದ್ದಾರೆ.

ಆದರೆ ವಾಸ್ತವವೇನು?

ಅಸಲಿ ವಿಷಯವೆಂದರೆ ಮೋದಿ ಸರಕಾರದ ಈ ಮೂರು ಕಾಯ್ದೆಗಳಿಂದ ಹಾಗೂ ಈ ಹಿಂದಿನ ಯುಪಿಎ ಸರಕಾರ ಪ್ರಾರಂಭಿಸಿದ ಕೃಷಿ ಮಾರುಕಟ್ಟೆ ಖಾಸಗೀಕರಣ ನೀತಿಗಳಿಂದ ಈ ದೇಶದಲ್ಲಿ ಅಪಾರ ಲಾಭ ಮಾಡಿದವರು, ಮಾಡುತ್ತಿರುವವರು ಹಾಗೂ ಮುಂದೆಯೂ ಮಾಡಲಿರುವವರು ಅದಾನಿ ಮತ್ತು ಅಂಬಾನಿಗಳೇ ಆಗಿದ್ದಾರೆ. ಆದ್ದರಿಂದಲೇ ಈ ಹೋರಾಟದಲ್ಲಿ ಈಗಾಗಲೇ 60ಕ್ಕೂ ಹೆಚ್ಚು ರೈತರು ಜೀವತೆತ್ತಿದ್ದರೂ ಅಂಬಾನಿ-ಅದಾನಿಗಳ ಅಪರಿಮಿತ ಲಾಭಕ್ಕೆ ಅವಕಾಶ ಕೊಡುವ ನೀತಿಗಳನ್ನು ಹಿಂದೆಗೆದುಕೊಳ್ಳಲು ಮೋದಿ ಸರಕಾರ ಸಿದ್ಧವಿಲ್ಲ. ಸುಪ್ರೀಂ ಕೋರ್ಟೂ ತಯಾರಿಲ್ಲ.

AALC- ಆಹಾರ ದಾಸ್ತಾನಿನ ‘ಅದಾನೀ’ಕರಣ

ಮೋದಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳಲ್ಲಿ ಹೆಚ್ಚು ಚರ್ಚೆಯಾಗದಿರುವುದು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ. ಈ ಕಾಯ್ದೆ ಜಾರಿಯಾಗುವ ಮುಂಚೆ ಆಹಾರ ಧಾನ್ಯಗಳ ದಾಸ್ತಾನು, ಸಾಗಾಟ ಮತ್ತು ಮಾರಾಟಗಳ ಮೇಲೆ ಸರಕಾರದ ನಿಯಂತ್ರಣವಿತ್ತು.

ಆದರೆ ವಾಜಪೇಯಿಯವರು ಮೊದಲಬಾರಿಗೆ ಪ್ರಧಾನಿಯಾದಾಗಲೇ 2000ದಲ್ಲಿ ಈ ವ್ಯವಸ್ಥೆಯನ್ನು ಬದಲು ಮಾಡಿ ಆಹಾರ ನಿಗಮದ ದಾಸ್ತಾನು ವಹಿವಾಟನ್ನು ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾಪವನ್ನು ಪರಿಗಣಿಸಲಾಗಿತ್ತು.

ಏಕೆಂದರೆ ಕೃಷಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳವು ಬರಬೇಕೆಂದರೆ ಆಹಾರ ನಿಗಮ ವ್ಯವಸ್ಥೆ ರದ್ದಾಗಬೇಕೆಂಬುದು ಕೃಷಿ ಕಂಪೆನಿಗಳ ಆಗ್ರಹವಾಗಿತ್ತು. ಏಕೆಂದರೆ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಹೆಚ್ಚಾದರೆ ನಿಗಮದ ಮೂಲಕ ಮಾರುಕಟ್ಟೆಗೆ ಕಡಿಮೆ ದರದಲ್ಲಿ ಧಾನ್ಯ ಪೂರೈಕೆ ಮಾಡಿ ದರವನ್ನು ತಗ್ಗಿಸುವ ವ್ಯವಸ್ಥೆ ಖಾಸಗಿ ವ್ಯಾಪಾರಿಗಳ ಲಾಭಕ್ಕೆ ದೊಡ್ಡ ಅಡ್ಡಿಯಾಗಿತ್ತು. ಹೀಗಾಗಿ ವಿಶ್ವಬ್ಯಾಂಕ್- WTO ಮೂಲಕವೂ ಜಾಗತಿಕ ದೈತ್ಯ ಕೃಷಿ ಉದ್ಯಮಿಗಳು ಭಾರತದ ಆಹಾರ ನಿಗಮ ಸಂಸ್ಥೆಯನ್ನು ಹಾಗೂ ಸರಕಾರವೇ ರೈತರಿಂದ ಕನಿಷ್ಠ ದರ ಕೊಟ್ಟು ಖರೀದಿ ಮಾಡುವ ವ್ಯವಸ್ಥೆಯನ್ನು ರದ್ದುಮಾಡಬೇಕೆಂಬ ಒತ್ತಡವನ್ನು ಹಾಕುತ್ತಲೇ ಬಂದಿದ್ದವು. ಈ ಒತ್ತಡಗಳಿಗೆ ಮಣಿದು ಯುಪಿಎ ಸರಕಾರ ಆಂಶಿಕವಾಗಿ ಆಹಾರ ದಾಸ್ತಾನಿನ ಖಾಸಗೀಕರಣ ಯೋಜನೆಯನ್ನು 2005ರಲ್ಲಿ ಪ್ರಾರಂಭಿಸಿತ್ತು.

ಆಗಲೇ ಗಾಳಿಯ ದಿಕ್ಕನ್ನು ಅರಿತುಕೊಂಡ ಅದಾನಿ ಕಂಪೆನಿ Adani Agri Logistics Company- AALC ಕಂಪೆನಿಯನ್ನು ಸ್ಥಾಪಿಸಿತು. ಆದರೆ ಯುಪಿಎ ಸರಕಾರ ಅಗತ್ಯ ವಸ್ತುಗಳ ತಿದ್ದುಪಡಿ, ಕಾಂಟ್ರಾಕ್ಟ್ ಫಾರ್ಮಿಂಗ್ ಹಾಗೂ ಅಇ ಕಾಯ್ದೆಗಳಿಗೆ ಕಂಪೆನಿ ಪರವಾದ ತಿದ್ದುಪಡಿ ಮಾಡುವಷ್ಟು ಸಂಖ್ಯಾಬಲವನ್ನು ಹೊಂದಿರಲಿಲ್ಲ. ವಿಪರ್ಯಾಸವೆಂದರೆ ಆಗ ಯುಪಿಎ ಸರಕಾರ ಕಂಪೆನಿಗಳ ಪರವಾಗಿ ಮಾಡಬೇಕೆಂದಿದ್ದ ಸಣ್ಣಪುಟ್ಟ ತಿದ್ದುಪಡಿಗಳನ್ನು ರೈತ ಹಿತಾಸಕ್ತಿಯನ್ನು ಮುಂದುಮಾಡಿ ವಿರೋಧಿಸಿದ್ದು ಬಿಜೆಪಿ ಪಕ್ಷವೇ!

ಆದರೆ 2014ರಲ್ಲಿ ಮೋದಿ ಸರಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಮೇಲೆ ಈ ಹಿಂದಿನ ಕಾಯ್ದೆಗಳಿಗೆ ದೊಡ್ಡ ಮಟ್ಟದ ತಿದ್ದುಪಡಿ ತರದೆಯೇ ಕೃಷಿ ಸರಕುಗಳ ದಾಸ್ತಾನು, ಕಾಂಟ್ರಾಕ್ಟ್ ಫಾರ್ಮಿಂಗ್, ಕೃಷಿ ಮಾರುಕಟ್ಟೆಯಲ್ಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕೊಡುತ್ತಾ ಬಂದಿತು. ಇದರ ಅತಿದೊಡ್ಡ ಲಾಭ ಪಡೆದುಕೊಂಡಿದ್ದು ಮೋದಿಯವರ ಅತ್ಯಾಪ್ತರಾಗಿದ್ದ ಅದಾನಿ. 2005ರಲ್ಲೇ ಅದಾನಿ ಕಂಪೆನಿಗೆ ಆಹಾರ ನಿಗಮವು ತನ್ನ ಪರವಾಗಿ ಆಹಾರ ದಾಸ್ತಾನು ಮತ್ತು ಸಾಗಾಟದ ಪರವಾನಿಗೆ ಕೊಟ್ಟಿದ್ದರೂ AALC ಕಂಪೆನಿ ದೊಡ್ಡ ಪ್ರಮಾಣದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿದ್ದು ಮತ್ತು ದುಪಟ್ಟು ಲಾಭ ಮಾಡಿದ್ದು ಮೋದಿ ಕಾಲದಲ್ಲೇ..

ಸರಕಾರದ ದುಡ್ಡು-ಅದಾನಿಯ ಗೋಡೌನು!

ಕಳೆದ ದಶಕದ ವೇಳೆಗೆ ಭಾರತದಲ್ಲಿ ಆಹಾರ ಧಾನ್ಯ ಉತ್ಪತ್ತಿಯು ಆಹಾರ ನಿಗಮದ ದಾಸ್ತಾನು ಸಾಮರ್ಥ್ಯಕ್ಕಿಂತ 40 ಲಕ್ಷ ಟನ್ನಿನಷ್ಟು ಹೆಚ್ಚಿಗೆಯಾಗಿತ್ತು. ಅಷ್ಟು ಪ್ರಮಾಣದ ಹೆಚ್ಚುವರಿ ಸಂಗ್ರಹವನ್ನು ದಾಸ್ತಾನು ಮಾಡಿಕೊಳ್ಳಲು ನಿಗಮವು ಹೊಸ ಸ್ಟೀಲ್ ಸಂಗ್ರಹಾಗಾರ-ಸೈಲೋಗಳನ್ನು ನಿರ್ಮಿಸಬೇಕಿತ್ತು. ಆದರೆ ಅದಕ್ಕೆ ಸುಮಾರು 4,000 ಕೋಟಿ ರೂ.ಗಳು ವೆಚ್ಚವಾಗುವುದರಿಂದ ಆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಬೇಕೆಂದು ಮೋದಿ ಸರಕಾರ ತೀರ್ಮಾನ ಕೈಗೊಂಡಿತು. ಈ ತೀರ್ಮಾನದ ಪ್ರಮುಖ ಫಲಾನುಭವಿಯಾಗಿದ್ದು-ಅದಾನಿಯ AALC  ಕಂಪೆನಿ.
ಈ ಯೋಜನೆಯ ಪ್ರಕಾರ ಅದಾನಿಯ AALC   ಕಂಪೆನಿಯು 700 ಕೋಟಿ ರೂ. ವೆಚ್ಚದಲ್ಲಿ ಪಂಜಾಬ್, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡುಗಳಲ್ಲಿ ಅತ್ಯಾಧುನಿಕ ಗುಣಮಟ್ಟದ ಹಾಗೂ ಒಟ್ಟಾರೆ 10 ಲಕ್ಷ ಟನ್ ದಾಸ್ತಾನು ಸಾಮರ್ಥ್ಯದ ಸೈಲೋಗಳನ್ನು ನಿರ್ಮಿಸುತ್ತದೆ. ಅದಾನಿಯವರ ವೆಬ್‌ಸೈಟಿನಲ್ಲಿ ಇದರ ಬಗ್ಗೆ ಬರೆದುಕೊಂಡಿರುವಂತೆ ಇಲ್ಲಿ ರೈತರು ತಮ್ಮ ಸರಕುಗಳನ್ನು ತಂದು ಸುರಿದುಹೋದರೆ ಸಾಕು, ಕಂಪೆನಿಯೇ ಅದನ್ನು ಅತ್ಯಾಧುನಿಕ ಯಂತ್ರಗಳಿಂದ ಸ್ವಚ್ಛಗೊಳಿಸಿ, ಹೊಟ್ಟು ತೆಗೆದು, ಸರಿಯಾದ ತಾಪಮಾನದಲ್ಲಿ ಸೈಲೋಗಳಲ್ಲಿ ಸಂಗ್ರಹಿಸುತ್ತದೆ ಮತ್ತು ಆ ನಂತರ ಅದು ತನ್ನದೇ ಅತ್ಯಾಧುನಿಕ ಸ್ವಂತ ರೈಲಿನಲ್ಲಿ ಅಹಾರ ನಿಗಮವು ಹೇಳುವ ಕಡೆ ಸರಬರಾಜು ಮಾಡುತ್ತದೆ. ಈ ವ್ಯವಹಾರಕ್ಕಾಗಿಯೇ ಅದಾನಿ ಕಂಪೆನಿ ತಲಾ 50 ವ್ಯಾಗನ್‌ಗಳಿರುವ ಏಳು ಟ್ರೈನುಗಳನ್ನು ಖರೀದಿ ಮಾಡಿದೆ. ಇಲ್ಲಿ ಲೋಡ್-ಅನ್ಲೋಡ್ ಮಾಡುವುದು ಯಂತ್ರಗಳೇ. ಕೂಲಿಕಾರ್ಮಿಕರು ಬೇಕಿಲ್ಲ ಹಾಗೂ 50 ವ್ಯಾಗನ್‌ಗಳಿರುವ ಒಂದು ರೇಕಿಗೆ ಲೋಡ್ ಮಾಡಲು ಕೇವಲ 5 ಗಂಟೆಗಳು ಸಾಕಂತೆ.. (https://www.adaniagrilogistics.com/silo-storage)

ಆದರೆ ಇದರಿಂದ ಅದಾನಿ ಕಂಪೆನಿಗೇನು ಲಾಭ?

2015ರ ಒಪ್ಪಂದದ ಪ್ರಕಾರ ಭಾರತೀಯ ಆಹಾರ ನಿಗಮವು ಒಂದು ಕ್ವಿಂಟಾಲ್ ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳಲು ಒಂದು ತಿಂಗಳಿಗೆ 100 ರೂ. ಬಾಡಿಗೆಯನ್ನು ನೀಡುತ್ತದೆ ಹಾಗೂ ಈ ಒಪ್ಪಂದವು 30 ವರ್ಷಗಳ ಕಾಲ ಖಾಯಂ ಆಗಿರುವುದಲ್ಲದೆ ಪ್ರತಿವರ್ಷ ಬಾಡಿಗೆ ದರವನ್ನು ಹಣದುಬ್ಬರಕ್ಕೆ ತಕ್ಕಂತೆ ಪರಿಷ್ಕರಿಸಲಾಗುವುದು. ಅದಾನಿ ಕಂಪೆನಿಯ ವೆಬ್‌ಸೈಟೇ ಹೇಳುವಂತೆ ಪ್ರತಿವರ್ಷ ಅದು 10 ಲಕ್ಷ ಟನ್ನು ಆಹಾರ ಧಾನ್ಯಗಳನ್ನು ಆಹಾರ ನಿಗಮಕ್ಕಾಗಿ ಸಂಗ್ರಹಿಸಿಟ್ಟುಕೊಳ್ಳಲಿದೆ. ತಿಂಗಳಿಗೆ ಒಂದು ಕ್ವಿಂಟಾಲಿಗೆ 100 ರೂ. ಬಾಡಿಗೆಯಂತೆ 10 ಲಕ್ಷ ಟನ್ನಿಗೆ ಒಂದು ವರ್ಷಕ್ಕೆ ಅದಾನಿ ಕಂಪೆನಿಗೆ ಸರಕಾರವು ತೆರಲಿರುವ ಬಾಡಿಗೆ ಎಷ್ಟು? ರೂ. 120 ಕೋಟಿ. ಅಂದರೆ ಕೇವಲ ಆರು ವರ್ಷಗಳಲ್ಲಿ ಈ ಸೈಲೋಗಳನ್ನು ಕಟ್ಟಲು ಆದ 700 ಕೋಟಿಯನ್ನು ಅದಾನಿ ಕಂಪೆನಿ ವಾಪಸ್ ಪಡೆದುಕೊಂಡಿರುತ್ತದೆ. ಆದರೆ ಕಾಂಟ್ರಾಕ್ಟ್ 30 ವರ್ಷಗಳದ್ದು. ಹೀಗಾಗಿ ಉಳಿದ 23 ವರ್ಷ ಲಾಭ! ಇಂತಹ ಲಾಭ ಯಾವ ಖಾಸಗಿ ವ್ಯವಹಾರಗಳಲ್ಲಿ ಇರಲು ಸಾಧ್ಯ?? ಇದು ಕೇವಲ ದಾಸ್ತಾನಿನ ವ್ಯವಹಾರ. ಅವನ್ನು ತನ್ನ ಸ್ವಂತ ಟ್ರೈನುಗಳಲ್ಲಿ ನಿಗಮವು ಹೇಳಿದ ಕಡೆ ಸರಬರಾಜು ಮಾಡುವ ವೆಚ್ಚವೂ ಸೇರಿದಲ್ಲಿ ಟನ್‌ಗೆ 2,500 ರೂ. ಅನ್ನು ಸರಕಾರ ಕಂಪೆನಿಗೆ 30 ವರ್ಷಗಳ ಕಾಲ ಪಾವತಿಸಲಿದೆ. ಅಂದರೆ ಸರಕಾರದ ವೆಚ್ಚದಲ್ಲಿ ಅದಾನಿ ಕಂಪೆನಿ ಲಕ್ಷಾಂತರ ಟನ್ ಸಾಮರ್ಥ್ಯದ ದಾಸ್ತಾನು ಸಂಗ್ರಹಾಗಾರಗಳನ್ನು ನಿರ್ಮಿಸಿಕೊಂಡಂತಾಗಲಿಲ್ಲವೇ? ಇಷ್ಟೆಲ್ಲಾ ಆದ ನಂತರ ಇದೀಗ ಮೋದಿ ಸರಕಾರ ಅಧಿಕೃತವಾಗಿ ಅಗತ್ಯ ವಸ್ತುಗಳ ಕಾಯ್ದೆಯನ್ನು ರದ್ದು ಮಾಡಿ ಯಾವ ಖಾಸಗಿ ಕಂಪೆನಿಯಾದರೂ ಎಷ್ಟು ಬೇಕಾದರೂ ಸಂಗ್ರಹ ಮಾಡಿ, ಎಷ್ಟು ಬೇಕಾದರೂ ರಫ್ತು ಮಾಡಬಹುದು ಎಂಬ ಕಾಯ್ದೆಯನ್ನು ಜಾರಿ ಮಾಡಿದೆ. ಆದರೆ ಈ ಹೊಸ ಕಾಯ್ದೆಯ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಮರ್ಥ್ಯವಿರುವುದು ಮೋದಿ ಮಿತ್ರ ಅದಾನಿ ಕಂಪೆನಿಗೆ ಮಾತ್ರ. ಏಕೆಂದರೆ ಈಗ ಭಾರತದಲ್ಲಿ ಆಹಾರ ನಿಗಮವನ್ನು ಬಿಟ್ಟರೆ ಆ ಪ್ರಮಾಣದಲ್ಲಿ ದಾಸ್ತಾನು ಸಾಮರ್ಥ್ಯ ಇರುವುದು ಅದಾನಿಗೆ ಮತ್ತು ಅದಕ್ಕೆ ಆ ಸಾಮರ್ಥ್ಯ ಬಂದಿದ್ದು ಮೋದಿ ಸರಕಾರದ ಕಳೆದ ಆರು ವರ್ಷಗಳ ನೀತಿಯಿಂದ..

ಸಾಗಾಟ ಸಾಮ್ರಾಟ- ಕಪ್ಪಮೋದಿಗೆ, ಕಷ್ಟ ರೈತರಿಗೆ

ಅದಾನಿ ಕಂಪೆನಿ ಕಳೆದ ಆರು ವರ್ಷಗಳಿಂದ ದೊಡ್ದ ಮಟ್ಟದಲ್ಲಿ ವಿಮಾನ ನಿಲ್ದಾಣಗಳ ಹಾಗೂ ರೈಲ್ವೆ ನಿಲ್ದಾಣಗಳ ನಿರ್ವಹಣಾ ಗುತ್ತಿಗೆಯನ್ನು ತೆಗೆದುಕೊಳ್ಳುತ್ತಿರುವುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡರೆ ಒಟ್ಟಾರೆ ಚಿತ್ರಣ ಇನ್ನಷ್ಟು ಸ್ಪಷ್ಟವಾಗುತ್ತದೆ. ಹೊಸ ಕಾಯ್ದೆಗಳಿಂದ ನೇರವಾಗಿ ರೈತರಿಂದ ಬೇಕೆಂದಷ್ಟು ಖರೀದಿ ಮಾಡಿ, ಸೈಲೋಗಳಲ್ಲಿ ದಾಸ್ತಾನು ಮಾಡಿಟ್ಟುಕೊಂಡು, 1) ಎಲ್ಲಿ ಬೇಕಾದಲ್ಲಿ ತನ್ನದೇ ಟ್ರೈನುಗಳಲ್ಲಿ ಸಾಗಾಟ ಮಾಡಿ ಹೆಚ್ಚಿನ ಲಾಭಕ್ಕೆ ದೇಶೀಯ ಮಾರುಕಟ್ಟೆಗೇ ಮಾರುವುದು ಅಥವಾ 2) ವಿದೇಶಕ್ಕೆ ರಫ್ತು ಮಾಡುವುದು ಅದಾನಿಗೆ ಸುಲಭವಾಗುತ್ತದೆ. ಹೀಗಾಗಿ ಕೃಷಿ ಸಾಗಾಟ ಸೌಕರ್ಯ- ಅಗ್ರಿ ಲಾಜಿಸ್ಟಿಕ್ಸ್- ಮಾರುಕಟ್ಟೆಯಲ್ಲಿ ಪ್ರಶ್ನಾತೀತ ದೈತ್ಯ ಮಾನೋಪಲಿಯಾಗಿ ಅದಾನಿ ಕಂಪೆನಿ ಬೆಳೆಯಲಿದೆ. ಅದಾನಿಯವರ 2019-20ರ ವಾರ್ಷಿಕ ವಹಿವಾಟು ವರದಿಯ ಪ್ರಕಾರ ಒಟ್ಟಾರೆ ಅದಾನಿ ಸಾಮ್ರಾಜ್ಯದ ಗಳಿಕೆಯು ಶೇ.27ರ ದರದಲ್ಲಿ ಬೆಳೆದರೆ, ಅಗ್ರಿ ಲಾಜಿಸ್ಟಿಕ್ಸ್ ಮೂಲದ ಲಾಭದ ದರವು ಶೇ.60ರ ದರದಲ್ಲಿ ಬೆಳೆದಿದೆ.

ಅದೇ ವರದಿಯಲ್ಲಿ ಅದಾನಿ ಕಂಪೆನಿಯು:
“AALL has long term (20-30 year) guaranteed offtake contracts on use or pay basis with 70%+ EBITDA margins. AALL targets to double infrastructure capacity in the next 3 years and tap the new 12.5 MMT infrastructure market as well” 

(ಅಂದರೆ- ಅದಾನಿ ಅಗ್ರಿ ಲಾಜಿಸ್ಟಿಕ್ಸ್ ಕಂಪೆನಿಗೆ ಸರಕಾರದಿಂದ 20-30 ವರ್ಷಗಳ ಖಾತರಿಯಾದ ಒಪ್ಪಂದವಿದೆ. ಇದು ಶೇ. 70ರಷ್ಟು ಲಾಭವನ್ನು ಗಳಿಸಿಕೊಡಲಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು 1.25 ಕೋಟಿ ಟನ್‌ಗಳಿಗೆ ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ)..ಎಂದು ಹೇಳಿಕೊಂಡಿದೆ.

https://www.adaniports.com/-/media/Project/Ports/Investor/corporate-governance/Corporate-Announcement/other-intimation--1/24523022019Intimation-of-proposal-for-acquisition.pdf?la=en)

ರೈತರಿಗೆ ಬೆಲೆಯನ್ನು ಖಾತರಿಗೊಳಿಸಲು ನಿರಾಕರಿಸುವ ಮೋದಿ ಸರಕಾರ ಅದಾನಿ ಕಂಪೆನಿಗೆ ಒಂದಲ್ಲ ಎರಡಲ್ಲ 30 ವರ್ಷಗಳ ಕಾಲ ಶೇ. 70ರಷ್ಟು ಲಾಭವನ್ನು ಖಾತರಿಗೊಳಿಸಿದೆ. ಮಿತ್ರಋಣ ತೀರಿಸುತ್ತಿದೆ. ದೇಶಕ್ಕೆ ದ್ರೋಹಬಗೆಯುತ್ತಿದೆ.

ಆತ್ಮಬರ್ಭರ ಅದಾನಿ ವಿಲ್ಮರ್ ಮತ್ತು ಅದಾನಿ ಫ್ರೆಶ್

ಇದರ ಜೊತೆಗೆ ಅದಾನಿ ಕಂಪೆನಿಯು ಸಿಂಗಾಪುರದ ವಿಲ್ಮರ್ ಕಂಪೆನಿಯ ಜೊತೆ ಸೇರಿ ಅದಾನಿ-ವಿಲ್ಮರ್ ಎಂಬ ಬಹುರಾಷ್ಟ್ರೀಯ ಕಂಪೆನಿಯನ್ನು ಸ್ಥಾಪಿಸಿಕೊಂಡು ಭಾರತದ ಖಾದ್ಯ ತೈಲ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಇದಕ್ಕೆ ಕಾರಣ ಭಾರತವು ಶೇ. 70ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈಗ ಸದ್ಯಕ್ಕೆ ಅದರಲ್ಲಿ ಸ್ವಾವಲಂಬನೆ ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿರುವ ಈ ಸ್ವದೇಶಿ ಅದಾನಿ, ವಿಲ್ಮರ್ ಜೊತೆಗೂಡಿ ವಿದೇಶಿ ಖಾದ್ಯ ತೈಲವನ್ನು ಭಾರತಕ್ಕೆ ಮಾರುವುದರಲ್ಲಿ ಈಗ ನಂಬರ್ 1ನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ತನನ್ನು ಆತ್ಮನಿರ್ಭರ ಉದ್ಯಮಿ ಎಂದು ಹೇಳಿಕೊಳ್ಳುತ್ತದೆ. ತಾವು ಕಾಂಟ್ರಾಕ್ಟ್ ಫಾರ್ಮಿಂಗ್‌ನಲ್ಲಿ ಇಲ್ಲ ಎಂದು ಲಜ್ಜೆಗೆಟ್ಟು ಹೇಳಿಕೊಳ್ಳುವ ಅದಾನಿ ಕಂಪೆನಿ ಕೆಲವು ವರ್ಷಗಳ ಕೆಳಗೆ ಅದಾನಿ ಅಗ್ರಿ ಫ್ರೆಶ್ ಎಂಬ ಹೊಸ ಕಾಂಟ್ರಾಕ್ಟ್ ಫಾರ್ಮಿಂಗ್ ಫಲಾನುಭವಿ ವ್ಯವಹಾರವನ್ನು ಸ್ಥಾಪಿಸಿದೆ. ಅದರ 2019ರ ವರದಿಯೇ ಹೇಳುವಂತೆ 2018-19ರಲ್ಲಿ ಅದು ಹಿಮಾಚಲ ಪ್ರದೇಶದ ಸೇಬು ಬೆಳೆಗಾರರಿಂದ 79 ಕೋಟಿ ರೂ. ಮೌಲ್ಯದ 19,314 ಟನ್ ಸೇಬನ್ನು ರೂ. 79 ಕೋಟಿಗೆ ಖರೀದಿ ಮಾಡಿ 178 ಕೋಟಿಗೆ ಮಾರುಕಟ್ಟೆಯಲ್ಲಿ ಮಾರಿಕೊಂಡು ನಿವ್ವಳ 99 ಕೋಟಿ ರೂ. ಲಾಭ ಮಾಡಿದೆ. (https://www.adanienterprises.com/-/media/Project/Enterprises/Investors/Investor-Downloads/Annual-Report/AEL-AR-2019-20-05-06-2020.pdf)

ಅಂಬಾನಿ ರೀಟೈಲ್ಸ್ ಮತ್ತು ಲಾಭಲೂಟಿಯ ಡೀಟೈಲ್ಸ್

ಇನ್ನೂ ಈ ಅದಾನಿಯ ಹಿರಿಯಣ್ಣ ಅಂಬಾನಿ ಸಹ ತಮ್ಮ ಕಂಪೆನಿ ದೇಶದಲ್ಲೆಲ್ಲೂ ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡುತ್ತಿಲ್ಲ. ತಾವು ರೈತರಿಂದ ಖರೀದಿ ಮಾಡಿದರೂ ಅವರಿಗೆ ಮಾರುಕಟ್ಟೆ ಬೆಲೆಯನ್ನೂ ಕೋಟ್ಟು ಖರೀದಿ ಮಾಡುತ್ತೇವೆ. ನನ್ನನ್ನು ನಂಬಿ ಪ್ಲೀಸ್ ಎಂದು ಮೊಸಳೆ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ವರದಿ ಮಾಡಿರುವಂತೆ ಮೊನ್ನೆ ಸಿಂಧನೂರಿನಲ್ಲಿ ರಿಲಯನ್ಸ್ ಮಾರ್ಟ್ ಸಂಸ್ಥೆಯು ಸ್ವಾಸ್ಥ್ಯ ಎಂಬ ರೈತ ಉತ್ಪಾದಕ ಸಹಕಾರಿ ಸಂಘದಿಂದ ಸಾವಿರ ಟನ್ ಸೋನಾ ಮಸೂರಿ ಅಕ್ಕಿಯನ್ನು ಕ್ವಿಂಟಾಲಿಗೆ 1,950 ರೂ. ಕೊಟ್ಟು ಕೊಂಡಿದ್ದನ್ನು ಉಲ್ಲೇಖಿಸಿ ಬಿಜೆಪಿ ಕೃಷಿ ಮಾರುಕಟ್ಟೆಯ ಖಾಸಗೀಕರಣದ ಪರವಾಗಿ ಮಾತ್ರವಲ್ಲದೆ ಅಂಬಾನಿ ಪರವಾಗಿಯೂ ಲಜ್ಜೆಗೇಡಿ ಪ್ರಚಾರವನ್ನು ಪ್ರಾರಂಭಿಸಿಬಿಟ್ಟಿದೆ. ರಿಲಯನ್ಸ್ ಮಾಡುತ್ತಿರುವ ಈ ಖರೀದಿಯು ತಾನು ಕೃಷಿ ಮಾರುಕಟ್ಟೆಯ ವ್ಯವಹಾರದಲ್ಲೇ ಇಲ್ಲ ಎಂದು ಅದು ಮಾಡುತ್ತಿರುವ ಪ್ರಚಾರವನ್ನು ಸುಳ್ಳೆಂದು ಸಾಬೀತು ಮಾಡುತ್ತದೆ ಎಂಬ ಕನಿಷೃ ತಿಳವಳಿಕೆಯೂ ಈ ಅರಿವುಗೇಡಿಗಳಿಗೆ ಇಲ್ಲ. ಹಾಗೆ ನೋಡಿದರೆ ಚಿಲ್ಲರೆ ಮಾರಾಟದಲ್ಲಿ ಕಾರ್ಪೊರೇಟ್ ಬಂಡವಾಳಕ್ಕ್ಕೆ ಅನುವು ಕೊಟ್ಟಾಗಿನಿಂದಲೂ ಅಂಬಾನಿಯ ರಿಲಯನ್ಸ್ ಎಲ್ಲಾ ಬಗೆಯ ಚಿಲ್ಲರೆ ಮಾರಾಟವನ್ನೂ ಆವರಿಸಿಕೊಳ್ಳುತ್ತಿದೆ. ಅದರ ಭಾಗವಾಗಿಯೇ 2006ರಲ್ಲಿ ಅದು ಪ್ರಾರಂಭಿಸಿದ ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟದ ರಿಲಯನ್ಸ್ ಫ್ರೆಶ್ ವಿಭಾಗವು ಇಂದು ದೇಶಾದ್ಯಂತ 621 ಮಳಿಗೆಗಳನ್ನು ಹೊಂದಿದ್ದು ಪ್ರತಿದಿನ 200 ಟನ್‌ಗಳಷ್ಟು ಹಣ್ಣುಗಳನ್ನು ಹಾಗೂ 300 ಟನ್‌ಗಳಷ್ಟು ತರಕಾರಿಗಳನ್ನು ಮಾರಾಟ ಮಾಡುತ್ತಿದೆ. ತನ್ನ ರಿಲಯನ್ಸ್ ಫ್ರೆಶ್‌ನ ವೆಬ್‌ಸೈಟ್‌ನಲ್ಲೇ ಅದು ಜಾಹೀರಾತು ಮಾಡಿಕೊಳ್ಳುವಂತೆ ಈ ಖರೀದಿಗಾಗಿ ಅದು ದೊಡ್ಡ ಸಂಖ್ಯೆಯ ರೈತಾಪಿಯ ಜೊತೆ ನೇರ ವಹಿವಾಟಿನಲ್ಲಿ ತೊಡಗಿಕೊಂಡಿದೆ ಅರ್ಥಾತ್ ಪ್ರತ್ಯಕ್ಷ ಅಥವಾ ಪರೋಕ್ಷ ರೂಪದ ಕಾಂಟ್ರಾಕ್ಟ್ ಫಾರ್ಮಿಂಗ್ ಸ್ವರೂಪದ ಸಂಬಂಧಗಳನ್ನು ಇಟ್ಟುಕೊಂಡಿದೆ.

(https://relianceretail.com/reliance-fresh.html)

ಜೊತೆಗೆ ರಿಲಯನ್ಸ್ ಸಂಸ್ಥೆಯು ಭಾರತದ ಅತಿ ದೊಡ್ಡ ಮಾವು ಉತ್ಪಾದಕ ಸಂಸ್ಥೆಯೂ ಆಗಿದ್ದು ಗುಜರಾತಿನಲ್ಲಿ ತನ್ನದೇ 600 ಎಕರೆ ಮಾವು ತೋಪನ್ನೂ ಹೊಂದಿದೆ. ಅಂಬಾನಿಯ ಜಿಯೋಮಾರ್ಟ್- ಕೃಷಿ ಮಾರುಕಟ್ಟೆಯ ಪ್ಯಾರಾಸೈಟ್

ಎಲ್ಲಕ್ಕಿಂತ ಮುಖ್ಯವಾಗಿ ಅಂಬಾನಿಯವರ ಅತಿದೊಡ್ಡ ವ್ಯಾವಹಾರಿಕ ಸಂಸ್ಥೆಯಾದ ಜಿಯೋಮಾರ್ಟ್ ಸಂಸ್ಥೆ ಈ ದೇಶದ ಚಿಲ್ಲರೆ ಮಾರಾಟದ ನಕ್ಷೆಯನ್ನೇ ಬದಲಿಸಲಿದೆ. ಕಾರಣಕ್ಕಾಗಿಯೇ ಫೇಸ್‌ಬುಕ್ ಸಹ ಅಂಬಾನಿಯವರ ಜಿಯೋ ಮಾರ್ಟ್‌ನಲ್ಲಿ 53,000 ಕೋಟಿ ಹೂಡಿಕೆಯನ್ನು ಮಾಡಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಅಸಂಘಟಿತ ಚಿಲ್ಲರೆ ಮಾರಾಟದ ವಾರ್ಷಿಕ ವಹಿವಾಟು 8 ಲಕ್ಷ ಕೋಟಿಗಳನ್ನು ಮೀರಿದೆ. ಅದರಲ್ಲಿ ಶೇ. 30 ಭಾಗ ಆಹಾರ ಧಾನ್ಯಗಳೇ ಮಾರಾಟವೇ ಆಗಿದೆ. ಅಂದಾಜು 2-3 ಲಕ್ಷ ಕೋಟಿಗಳಷ್ಟಾಗುವ ಆಹಾರ ಧಾನ್ಯಗಳ ಚಿಲ್ಲರೆ ಮಾರಾಟವನ್ನು ಸಂಘಟಿತ ಮಾರಾಟದಡಿಯಲ್ಲಿ ತಂದು ಲಾಭ ಸೂರೆ ಹೊಡೆಯುವುದು ಜಿಯೋ ಮಾರ್ಟ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ವ್ಯಾಪಾರಿ ಮತ್ತು ಗ್ರಾಹಕರ ನಡುವೆ ಸಂಘಟಿತ ಹಾಗೂ ನಿರಂತರ ಸಂಬಂಧವನ್ನು ಏರ್ಪಡಿಸಿಕೊಳ್ಳಲು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್ ಬಳಕೆಯಾಗಲಿದೆ ಹಾಗೂ ಆಹಾರ ಧಾನ್ಯಗಳ ಚಿಲ್ಲರೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗಬೇಕೆಂದರೆ ರೈತರಿಂದ ಅಗ್ಗದ ಬೆಲೆಗೆ ನೇರ ಖರೀದಿ ಮಾಡಲು ತನ್ನದೇ ಆದ ಮಂಡಿ ಅಥವಾ ಖರೀದಿ ಕೇಂದ್ರ ಹಾಗೂ ಕೇಂದ್ರೀಕೃತವಾದ ದಾಸ್ತಾನು ಹಾಗೂ ಸರಬರಾಜು ವ್ಯವಸ್ಥೆಯ ಅಗತ್ಯವಿರುತ್ತದೆ. ಮ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News