ಸರಕಾರದ ವಿರುದ್ಧ ಜನರನ್ನು ಬಂಡಾಯವೆಬ್ಬಿಸಿದ ಆರೋಪ: ರೈತ ಮುಖಂಡನಿಗೆ ರಾಷ್ಟ್ರೀಯ ತನಿಖಾದಳದಿಂದ ಸಮನ್ಸ್‌ ಜಾರಿ

Update: 2021-01-16 17:59 GMT

ಅಮೃತಸರ, ಜ.16: ನಿಷೇಧಿತ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್(ಎಸ್‌ಎಫ್‌ಜೆ)’ನೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ರೈತ ಸಂಘಟನೆ ‘ಲೋಕಭಲಾಯಿ ಇನ್ಸಾಫ್ ವೆಲ್‌ಫೇರ್ ಸೊಸೈಟಿ’ಯ ಅಧ್ಯಕ್ಷ ಬಲ್‌ದೇವ್ ಸಿಂಗ್ ಸಿರ್ಸಾಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಮನ್ಸ್ ನೀಡಿದೆ. ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಲೋಕಭಲಾಯಿ ಇನ್ಸಾಫ್ ವೆಲ್‌ಫೇರ್ ಸೊಸೈಟಿ(ಎಲ್‌ಬಿಐಡಬ್ಲೂಎಸ್)ಯ ಸದಸ್ಯರೂ ಭಾಗವಹಿಸುತ್ತಿದ್ದಾರೆ. ಕೇಂದ್ರ ಸರಕಾರ- ರೈತ ಸಂಘಟನೆಗಳ ಮಧ್ಯೆ ಶುಕ್ರವಾರ ನಡೆದಿದ್ದ ಮಾತುಕತೆಯಲ್ಲಿ ರೈತರ ನಿಯೋಗದಲ್ಲಿ ಬಲ್‌ದೇವ್ ಸಿಂಗ್ ಸಿರ್ಸ ಇದ್ದರು.

 ಭಯ ಮತ್ತು ಅರಾಜಕತೆಯ ವಾತಾವರಣ ಸೃಷ್ಟಿಸಲು ಪಿತೂರಿ ರೂಪಿಸಿರುವುದು, ಜನರಲ್ಲಿ ಅಸಮಾಧಾನ ಬೆಳೆಯುವಂತೆ ಸಂಚು ಹೂಡಿ ಅವರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ ಆರೋಪದಲ್ಲಿ ಎಸ್‌ಎಫ್‌ಜೆಯ ಮುಖಂಡ ಗುರ್ಪತ್ವಂತ್ ಸಿಂಗ್ ಪನ್ನು ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಜನವರಿ 17ರಂದು ದಿಲ್ಲಿಯ ಎನ್‌ಐಎ ಕೇಂದ್ರ ಕಚೇರಿಯಲ್ಲಿ ಹಾಜರಾಗಬೇಕೆಂದು ಬಲ್‌ದೇವ್ ಸಿಂಗ್‌ಗೆ ಸಮನ್ಸ್ ನೀಡಲಾಗಿದೆ.

ರೈತರ ಪ್ರತಿಭಟನೆಯ ಹಳಿ ತಪ್ಪಿಸಲು ಕೇಂದ್ರ ಸರಕಾರ ಈ ರೀತಿ ಮಾಡುತ್ತಿದೆ. ಮೊದಲು ಸುಪ್ರೀಂಕೋರ್ಟ್ ಮೂಲಕ ರೈತರ ಪ್ರತಿಭಟನೆ ಹಳಿ ತಪ್ಪಿಸಲು ಪ್ರಯತ್ನಿಸಿದ ಸರಕಾರ ಈಗ ಎನ್‌ಐಎ ಮೂಲಕ ಪ್ರಯತ್ನ ಮುಂದುವರಿಸಿದೆ ಎಂದು ಬಲ್‌ದೇವ್ ಸಿಂಗ್ ಸಿರ್ಸ ಪ್ರತಿಕ್ರಿಯಿಸಿದ್ದಾರೆ. ಸಿರ್ಸ ಅವರಲ್ಲದೆ ರೈತರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹಲವು ಸಾಮಾಜಿಕ ಕಾರ್ಯಕರ್ತರಿಗೂ ಎನ್‌ಐಎ ಸಮನ್ಸ್ ನೀಡಿದೆ ಎಂದು ರೈತ ಸಂಘಟನೆಗಳು ಹೇಳಿವೆ. ನಿಷೇಧಿತ ಎಸ್‌ಎಫ್‌ಜೆ ಹಾಗೂ ಇತರ ಖಲಿಸ್ತಾನಿ ಸಂಘಟನೆಗಳು ಕೇಂದರ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲು ವಿದೇಶದಲ್ಲಿ ಭಾರೀ ಮೊತ್ತವನ್ನು ಸಂಗ್ರಹಿಸಿವೆ.

ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ ಮುಂತಾದ ದೇಶಗಳಲ್ಲಿರುವ ಭಾರತೀಯ ದೂತಾವಾಸದ ಎದುರು ಪ್ರತಿಭಟನೆ ನಡೆಸಲೂ ಈ ಸಂಘಟನೆಗಳು ಯೋಜನೆ ರೂಪಿಸಿವೆ. ಹೀಗೆ ಸಂಗ್ರಹಿಸಿರುವ ಹಣವನ್ನು ಭಾರತದಲ್ಲಿರುವ ಖಲಿಸ್ತಾನ್ ಪರ ಸಂಘಟನೆಗಳಿಗೆ ತಲುಪಿಸಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಪ್ರೋತ್ಸಾಹ ನೀಡುವ ಉದ್ದೇಶವಿದೆ ಎಂಬುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಕೇಂದ್ರ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News