ಅಕ್ರಮದ ಗೂಡಾಗಿರುವ ವಕ್ಫ್ ಬೋರ್ಡ್: ಮುಹಮ್ಮದ್ ಇನಾಯತ್‍ಉಲ್ಲಾ

Update: 2021-01-13 18:48 GMT

ಬೆಂಗಳೂರು, ಜ.13: ಪ್ರಾಮಾಣಿಕವಾಗಿ ಹಾಗೂ ವಕ್ಫ್ ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸುವವರಿಗೆ ರಾಜ್ಯ ವಕ್ಫ್ ಬೋರ್ಡ್‍ನಲ್ಲಿ ಮಾನ್ಯತೆ ಇಲ್ಲದಂತಾಗಿದೆ. ರಾಜ್ಯ ಹೈಕೋರ್ಟ್‍ನ ಮಧ್ಯಂತರ ಆದೇಶಗಳಿಗೂ ಇಲ್ಲಿ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಬೆಂಗಳೂರಿನ ಹಝ್ರತ್ ತವಕ್ಕಲ್ ಮಸ್ತಾನ್ ಶಾ ದರ್ಗಾದ ಆಡಳಿತ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಇನಾಯತ್‍ಉಲ್ಲಾ ಕಿಡಿಗಾರಿದ್ದಾರೆ.

ಬುಧವಾರ ನಗರದಲ್ಲಿರುವ ಹಝ್ರತ್ ತವಕ್ಕಲ್ ಮಸ್ತಾನ್ ಶಾ ದರ್ಗಾದ ಆಡಳಿತ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ 11 ಮಂದಿ ಸದಸ್ಯರನ್ನು ಒಳಗೊಂಡ ಆಡಳಿತ ಸಮಿತಿಯ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 2016ರ ಜುಲೈನಲ್ಲಿ ಆಡಳಿತ ಸಮಿತಿ ಆಯ್ಕೆಯಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನು ನೇಮಿಸುವಂತೆ ಕೋರಿ ವಕ್ಫ್ ಬೋರ್ಡ್‍ಗೆ ಮನವಿ ಸಲ್ಲಿಸಲಾಗಿತ್ತು ಎಂದರು.

ಈ ವೇಳೆ ಮಾದರಿ ಬೈಲಾ ರಚನೆಗೆ ಸಂಬಂಧಿಸಿದಂತೆ 11 ಮಂದಿ ಸದಸ್ಯರನ್ನು ಒಳಗೊಂಡಿದ್ದ ಆಡಳಿತ ಸಮಿತಿಯನ್ನು 5 ಸದಸ್ಯರಿಗೆ ಪರಿಷ್ಕರಿಸಿ ವಕ್ಫ್ ಬೋರ್ಡ್ ಆದೇಶ ಮಾಡಿತ್ತು. ಅದರಂತೆ, 2017ರ ಫೆಬ್ರವರಿಯಲ್ಲಿ ನಮ್ಮ ಸಮಿತಿ ರಚಿಸಿದ ಹೊಸ ಮಾದರಿ ಬೈಲಾವನ್ನು ವಕ್ಫ್ ಬೋರ್ಡ್‍ಗೆ ಸಲ್ಲಿಸಿ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಆದರೆ, ಕೆಲವರು ಈ ಬೈಲಾವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‍ನಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದಾರೆ ಎಂದು ಇನಾಯತ್‍ಉಲ್ಲಾ ಹೇಳಿದರು.

ಮಾದರಿ ಬೈಲಾದಲ್ಲಿ ನಾವು ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಬಾಡಿಗೆ ಹಾಗೂ ಭೋಗ್ಯದ ನಿಯಮಗಳನ್ನು ಅಳವಡಿಸಿದೆವು, ಅಲ್ಲದೆ, ದರ್ಗಾದಲ್ಲಿ ಮುಝಾವರ್ ಗಳನ್ನು ನೇಮಕ ಮಾಡುವ ಅಧಿಕಾರವನ್ನು ಸಮಿತಿಗೆ ನೀಡುವಂತೆ ಸೇರಿಸಲಾಗಿತ್ತು. ತಡೆಯಾಜ್ಞೆ ನೀಡಿದ ಹೈಕೋರ್ಟ್, ಈ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಹಳೆಯ ಸಮಿತಿಯೆ ಮುಂದುವರೆಯುವಂತೆ ಮಧ್ಯಂತರ ಆದೇಶವನ್ನು ನೀಡಿದೆ. ಅದರಂತೆ, ಸಮಿತಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯೂಸುಫ್ ನಿಧನರಾದ ನಂತರ ಈಗಿರುವ ವಕ್ಫ್ ಬೋರ್ಡ್ ಸದಸ್ಯರ ಪೈಕಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ದರ್ಗಾ ಸಮಿತಿಗೆ ಆಡಳಿತಾಧಿಕಾರಿ ನೇಮಕ ಮಾಡಲು ವಕ್ಫ್ ಬೋರ್ಡ್ ಸಭೆಯಲ್ಲಿ ಮೂರು, ನಾಲ್ಕು ಬಾರಿ ನಿರ್ಣಯ ಅಂಗೀಕರಿಸಿದ್ದಾರೆ ಎಂದು ಅವರು ಕಿಡಿಗಾರಿದರು.

ನಾವು ಚುನಾವಣೆಗೆ ಅಧಿಕಾರಿಯನ್ನು ನೇಮಿಸಿ ಎಂದು ಮನವಿ ಮಾಡಿದರೆ, ಅದಕ್ಕೆ ಸ್ಪಂದಿಸುವುದಿಲ್ಲ. ನಮ್ಮ ಸಮಿತಿಯ ವಿರುದ್ಧ ಯಾವುದೇ ಆರೋಪಗಳಿಲ್ಲ, ಒಂದು ವೇಳೆ ಆರೋಪಗಳಿದ್ದರೆ ನೋಟಿಸ್ ನೀಡಬೇಕಿತ್ತು. ಅದನ್ನು ಮಾಡಿಲ್ಲ. ಈಗ ಏಕಾಏಕಿ ಆಡಳಿತಾಧಿಕಾರಿ ನೇಮಕ ಮಾಡಲು ನಿರ್ಣಯಗಳನ್ನು ಅಂಗೀಕರಿಸುತ್ತಿರುವುದು ನೋಡಿದರೆ ವಕ್ಫ್ ಬೋರ್ಡ್ ಅಕ್ರಮದ ಗೂಡಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಇನಾಯತ್‍ಉಲ್ಲಾ ದೂರಿದರು.

ಹೈಕೋರ್ಟ್‍ನ ಮಧ್ಯಂತರ ಆದೇಶವಿದ್ದರೂ ದರ್ಗಾ ಸಮಿತಿಗೆ ಆಡಳಿತಾಧಿಕಾರಿ ನೇಮಕ ಮಾಡಲು ನಿರ್ಣಯ ಕೈಗೊಳ್ಳುತ್ತಿರುವ ವಕ್ಫ್ ಬೋರ್ಡ್ ಸದಸ್ಯರಿಗೆ ಕಾನೂನಿನ ಅರಿವಿದೆಯೇ? ಕನಿಷ್ಠ ಪಕ್ಷ ನ್ಯಾಯಾಲಯಕ್ಕಾದರೂ ಗೌರವ ನೀಡುವುದು ಬೇಡವೇ? ಈ ಹಿನ್ನೆಲೆಯಲ್ಲಿ ನಾವು ವಕ್ಫ್ ಬೋರ್ಡ್ ನಿರ್ಣಯಗಳನ್ನು ನ್ಯಾಯಾಲಯದ ಮುಂದಿರಿಸಿ ತಡೆಯಾಜ್ಞೆ ತಂದಿದ್ದೇವೆ ಎಂದು ಅವರು ಹೇಳಿದರು.

ವಕ್ಫ್ ಬೋರ್ಡ್‍ಗೆ ಕಾನೂನು, ನ್ಯಾಯಾಲಯದ ಮೇಲೆ ಗೌರವ ಇದ್ದರೆ ಈ ಕೂಡಲೆ ದರ್ಗಾ ಸಮಿತಿಗೆ ಚುನಾವಣೆ ನಡೆಸಲು ಮುಂದಾಗಲಿ ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಕೆ.ನಿಸಾರ್ ಅಹ್ಮದ್, ಮಾಜಿ ಕಾರ್ಯದರ್ಶಿ ಮುಹಮ್ಮದ್ ಫಾರೂಕ್, ಅಸ್ಲಂ ಪಾಷ, ಬಿ.ಇನಾಯತ್‍ಉಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News