ಜಲ್ಲಿಕಟ್ಟು ವೀಕ್ಷಿಸಿ ತಮಿಳುನಾಡು ಇತಿಹಾಸ, ಸಂಸ್ಕೃತಿ ಶ್ಲಾಘಿಸಿದ ರಾಹುಲ್ ಗಾಂಧಿ

Update: 2021-01-14 12:20 GMT

ಮದುರೈ:  ತಮಿಳುನಾಡು ವಿಧಾನಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಾಗ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇದೇ ಸಂದರ್ಭದಲ್ಲಿ ತಮಿಳುನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟನ್ನು ವೀಕ್ಷಣೆ ಮಾಡಿದ್ದಾರೆ.

ಮಧುರೈನಲ್ಲಿ ಜಲ್ಲಿಕಟ್ಟನ್ನು ವೀಕ್ಷಿಸಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ಮುಖಂಡರಾದ ಕೆಸಿ ವೇಣುಗೋಪಾಲ್, ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಅಳಗಿರಿ, ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿಯವರಲ್ಲದೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಸಾಥ್ ನೀಡಿದರು.

ಜಲ್ಲಿಕಟ್ಟು ವೀಕ್ಷಣೆಗೆ ತಮ್ಮನ್ನು ಆಹ್ವಾನಿಸಿರುವುದಕ್ಕೆ ಧನ್ಯವಾದ ತಿಳಿಸಿದ ರಾಹುಲ್, ಜಲ್ಲಿಕಟ್ಟನ್ನು ಸಂಘಟಿತ ಹಾಗೂ ಸುರಕ್ಷಿತ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನೋಡಿ ಸಂತೋಷವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಮದುರೈನಲ್ಲಿ  ಸ್ಥಳೀಯರೊಂದಿಗೆ ಪೊಂಗಲ್ ಹಬ್ಬ ಆಚರಿಸಿದರು.

ಭಾರತದ ಭವಿಷ್ಯಕ್ಕಾಗಿ ತಮಿಳು ಸಂಸ್ಕೃತಿ, ಭಾಷೆ ಹಾಗೂ ಇತಿಹಾಸ ಮುಖ್ಯವಾಗಿದೆ. ಇದನ್ನು ಗೌರವಿಸುವುದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಬ್ಬರೂ ಇದನ್ನು ಗೌರವಿಸಬೇಕಿದೆ. ತಮಿಳು ಭಾಷೆ ಹಾಗೂ ಸಂಸ್ಕೃತಿಯನ್ನು ನಾವು ಮೂಲೆಗೆ ಸರಿಸಿದ್ದೇವೆ ಎಂಬ ಟೀಕೆ ಮಾಡುವವರಿಗೆ ಉತ್ತರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News