ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ

Update: 2021-01-16 07:57 GMT

ಬೆಂಗಳೂರು, ಜ.16: ಕೋವಿಡ್‌–19 ಮಹಾಮಾರಿ ಸೋಂಕಿನ ವಿರುದ್ಧ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10.30ಕ್ಕೆ ವೀಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭ ರಾಜ್ಯಾದ್ಯಂತ 243 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ಚಾಲನೆ ನೀಡಿದರು.

 ವಿಕ್ಟೋರಿಯಾ ಆವರಣದಲ್ಲಿ ಇರುವ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10 ಕೋವಿಡ್ ಯೋಧರಿಗೆ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು.

ಕೋವಿಡ್ ಸಮಯದಲ್ಲಿ ಅವಿರತವಾಗಿ ದುಡಿದ ಬೆಂಗಳೂರಿನ ನಾಗರತ್ನಾ ಕೆ., ಗಂಗಾಧರ್, ಡಾ.ಸುಶಾಂತ್, ಕೀರ್ತಿ, ಮಾಲಾ, ಲೋಕೇಶ್ ಜಿ., ವಿಷ್ಣುಪ್ರಿಯ, ವರುಣ್ ಕುಮಾರ್, ಡಾ.ಸಂದೇಶ್ ಕಂಡವಾಲಾ, ಮನೋಜ್ ಬಿ.ಎಸ್., ಜಯಂತಿ ಎಂಬವರಿಗೆ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರಿಗೆ ಹೂಗುಚ್ಚ ನೀಡಿ ಮುಖ್ಯಮಂತ್ರಿ ಅಭಿನಂದಿಸಿದರು.

ಈ ಸಂದರ್ಭ ಕೇಂದ್ರ  ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಶಾಸಕ ಝಮೀರ್ ಅಹ್ಮದ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೊದಲ ಕೊರೋನ ಲಸಿಕೆಯನ್ನು ಆರೋಗ್ಯ ಸಿಬ್ಬಂದಿ, ಡಿ ಗ್ರೂಪ್ ನೌಕರ ಚಂದ್ರಶೇಖರ್ ಪಡೆದರು. ಎರಡನೇ ಲಸಿಕೆಯನ್ನು ಮಲ್ಲಸಂದ್ರ ಆಸ್ಪತ್ರೆಯ ವೈದ್ಯೆ ಡಾ.ಕೋಮಲಾ ಪಡೆದರು.

ಮೊದಲ ಹಂತದಲ್ಲಿ ಪೌರ ಕಾರ್ಮಿಕರಿಗೆ ಲಸಿಕೆ

ಕೋವಿಡ್ ಲಸಿಕೆಯನ್ನು ಮೊದಲ ಹಂತದಲ್ಲಿ ಹೆಸರು ನೋಂದಾಯಿಸಲ್ಪಟ್ಟ ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಸೇರಿದಂತೆ ಒಟ್ಟು 243 ಕೇಂದ್ರಗಳಲ್ಲಿ ನೀಡಲಾಗುತ್ತದೆ. ಮೊದಲ ದಿನವಾದ ಇಂದು ಪ್ರತೀ ಕೇಂದ್ರಗಳಲ್ಲಿ ತಲಾ 100 ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈಗಾಗಲೇ ತಿಳಿಸಿದ್ದಾರೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News