ಆನ್ ಲೈನ್ ಶಿಕ್ಷಣದಲ್ಲಿ ಕ್ರಾಂತಿಕಾರಿ ಕೆಲಸ: ಖಾನ್ ಅಕಾಡೆಮಿಗೆ 5 ಮಿಲಿಯನ್ ಡಾಲರ್ ದೇಣಿಗೆ ನೀಡಿದ ಇಲೋನ್ ಮಸ್ಕ್

Update: 2021-01-13 06:56 GMT

ಹೊಸದಿಲ್ಲಿ,ಜ.13: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಂಸ್ಥೆಯ ಸಹ ಸ್ಥಾಪಕ ಇಲೋನ್ ಮಸ್ಕ್ ಅವರು ತಮ್ಮ ಮಸ್ಕ್ ಫೌಂಡೇಶನ್ ಮೂಲಕ ಆನ್ಲೈನ್ ಶಿಕ್ಷಣ ಜಗತ್ತಿನಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಅಮೆರಿಕಾ ಮೂಲದ ಖಾನ್ ಅಕಾಡೆಮಿಗೆ 5 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಖಾನ್ ಅಕಾಡೆಮಿ  ಅಮೆರಿಕಾದ ನಾನ್-ಪ್ರಾಫಿಟ್ ಶೈಕ್ಷಣಿಕ ಸಂಸ್ಥೆಯಾಗಿದೆ.

ಮಸ್ಕ್ ಫೌಂಡೇಶನ್‍ನ ಕೊಡುಗೆಗೆ  ಖಾನ್ ಅಕಾಡೆಮಿಯ ಮುಖ್ಯಸ್ಥ ಸಲ್ಮಾನ್ ಖಾನ್ ಅವರು ಧನ್ಯವಾದ ಸಲ್ಲಿಸುವ ವೀಡಿಯೋ ಟ್ವೀಟ್ ಮಾಡಿದ್ದಾರೆ.

"ತಮ್ಮ ಉದಾರ ದೇಣಿಗೆ ಹಾಗೂ ಖಾನ್ ಅಕಾಡೆಮಿಗೆ ಬೆಂಬಲಕ್ಕಾಗಿ ಇಲೋನ್ ಮಸ್ಕ್ ಹಾಗೂ ಮಸ್ಕ್ ಫೌಂಡೇಶನ್‍ನಲ್ಲಿರುವ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ಅವರು ಇತ್ತೀಚೆಗಷ್ಟೇ ಖಾನ್ ಅಕಾಡೆಮಿಗೆ 5 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ," ಎಂದು ಖಾನ್ ತಮ್ಮ ಥ್ಯಾಂಕ್ಯೂ ವೀಡಿಯೋದಲ್ಲಿ ಹೇಳಿದ್ದಾರೆ.

ತಮ್ಮ ಸಂಸ್ಥೆಗೆ ಈ ದೇಣಿಗೆ ಸಹಾಯದಿಂದ ತಮ್ಮ ಕಂಟೆಂಟ್, ಸಾಫ್ಟ್ ವೇರ್ ಇನ್ನಷ್ಟು ಉತ್ತಮಗೊಳಿಸಲು ಹಾಗೂ  ಜಗತ್ತಿನಾದ್ಯಂತ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಖಾನ್ ಅಕಾಡೆಮಿಯಲ್ಲಿ 120 ಮಿಲಿಯನ್ ನೋಂದಣಿಗೊಂಡ ಸದಸ್ಯರಿದ್ದು ಪ್ರತಿ ತಿಂಗಳು 20ರಿಂದ 30 ಮಿಲಿಯನ್ ಬಳಕೆದಾರರಿದ್ದಾರೆ ಎಂದು ಖಾನ್ ತಮ್ಮ ಯುಟ್ಯೂಬ್ ವೀಡಿಯೋದಲ್ಲಿ ಹೇಳಿದ್ದಾರೆ.

ಜ್ಞಾನವರ್ಧನೆಗಾಗಿ ಉಚಿತ ಎಜುಕೇಶನಲ್ ಟೂಲ್‍ಗಳನ್ನು ಒದಗಿಸುವ ಮೂಲಕ ಖಾನ್ ಅಕಾಡೆಮಿ ಸಾವಿರಾರು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದನ್ನು 2008ರಲ್ಲಿ ʼಸಲ್ ಖಾನ್ʼ ಎಂದೂ ಕರೆಯಲ್ಪಡುವ ಸಲ್ಮಾನ್ ಖಾನ್ ಅಮೆರಿಕಾದಲ್ಲಿ ಸ್ಥಾಪಿಸಿದ್ದರು. ಪಠ್ಯಗಳಿಗೆ ಸಂಬಂಧಿಸಿದಂತೆ ಕಿರು ವೀಡಿಯೋಗಳನ್ನು ಅಕಾಡೆಮಿ ಪೋಸ್ಟ್ ಮಾಡುತ್ತಿದೆ. ಅದರ ವೆಬ್ ಸೈಟ್ ಮುಖಾಂತರವೂ ವಿದ್ಯಾರ್ಥಿಗಳಿಗೆ ಸಾಕಷ್ಟು ಪಠ್ಯ ಸಂಬಂಧಿ ನೋಟ್ಸ್ ಮತ್ತಿತರ ಉಪಯುಕ್ತ ಮಾಹಿತಿ ಲಭ್ಯವಿದೆ.

ಇಲೋನ್ ಮಸ್ಕ್ ಅವರು ತಮ್ಮ ಮಸ್ಕ್ ಫೌಂಡೇಶನ್ ಅನ್ನು 2002ರಲ್ಲಿ ಆರಂಭಿಸಿದ್ದು ಅದು ವಿವಿಧ ಉದ್ದೇಶಗಳಿಗೆ ಸಹಾಯ ಮಾಡುತ್ತಿದೆ. ಮಿಚಿಗನ್‍ನ ಫ್ಲಿಂಟ್‍ನಲ್ಲಿ ನೀರು ಶುದ್ಧೀಕರಣಕ್ಕಾಗಿ 4.8 ಲಕ್ಷ ಡಾಲರ್ ದೇಣಿಗೆ ನೀಡಿರುವ ಫೌಂಡೇಶನ್, ಅಲ್ಲಿನ ಶಾಲೆಗಳಿಗೆ ಲ್ಯಾಪ್ ಟಾಪ್, ಕಂಪ್ಯೂಟರ್ ಪೂರೈಕೆಗೆ 4.24 ಲಕ್ಷ ಡಾಲರ್ ದೇಣಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News