ಅಮೆರಿಕ ಸಂಸತ್ ದಾಳಿಗೆ ಮುನ್ನ ಮಾಡಿದ ಭಾಷಣವನ್ನು ಸಮರ್ಥಿಸಿಕೊಂಡ ಟ್ರಂಪ್

Update: 2021-01-13 03:56 GMT

ಅಲಾಮೊ (ಅಮೆರಿಕ): ಅಮೆರಿಕದ ಸಂಸತ್ ಮೇಲೆ ಕಳೆದ ವಾರ ನಡೆದ ದಾಳಿಗೆ ತಾವು ಹೊಣೆಗಾರನಲ್ಲ ಎಂದು ಸ್ಪಷ್ಟಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಗೆ ಮುನ್ನ ತಾವು ಮಾಡಿದ ಭಾಷಣವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗುವ ಭೀತಿಯ ನಡುವೆಯೇ ದೇಶಾದ್ಯಂತ "ಆಕ್ರೋಶ ಭುಗಿಲೇಳಲಿದೆ" ಎಂದು ಎಚ್ಚರಿಸಿದ್ದಾರೆ.

ಅಮೆರಿಕ- ಮೆಕ್ಸಿಕೊ ಗಡಿಯ ಅಲಾಮೊ, ಟೆಕ್ಸಾಸ್ ಗೋಡೆ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಶಾಂತಿಯಿಂದ ಇರುವಂತೆ ಬೆಂಬಲಿಗರಿಗೆ ಟ್ರಂಪ್ ಕರೆ ನೀಡಿದ್ದರೂ, ಅವರ ಒಟ್ಟಾರೆ ಸಂದೇಶ ದಾಳಿಯ ಹೊಣೆಗಾರಿಕೆಯನ್ನು ತಾವು ಹೊರುವುದಿಲ್ಲ ಎಂದು ಸ್ಪಷ್ಟಪಡಿಸುವುದಾಗಿದೆ.

ಜ. 6ರಂದು ಟ್ರಂಪ್ ಮಾಡಿದ ಭಾಷಣಕ್ಕಾಗಿ ಅಮೆರಿಕದ ಪ್ರಜಾಪ್ರತಿನಿಧಿ ಸಭೆ ಬುಧವಾರ ಎರಡನೇ ಬಾರಿಗೆ ಟ್ರಂಪ್‌ಗೆ ವಾಗ್ದಂಡನೆ ವಿಧಿಸಲು ಸಜ್ಜಾಗಿದೆ. ತಾವೇ ನವೆಂಬರ್ ಚುನಾವಣೆಯ ನಿಜವಾದ ವಿಜೇತ ಎಂದು ಹೇಳಿಕೊಳ್ಳುವ ಜತೆಗೆ ಬೆಂಬಲಿಗರು ಸಂಸತ್ತಿನತ್ತ ಜಾಥಾ ನಡೆಸಿ ಎಂದು ಟ್ರಂಪ್ ಈ ಭಾಷಣದಲ್ಲಿ ಕರೆ ನೀಡಿದ್ದರು.

ಕ್ಯಾಪಿಟೋಲ್ ಮೇಲೆ ದಾಳಿ ನಡೆಸಿದ ಟ್ರಂಪ್ ಬೆಂಬಲಿಗರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದು ದಾಂಧಲೆ ನಡೆಸಿದ್ದರು. ಇದರಿಂದಾಗಿ ಜೋ ಬೈಡನ್ ಅವರ ಗೆಲುವು ದೃಢೀಕರಿಸುವ ಸಮಾರಂಭವನ್ನು ತಾತ್ಕಾಲಿಕವಾಗಿ ಸಂಸತ್ ಮುಂದೂಡಬೇಕಾಯಿತು.

ಟೆಕ್ಸಾಸ್‌ಗೆ ಹೋಗುವ ಮಾರ್ಗಮಧ್ಯದಲ್ಲಿ, "ನನ್ನ ಭಾಷಣ ಸಮರ್ಪಕವಾಗಿತ್ತು ಎನ್ನುವುದು ಪ್ರತಿಯೊಬ್ಬರ ಅನಿಸಿಕೆ" ಎಂದು ಹೇಳಿಕೊಂಡರು. ತಮ್ಮ ವಿರುದ್ಧದ ವಾಗ್ದಂಡನೆ ಪ್ರಸ್ತಾವವನ್ನು ರಾಜಕೀಯ ಪಿತೂರಿಯ ಮುಂದುವರಿದ ಭಾಗ ಎಂದು ಬಣ್ಣಿಸಿದರು. ಹಿಂಸಾಮಾರ್ಗವನ್ನು ಅನುಸರಿಸದಂತೆ ಅವರು ಉದ್ರಿಕ್ತ ಬೆಂಬಲಿಗರಿಗೆ ಸಲಹೆ ಮಾಡಿದರು. "ಇಂಥ ಆಕ್ರೋಶವನ್ನು ನಾನು ಎಂದೂ ಕಂಡಿಲ್ಲ" ಎಂದು ಟ್ರಂಪ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News