ಅಂತರ್ ಧರ್ಮೀಯ ಜೋಡಿಗೆ ಕಿರುಕುಳ ನೀಡಬೇಡಿ: ಪೊಲೀಸರಿಗೆ ಹೈಕೋರ್ಟ್ ಸೂಚನೆ

Update: 2021-01-15 03:35 GMT

ಲಕ್ನೋ : ಮೂರು ವರ್ಷ ಹಳೆಯ ಪ್ರಕರಣವೊಂದರ ಸಂಬಂಧ ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ಅಧ್ಯಾದೇಶ-2020ರ ಅನ್ವಯ ತನಿಖೆ ನಡೆಸುವ ಮೂಲಕ ಅಂತರ್ ಧರ್ಮೀಯ ಜೋಡಿಯ ಮೇಲೆ ದಬ್ಬಾಳಿಕೆ ಎಸಗದಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಅಮೇಥಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

2017ರಲ್ಲಿ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ನೀಡುತ್ತಿರುವ ಕಿರುಕುಳದಿಂದ ಮುಕ್ತಿಗೊಳಿಸಬೇಕು ಎಂದು ಕೋರಿ ಚಾಂದನಿ ಹಾಗೂ ಆಕೆಯ ಪತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಆರ್.ಅವಸ್ತಿ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಅಮೇಥಿ ಜಿಲ್ಲೆಯ ಕಮ್ರೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರತೀಯ ದಂಡಸಂಹಿತೆ ಸೆಕ್ಷನ್ 363 ಮತ್ತು 366ರ ಅನ್ವಯ ಪ್ರಕರಣ ದಾಖಲಾಗಿತ್ತು. ಬಲಾತ್ಕಾರದ ವಿವಾಹಕ್ಕೆ ಪುತ್ರಿಯನ್ನು ಅಪಹರಿಸಿದ್ದಾಗಿ ಯುವತಿಯ ತಂದೆ ಚಾಂದನಿ ಪತಿಯ ವಿರುದ್ಧ ದೂರು ನೀಡಿದ್ದರು.

ಅರ್ಜಿದಾರರ ಪರ ವಾದಿಸಿದ ವಕೀಲ ಎ.ಕೆ.ಪಾಂಡೆ, "ಈ ಜೋಡಿ ಮೂರು ವರ್ಷ ಹಿಂದೆ ವಿವಾಹವಾಗಿದ್ದು, ದಂಪತಿಗೆ ಇಗ ಒಂದೂವರೆ ವರ್ಷದ ಮಗು ಇದೆ" ಎಂದು ವಾದಿಸಿದ್ದರು. ಈ ಪ್ರಕರಣದ ಬಗ್ಗೆ ಒಂದು ವಾರದ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಲಯ ಸೂಚಿಸಿತು. ಪ್ರಕರಣದ ವಿಚಾರಣೆಗೆ ಮತ್ತೆ ದಿನಾಂಕ ನಿಗದಿಯಾಗುವವರೆಗೆ ಪೊಲೀಸರು ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News