ನನ್ನ ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತೆ: ಶಾಸಕ ಮುನಿರತ್ನ

Update: 2021-01-14 12:00 GMT

ಬೆಂಗಳೂರು, ಜ. 14: ‘ಸಚಿವ ಸ್ಥಾನ ನನ್ನ ಹಣೆಯಲ್ಲಿ ಬರೆದಿದ್ದರೆ ಸಿಗುತ್ತದೆ. ಇಲ್ಲ ಅಂದರೆ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ವಚನ ಭ್ರಷ್ಟರಲ್ಲ. ಅವರು ಮಾತು ತಪ್ಪಲ್ಲ, ಕೆಲವು ಸಂದರ್ಭಗಳಲ್ಲಿ ಹೀಗೆ ಆಗುವುದು ಸಹಜ' ಎಂದು ಸಚಿವ ಸ್ಥಾನ ವಂಚಿತ ಆರ್‍ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಎಂ ಬಿಎಸ್‍ವೈ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆ ಆಗುತ್ತದೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಸಚಿವ ಸ್ಥಾನ ಸಿಗಲಿ, ಸಿಗದೇ ಇರಲಿ. ನಾನು ಶಾಸಕನಾಗಿ ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಕಾರ್ಯಕರ್ತರನಾಗಿ ಪಕ್ಷದಲ್ಲಿ ಮುಂದುವರಿಯುವೆ' ಎಂದು ಮುನಿರತ್ನ ಸ್ಪಷ್ಟಪಡಿಸಿದರು.

ಪದೇ ಪದೇ ಸಿಎಂ ವಿರುದ್ಧ ಹೇಳಿಕೆ ನೀಡಿದರೆ ಹೈಕಮಾಂಡ್‍ಗೆ ದೂರು ನೀಡಲು ಅವರೇ ಸೂಚಿಸಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೂ ಮಾಡಬಾರದು ಎಂದ ಅವರು, ಅರುಣ್ ಸಿಂಗ್ ಅವರು ಕಾರಣಾಂತರಗಳಿಂದ ವಿಳಂಬ ಆಗಿದೆ ಎಂದು ಹೇಳಿದ್ದಾರೆ ಎಂದರು.

ಮಳೆ, ಗಾಳಿ, ಚಳಿ ಎಲ್ಲವೂ ಇರುತ್ತದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇವೆ. ಅದರಂತೆ ರಾಜಕೀಯದಲ್ಲಿಯೂ ಹೊಂದಿಕೊಂಡು ಹೋಗಬೇಕು. ನನ್ನ ಜನ ನಾನು ಸಚಿವ ಆಗುತ್ತೇನೆ ಎಂದು ಮತ ಹಾಕಿರಲಿಲ್ಲ. ಶಾಸಕನನ್ನಾಗಿ ಆಯ್ಕೆ ಮಾಡಲು ಮತ ಹಾಕಿದ್ದಾರೆ. ನಾನು ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಮುನಿರತ್ನ ಹೇಳಿದರು.

ಸಿಡಿ ತೋರಿಸಲಿ: ಹಿರಿಯ ಮುಖಂಡ ಎಚ್.ವಿಶ್ವನಾಥ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ, ಅವರು ಸಿಡಿ ಇದ್ದರೆ ತೋರಿಸಬೇಕು. ಅದು ಬಿಟ್ಟು ಸುಮ್ಮನೆ ಏನೇನೋ ಮಾತಾಡಬಾರದು. ಯಾರೂ ಯಾರ ಬಗ್ಗೆಯೂ ಆಧಾರರಹಿತ ಹೇಳಿಕೆ ನೀಡಬಾರದು ಎಂದು ಆಕ್ಷೇಪಿಸಿದರು.

ನನ್ನ ವಿರುದ್ಧ ಚುನಾವಣಾ ತಕರಾರು ಬಿಟ್ಟು ಬೇರೆ ಯಾವುದೇ ಪ್ರಕರಣ ಇಲ್ಲ. 20ನೆ ವರ್ಷದಿಂದ ಇಲ್ಲಿಯವರೆಗೂ ಆದಾಯ ತೆರಿಗೆಯಿಂದ ಒಂದೇ ಒಂದು ನೋಟಿಸ್ ಪಡೆದಿಲ್ಲ. ಅಷ್ಟು ನಿಖರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನಗೆ ಇಡಿ ಆಗಲಿ, ಸಿಬಿಐ ಆಗಲಿ ಯಾವುದೂ ಗೊತ್ತಿಲ್ಲ ಎಂದು ತಿಳಿಸಿದರು.

‘ನನ್ನ ಜೊತೆಗೆ ಬಂದವರು ಎಲ್ಲ ಕೆಲಸದ ಒತ್ತಡದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹುಬ್ಬಳ್ಳಿ-ಧಾರವಾಡ ಎಲ್ಲ ಕಡೆ ಇದ್ದಾರೆ. ಯಾರಿಗೂ ಮಾತಾಡುವುದಕ್ಕೆ ಸಮಯ ಇಲ್ಲ. ಎಲ್ಲ ಬ್ಯುಸಿ ಇದ್ದಾರೆ. ನನ್ನ ಜೊತೆ ಬಂದು ಸಚಿವರಾದವರು ಬಿಜೆಪಿ ಪಕ್ಷಕ್ಕೆ ತುಂಬಾ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ'

-ಮುನಿರತ್ನ, ಆರ್‍ಆರ್ ನಗರ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News