ಸುಪ್ರೀಂಕೋರ್ಟ್ ತಡೆಯಾಜ್ಞೆ ರೈತರಿಗೆ ನ್ಯಾಯ ನೀಡದು

Update: 2021-01-13 04:53 GMT

ರೈತ ಹೋರಾಟ ದೇಶಾದ್ಯಂತ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೂಪ ಪಡೆದಿದೆ. ಸರಕಾರದ ರೈತ ವಿರೋಧಿ ಸರ್ವಾಧಿಕಾರಿ ನೀತಿಯನ್ನು ಪಂಜಾಬ್ ಮತ್ತು ಇನ್ನಿತರ ರಾಜ್ಯಗಳ ರೈತರು ತಮ್ಮ ಪ್ರಾಣ ಒತ್ತೆಯಿಟ್ಟು ವಿರೋಧಿಸುತ್ತಿದ್ದಾರೆ. ದಿಲ್ಲಿಯ ಗಡಿಯಲ್ಲಿ ಹಗಲು-ರಾತ್ರಿ ವೃದ್ಧರು, ಯುವಕರು, ಮಹಿಳೆಯರು ಎನ್ನುವ ಭೇದವಿಲ್ಲದೆ ನೆರೆದಿದ್ದಾರೆ. ಹಿರಿಯ ಜೀವಗಳು ಚಳಿ, ಮಳೆಯನ್ನು ತಡೆಯಲಾರದೆ ಒಬ್ಬೊಬ್ಬರಾಗಿ ಪ್ರಾಣ ತೆರುತ್ತಿದ್ದಾರೆ. ಮೃತರ ಸಂಖ್ಯೆ ಈಗಾಗಲೇ 50ನ್ನು ದಾಟಿದೆ. ಸರಕಾರದ ನೀತಿಯನ್ನು ವಿರೋಧಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಓರ್ವ ಧಾರ್ಮಿಕ ಗುರು ಕೂಡ ಸೇರಿದ್ದಾರೆ. ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯನ್ನು ದಮನಿಸಲು ಅನುಸರಿಸಿದ ತಂತ್ರವನ್ನು ಸರಕಾರ ರೈತರ ಪ್ರತಿಭಟನೆಯಲ್ಲೂ ಬಳಸಲು ಹೊರಟಿತು. ಪ್ರತಿಭಟನಾಕಾರರನ್ನು ಖಾಲಿಸ್ತಾನಿಗಳು ಎಂದು ಕರೆಯಿತು. ಪೊಲೀಸರನ್ನು ಬಳಸಿತು. ಮಳೆ-ಚಳಿಗೆ ದಣಿದು ಮರಳುತ್ತಾರೆ ಎಂದು ಭಾವಿಸಿತು. ವಿರೋಧಪಕ್ಷಗಳನ್ನು ಹೊಣೆ ಮಾಡಿತು. ಕೊರೋನಾವನ್ನು ಮುಂದು ಮಾಡಿತು. ಹಕ್ಕಿಜ್ವರವನ್ನು ತೋರಿಸಿ ಹೆದರಿಸಿತು. ಆದರೂ ರೈತರು ಒಂದು ಹೆಜ್ಜೆ ಹಿಂದಿಡಲಿಲ್ಲ. ಬದಲಿಗೆ ಪ್ರತಿಭಟನೆ ತೀವ್ರವಾಯಿತು.

'ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು' ಎಂಬಂತೆ ದಿನದಿಂದ ದಿನಕ್ಕೆ ಪ್ರತಿಭಟನಾಕಾರರ ದಂಡು ಸೇರುತ್ತಲೇ ಇದೆ. ಜೊತೆಗೆ ಗಣರಾಜ್ಯೋತ್ಸವವನ್ನು ರೈತರಾಜ್ಯೋತ್ಸವವಾಗಿ ಪರಿವರ್ತಿಸಲು ರೈತರು ನಿರ್ಧರಿಸಿದ್ದಾರೆ. ಭಾರೀ ಸಂಖ್ಯೆಯ ಟ್ರಾಕ್ಟರ್‌ಗಳು ದಿಲ್ಲಿಯೆಡೆಗೆ ಸಾಗುತ್ತಿವೆ. ರೈತರ ಪ್ರತಿಭಟನೆಯ ಕಾವು ವಿದೇಶಕ್ಕೂ ಹರಡಿದೆ. ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಬ್ರಿಟನ್ ಪ್ರಧಾನಿ, ಅದರಿಂದ ಹಿಂದೆ ಸರಿದರು. ಇದು ಸರಕಾರಕ್ಕೆ ತೀವ್ರ ಮುಜುಗರವುಂಟು ಮಾಡಿದೆ. ಈವರೆಗೆ ಹಠಮಾರಿ ಧೋರಣೆ ತೋರಿದ್ದ ಸರಕಾರಕ್ಕೆ ಹಿಂದೆ ಸರಿಯುವುದಕ್ಕೆ ಪ್ರತಿಷ್ಠೆ ಬಿಡುತ್ತಿಲ್ಲ ಎನ್ನುವುದಕ್ಕಿಂತ, ಕಾರ್ಪೊರೇಟ್ ಶಕ್ತಿಗಳ ಒತ್ತಡ ಬಿಡುತ್ತಿಲ್ಲ. ಆದರೆ ಜನವರಿ 26 ಹತ್ತಿರವಾಗುತ್ತಿರುವುದರಿಂದ ಸರಕಾರದೊಳಗೆ ನಡುಕ ಹುಟ್ಟಿದೆ. ಬೀಸುವ ದೊಣ್ಣೆಯಿಂದ ಒಮ್ಮೆ ಪಾರಾದರೂ ಸಾಕು ಎನ್ನುವಂತೆ ಅದು ಸುಪ್ರೀಂಕೋರ್ಟ್ ಮೂಲಕ ರೈತರನ್ನು ಗೊಂದಲಕ್ಕೀಡು ಮಾಡಲು ಮುಂದಾಗಿದೆ. ಪರಿಣಾಮವಾಗಿ, ಏಕಾಏಕಿ ಜನಚಳವಳಿಯ ಕುರಿತಂತೆ ಸುಪ್ರೀಂಕೋರ್ಟ್‌ಗೆ ಕಾಳಜಿ ಹುಟ್ಟಿದೆ. 'ಕಾನೂನು ಜಾರಿ ತಡೆಹಿಡಿಯಿರಿ, ಇಲ್ಲದಿದ್ದರೆ ನಾವೇ ತಡೆ ಹಿಡಿಯುತ್ತೇವೆ' ಎಂದು ಎಚ್ಚರಿಸಿದ್ದ ಸುಪ್ರೀಂಕೋರ್ಟ್, ಹೀಗೆ ಎಚ್ಚರಿಕೆ ನೀಡಿದ ಮರುದಿನವೇ, ಕಾಯ್ದೆ ಜಾರಿಗೆ ತಡೆಯನ್ನು ವಿಧಿಸಿದೆ. ಜೊತೆಗೆ ಅತ್ಯಾಸಕ್ತಿಯಿಂದ ಮಾತುಕತೆಗಾಗಿ ಸಮಿತಿಯನ್ನೂ ರಚಿಸಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಎಷ್ಟರಮಟ್ಟಿಗೆ ನಂಬಬಹುದು ಎನ್ನುವುದು ಇದೀಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ತೀರ್ಪನ್ನು ರೈತರು ಸ್ವಾಗತಿಸಿದರೂ ಪ್ರತಿಭಟನೆಯನ್ನು ಕೈ ಬಿಡದೇ ಇರಲು ತೀರ್ಮಾನಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಒಂದು ಜನಪರ ತೀರ್ಪನ್ನೇ ದೇಶದ ಜನರು ಅನುಮಾನದಿಂದ ನೋಡುತ್ತಿದ್ದಾರೆ ಎನ್ನುವುದೇ ನಮ್ಮ ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದನ್ನು ಹೇಳುತ್ತದೆ. ಈ ಹಿಂದೆ ವಿದ್ಯಾರ್ಥಿಗಳು, ಮಹಿಳೆಯರು ಜೊತೆಗೂಡಿ ದೇಶಾದ್ಯಂತ ಸಿಎಎ ಕಾಯ್ದೆಯ ವಿರುದ್ಧ ಪ್ರತಿಭಟಿಸಿದಾಗ, ನೂರಾರು ಯುವಕರು ಪ್ರಾಣ ತೆತ್ತಾಗ ಈ ಸುಪ್ರೀಂಕೋರ್ಟ್ ವೌನವಾಗಿ ವೀಕ್ಷಿಸಿತ್ತು. ಸಿಎಎ ಕಾನೂನು ಈ ದೇಶದ ಮೇಲೆ ಬೀರುವ ಪರಿಣಾಮ ಗೊತ್ತಿದ್ದೂ ಆ ಕುರಿತಂತೆ ವೌನ ತಾಳಿದ ಸುಪ್ರೀಂಕೋರ್ಟ್ ಪರೋಕ್ಷವಾಗಿ ಸರಕಾರದ ಜೊತೆಗೇ ನಿಂತುಕೊಂಡಿತ್ತು. ಕಾಶ್ಮೀರದಲ್ಲಿ ನಡೆದ ಸಂವಿಧಾನ ಉಲ್ಲಂಘಟನೆಯ ವಿರುದ್ಧ ಹಲವರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರಾದರೂ ಸುಪ್ರೀಂಕೋರ್ಟ್ ಈವರೆಗೆ ತುಟಿ ಪಿಟಿಕ್ ಎಂದಿಲ್ಲ. ಲವ್ ಜಿಹಾದ್, ಗೋಹತ್ಯೆ ಮೊದಲಾದ ಸಂವಿಧಾನ ವಿರೋಧಿ ಕಾನೂನುಗಳನ್ನು ರಾಜ್ಯಗಳು ಒಂದಾದ ಮೇಲೆ ಒಂದರಂತೆ ಜಾರಿಗೊಳಿಸುತ್ತಿರುವಾಗಲೂ ನ್ಯಾಯವ್ಯವಸ್ಥೆಗೆ ಏನೂ ಬಾಧಿಸಿಲ್ಲ.

ಹೀಗಿರುವಾಗ, ನರೇಂದ್ರ ಮೋದಿ ಸರಕಾರದ ನೀತಿಯ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಸದ್ಯದ ದಿನಗಳಲ್ಲಿ ನಂಬುವುದು ಕಷ್ಟ. ಸದ್ಯಕ್ಕೆ ಪ್ರತಿಭಟನೆ ಸರಕಾರದ ಕೈ ಮೀರುತ್ತಿದೆ. ನುಂಗಲೂ ಆಗದ, ಉಗುಳಲು ಆಗದ ಸ್ಥಿತಿಯಲ್ಲಿದ್ದಾರೆ ಪ್ರಧಾನಿ. ಇಂತಹ ಹೊತ್ತಿನಲ್ಲಿ ಈ ಇರಿಸುಮುರಿಸಿನಿಂದ ಪ್ರಧಾನಿಯನ್ನು ತಾತ್ಕಾಲಿಕವಾಗಿ ಉಳಿಸುವ ಭಾಗವಾಗಿಯೇ ಸುಪ್ರೀಂಕೋರ್ಟ್‌ನಿಂದ ತೀರ್ಪು ಹೊರ ಬಿದ್ದಿದೆ ಎಂಬ ಆರೋಪ ರೈತರಿಂದಲೇ ಕೇಳಿ ಬರುತ್ತಿದೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಹುನ್ನಾರದೊಂದಿಗೆ ತೀರ್ಪು ಹೊರಬಿದ್ದಿದೆ ಎಂದು ಬಹುತೇಕ ರೈತರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ, ಸುಪ್ರೀಂಕೋರ್ಟ್ ಮಾತುಕತೆಗೆ ತನ್ನದೇ ಒಂದು ತಂಡವನ್ನೂ ರಚಿಸಿದೆ. ವಿಪರ್ಯಾಸವೆಂದರೆ, ಈ ತಂಡದಲ್ಲಿರುವ ಬಹುತೇಕರು ರೈತ ವಿರೋಧಿ ಕಾನೂನನ್ನು ನೇರವಾಗಿ ಬೆಂಬಲಿಸಿದವರು. ಸರಕಾರದ ಜೊತೆಗಿನ ಮಾತುಕತೆಯ ಬಗ್ಗೆ ರೈತರು ಸಂಪೂರ್ಣ ನಂಬಿಕೆ ಕಳೆದುಕೊಂಡ ಪರಿಣಾಮವಾಗಿ, ಇದೀಗ ಇನ್ನೊಂದು ವೇಷದಲ್ಲಿ ಸರಕಾರ ರೈತರ ಮುಂದೆ ಮಾತುಕತೆಯ ನಟನೆಯನ್ನು ಮಾಡಲಿದೆ. ಜೊತೆಗೆ, ರೈತರ ಟ್ರಾಕ್ಟರ್ ರ್ಯಾಲಿಯ ವಿರುದ್ಧ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಹತ್ತಿದೆ.

ಅಂದರೆ, ರೈತರ ಪರವಾಗಿರುವ ತೀರ್ಪನ್ನು ನೀಡಿದಂತೆ ನಟಿಸಿ, ಟ್ರಾಕ್ಟರ್ ರ್ಯಾಲಿಯನ್ನು ತಡೆಯುವುದು ಸುಪ್ರೀಂಕೋರ್ಟ್‌ನ ಉದ್ದೇಶವಾಗಿದೆ. ಈಗಾಗಲೇ ಸುಪ್ರೀಂಕೋರ್ಟ್‌ನ ತಂಡದ ಜೊತೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ರೈತರು ಸ್ಪಷ್ಟವಾಗಿ ಹೇಳಿದ್ದಾರೆ. ಜೊತೆಗೆ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ. ರೈತರ ಈ ನಿರ್ಧಾರ ಸರಕಾರವನ್ನು ಇನ್ನಷ್ಟು ಇರಿಸುಮುರಿಸಿಗೆ ತಳ್ಳಿದೆ. ಒಟ್ಟಿನಲ್ಲಿ, ಗಣರಾಜ್ಯೋತ್ಸವದ ದಿನ ಸರಕಾರ ಮತ್ತು ರೈತರ ನಡುವಿನ ಜಗ್ಗಾಟ ಸಂಘರ್ಷದ ರೂಪವನ್ನು ಪಡೆದರೆ ಅಚ್ಚರಿಯೇನೂ ಇಲ್ಲ. ಪ್ರತಿಭಟನೆಯ ಗಂಭೀರತೆಯನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರೇ ಸರಕಾರಕ್ಕೆ ಮನವರಿಕೆ ಮಾಡಿರುವಾಗ ಕಾನೂನು ಹಿಂದಕ್ಕೆ ಪಡೆಯಲು ಇರುವ ಸಮಸ್ಯೆಯಾದರೂ ಏನು? ಸರಕಾರದ ಕಾನೂನಿನಿಂದ ರೈತರಿಗೆ ಒಳಿತಾಗುತ್ತದೆಯಾದರೆ ಅವರೇಕೆ ಬೀದಿಗಿಳಿದು ಮಳೆ, ಚಳಿಗೂ ಅಂಜದೆ ಹಗಲಿರುಳು ಪ್ರತಿಭಟನೆ ನಡೆಸಬೇಕು? ರೈತರಿಗೆ ಬೇಡವಾದ ಕಾನೂನನ್ನು ಜಾರಿಗೊಳಿಸಬೇಕು ಎನ್ನುವ ಹಠ ಸರಕಾರಕ್ಕಾದರೂ ಯಾಕೆ? ಈಗಾಗಲೇ ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ಒಂದೊಂದೇ ನೀತಿಗಳನ್ನು ಜಾರಿಗೊಳಿಸುತ್ತಾ ಭಾರತವನ್ನು ಭಾಗಶಃ ಮಾರಾಟ ಮಾಡಿ ಆಗಿದೆ. ಇದೀಗ ದೇಶದ ರೈತರನ್ನೂ ಕಾರ್ಪೊರೇಟ್ ಶಕ್ತಿಗಳಿಗೆ ಬಲಿಕೊಡಲು ಮುಂದಾಗಿದೆ. ಅದೂ ಪೂರ್ಣವಾದರೆ ದೇಶ ಸಂಪೂರ್ಣ ಮತ್ತೊಮ್ಮೆ 'ನವ ಈಸ್ಟ್ ಇಂಡಿಯಾ ಕಂಪೆನಿ'ಯ ವಶವಾಗಿ ಬಿಡುತ್ತದೆ. ಆದುದರಿಂದಲೇ ರೈತರಿಗೆ ಮಾತ್ರವಲ್ಲ, ದೇಶದ ಸರ್ವರಿಗೂ ಇದು ಮಾಡು-ಮಡಿ ಹೋರಾಟವಾಗಿದೆ. ಜಾರಿಗೊಳಿಸಿದ ಕಾನೂನನ್ನು ಏಕಮುಖವಾಗಿ ಹಿಂದೆಗೆದುಕೊಳ್ಳುವುದು ಹೊರತು ಪಡಿಸಿದ ಪರಿಹಾರ ಸರಕಾರದ ಬಳಿಯಿಲ್ಲ. ರೈತರ ಮಾನ, ಪ್ರಾಣ ಸರಕಾರದ ಕೈಯಲ್ಲಿವೆೆ. ತುಸು ಎಚ್ಚರ ತಪ್ಪಿದರೂ ಇನ್ನೊಂದು ಜಲಿಯನ್ ವಾಲಾಬಾಗ್ ದುರಂತವಾಗಿ ಪರಿವರ್ತನೆಗೊಳ್ಳಬಹುದಾದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಕೇಂದ್ರದಲ್ಲಿರುವುದು 'ಬ್ರಿಟಿಷ್ ಸರಕಾರವಲ್ಲ' ಎನ್ನುವುದನ್ನು ಪ್ರಧಾನಿ ಮೋದಿಯವರು ದೇಶಕ್ಕೆ ಮನವರಿಕೆ ಮಾಡಿಕೊಡುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News