ಕೃಷಿ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್‌ ರಚಿಸಿದ್ದ ಸಮಿತಿಯಿಂದ ಹೊರ ನಡೆದ ಭೂಪಿಂದರ್‌ ಸಿಂಗ್‌

Update: 2021-01-14 18:30 GMT

ಹೊಸದಿಲ್ಲಿ,ಜ.14: ಭಾರತ ಕಿಸಾನ ಯೂನಿಯನ್ (ಬಿಕೆಯು)ನ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಅವರು ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ರಚಿಸಿರುವ ಸಮಿತಿಯಿಂದ ಹೊರಬಂದಿದ್ದಾರೆ. ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳಲು ತಾನು ಬಯಸಿಲ್ಲ ಎಂದು ಅವರು ಹೇಳಿದ್ದಾರೆ. ಸರಕಾರ ಮತ್ತು ರೈತರ ನಡುವೆ ಮುಂದಿನ ಸುತ್ತುಗಳ ಮಾತುಕತೆಗಳ ಮುನ್ನಾದಿನವಾದ ಗುರುವಾರ ಮಾನ್ ಅವರ ಈ ನಿರ್ಧಾರ ಹೊರಬಿದ್ದಿದೆ.

ಸ್ವತಃ ಓರ್ವ ರೈತನಾಗಿ ಮತ್ತು ಯೂನಿಯನ್ ನಾಯಕನಾಗಿ ರೈತ ಒಕ್ಕೂಟಗಳು ಮತ್ತು ಸಾರ್ವಜನಿಕರಲ್ಲಿಯ ಭಾವನೆಗಳು ಮತ್ತು ಆತಂಕಗಳ ಹಿನ್ನೆಲೆಯಲ್ಲಿ ಪಂಜಾಬ ಮತ್ತು ದೇಶದ ರೈತರ ಹಿತಾಸಕ್ತಿಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದಿರಲು ನನ್ನ ಮುಂದಿರಿಸಲಾದ ಅಥವಾ ನೀಡಲಾದ ಯಾವುದೇ ಸ್ಥಾನವನ್ನು ತ್ಯಜಿಸಲು ನಾನು ಸಿದ್ಧನಿದ್ದೇನೆ. ನಾನು ಸುಪ್ರೀಂ ಕೋರ್ಟ್ ಸಮಿತಿಯಿಂದ ದೂರ ಸರಿಯುತ್ತಿದ್ದೇನೆ. ನಾನು ಯಾವಾಗಲೂ ರೈತರು ಮತ್ತು ಪಂಜಾಬ ಜೊತೆಯಲ್ಲಿರುತ್ತೇನೆ ’ ಎಂದು ಮಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೈತರು ಮತ್ತು ಸರಕಾರದೊಂದಿಗೆ ಮಾತುಕತೆಗಳನ್ನು ನಡೆಸಲು ಮತ್ತು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 50 ದಿನಗಳಿಂದಲೂ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪರಿಹಾರವನ್ನು ಕಂಡುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ರಚಿಸಿದ್ದ ಸಮಿತಿಯ ನಾಲ್ವರು ಸದಸ್ಯರಲ್ಲಿ ಮಾನ್ ಒಬ್ಬರಾಗಿದ್ದರು.

ಸಮಿತಿಯನ್ನು ಈಗಾಗಲೇ ತಿರಸ್ಕರಿಸಿರುವ ರೈತರು,ಅದರ ಸದಸ್ಯರೆಲ್ಲ ನೂತನ ಕೃಷಿ ಕಾನೂನುಗಳ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ಸಮಿತಿ ರಚನೆಯ ಹಿಂದೆ ಸರಕಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಮಾನ್ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ನೂತನ ಕೃಷಿ ಕಾನೂನುಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದ ರೈತರ ಗುಂಪಿನ ಸದಸ್ಯರಾಗಿದ್ದರು.

ಬಿಕೆಯು ತನ್ನನ್ನು ವಜಾಗೊಳಿಸಿರುವುದರಿಂದ ಮಾನ್ ರಾಜೀನಾಮೆಯನ್ನು ನೀಡಿದ್ದಾರೆ. ಇದು ಪ್ರತಿಭಟನಾನಿರತ ರೈತರಿಗೆ ದೊರಕಿರುವ ಸಣ್ಣ ಗೆಲುವಾಗಿದೆ ಎಂದು ಸಂಯುಕ್ತ ಕಿಸಾನ ಮೋರ್ಚಾದ ಸದಸ್ಯ ರಾಜಿಂದರ್ ಸಿಂಗ್ ದೀಪಸಿಂಗ್‌ವಾಲಾ ತಿಳಿಸಿದರು. ಮಾನ್ ರಾಜಕೀಯ ಲಾಭಗಳಿಕೆಗಾಗಿ ತನ್ನ ಹುದ್ದೆಯನ್ನು ಬಳಸಿದ್ದರು. ಅವರ ರಾಜೀನಾಮೆಯಿಂದ ಸುಪ್ರೀಂ ಕೋರ್ಟ್ ಸಮಿತಿಯು ಅಪಖ್ಯಾತಿಗೆ ಗುರಿಯಾಗಿದೆ ಎಂದ ಅವರು,ಸಂಪೂರ್ಣವಾಗಿ ಸರಕಾರದ ಪರವಾಗಿರುವ ಸಮಿತಿಗೆ ಯಾವುದೇ ಮಹತ್ವವನ್ನು ನೀಡಲು ರೈತರು ಬಯಸುವುದಿಲ್ಲ ಎಂದರು.

  ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕ ಹಾಗೂ ಕೃಷಿ ಆರ್ಥಿಕತಜ್ಞ ಡಾ.ಪ್ರಮೋದ ಕುಮಾರ ಜೋಶಿ,ಕೃಷಿ ಆರ್ಥಿಕತಜ್ಞ ಹಾಗೂ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ ಗುಲಾಟಿ ಮತ್ತು ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆದಿರುವ ಶೇತ್ಕರಿ ಸಂಘಟನಾದ ವರಿಷ್ಠ ಅನಿಲ ಘನ್ವತ್ ಅವರು ಸುಪ್ರೀಂ ಕೋರ್ಟ್ ನೇಮಕಗೊಳಿಸಿರುವ ಸಮಿತಿಯ ಇತರ ಮೂವರು ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News