ಬಿಹಾರ: ಖ್ಯಾತ ಲೇಖಕ ಜಾರ್ಜ್ ಆರ್ವೆಲ್‌ರ ಪುತ್ಥಳಿಗೆ ಹಾನಿ

Update: 2021-01-14 17:40 GMT

ಪಾಟ್ನಾ, ಜ. 14: ‘1984’ರಂತಹ ಜಗತ್ಪ್ರಸಿದ್ಧ ಕೃತಿಗಳ ಲೇಖಕ ಜಾರ್ಜ್ ಆರ್ವೆಲ್ ಅವರ ಜನ್ಮ ಸ್ಥಳವಾದ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಅವರ ಪುತ್ಥಳಿಯನ್ನು ದುಷ್ಕರ್ಮಿಗಳು ಶನಿವಾರ ಹಾನಿಗೊಳಿಸಿದ್ದಾರೆ. ಜಾರ್ಜ್ ಆರ್ವೆಲ್ ಜನಿಸಿದ ಮೋತಿಹಾರಿಯಲ್ಲಿರುವ ಮನೆಯನ್ನು ರಾಜ್ಯದ ಕಲೆ, ಸಂಸ್ಕೃತಿ ಹಾಗೂ ಯುವ ವ್ಯವಹಾರಗಳ ಇಲಾಖೆ ಸಂರಕ್ಷಿತ ನಿವೇಶನ ಎಂದು ಘೋಷಿಸಿದೆ.

ಜಾರ್ಜ್ ಆರ್ವೆಲ್ ಅವರ ಪುತ್ಥಳಿಯ ಒಂದು ಭಾಗವನ್ನು ದುಷ್ಕರ್ಮಿಗಳು ಕೊಂಡೊಯ್ದಿದ್ದಾರೆ. ಭದ್ರತಾ ಸಿಬ್ಬಂದಿ ತಡೆ ಒಡ್ಡಿದರೂ ದುಷ್ಕರ್ಮಿಗಳು ಪುತ್ಥಳಿಯ ಭಾಗವನ್ನು ಬಾವಿಗೆ ಎಸೆದಿದ್ದಾರೆ. ಘಟನೆ ಬಗ್ಗೆ ಭದ್ರತಾ ಸಿಬ್ಬಂದಿ ರಾಮ್ ಸೂರತ್ ರಾಮ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಜಾರ್ಜ್ ಆರ್ವೆಲ್ ಅವರ ಪುತ್ಥಳಿಗೆ ಹಾನಿ ಉಂಟು ಮಾಡಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜಾರ್ಜ್ ಆರ್ವೆಲ್ ಮೋತಿಹಾರಿಯಲ್ಲಿ 1903 ಜೂನ್ 25ರಂದು ಜನಿಸಿದರು. ಅವರ ತಂದೆ ಬ್ರಿಟೀಷ್ ಭಾರತದಲ್ಲಿ ನಾಗರಿಕ ಸೇವೆಯ ಅಧಿಕಾರಿಯಾಗಿದ್ದರು.

ಜಾರ್ಜ್ ಆರ್ವೆಲ್ ಅವರ ಮೂಲ ಹೆಸರು ಎರಿಕ್ ಅರ್ಥರ್ ಬ್ಲೇರ್. ಜಾರ್ಜ್ ಆರ್ವೆಲ್ ಜನಿಸಿದ ಆರು ತಿಂಗಳ ಬಳಿಕ ಅವರನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲಾಗಿತ್ತು. ಅವರು ಅನಂತರ ಎಂದಿಗೂ ಭಾರತಕ್ಕೆ ಹಿಂದಿರುಗಿರಲಿಲ್ಲ. ಬ್ರಿಟೀಷ್ ಪತ್ರಕರ್ತ ಇಯಾನ್ ಜಾಕ್ ಮೊದಲ ಬಾರಿಗೆ ಜಾರ್ಜ್ ಆರ್ವೆಲ್ ಅವರ ಜನ್ಮ ಸ್ಥಳವನ್ನು 1983ರಲ್ಲಿ ಪತ್ತೆ ಮಾಡಿದ್ದರು. ಅನಂತರ ಅವರ ಪುತ್ಥಳಿಯನ್ನು ಮೋತಿಹಾರಿಯಲ್ಲಿ 2010ರಲ್ಲಿ ಸ್ಥಾಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News