ಟಿಆರ್ಪಿ ಹಗರಣ ಆರೋಪಿ ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಐಸಿಯುಗೆ ದಾಖಲು

Update: 2021-01-16 11:43 GMT

ಮುಂಬೈ,ಜ.16: ಟಿಆರ್ಪಿ ತಿರುಚಿದ ಹಗರಣದಲ್ಲಿ  ಆರೋಪಿಯಾಗಿರುವ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಅವರನ್ನು  ಶುಕ್ರವಾರ ರಾತ್ರಿ ಮುಂಬೈಯ ಜೆಜೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅವರು ತಮ್ಮ ಮಧುಮೇಹದ ಔಷಧಿಯನ್ನು ಸೇವಿಸದೇ ಇದ್ದುದರಿಂದ ಅವರ ದೇಹದಲ್ಲಿನ ಸಕ್ಕರೆ ಅಂಶದಲ್ಲಿ ಏರಿಕೆಯಾಗಿತ್ತು ಎಂದು ತಿಳಿಸಿರುವ ಪೊಲೀಸರು ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಬಾರ್ಕ್ ಸಿಇಒ ರೋಮಿಲ್ ರಾಮಘರಿಯಾ ಅವರ ಬಂಧನದ ಬೆನ್ನಲ್ಲೇ ಪೊಲೀಸರು ಕಳೆದ ತಿಂಗಳು ಟಿಆರ್ಪಿ ಹಗರಣ ಸಂಬಂಧ ದಾಸಗುಪ್ತಾ ಅವರನ್ನೂ ಬಂಧಿಸಿದ್ದರು. ಟಿಆರ್ಪಿ ರ್ಯಾಂಕಿಂಗ್‍ನಲ್ಲಿ ರಿಪಬ್ಲಿಕ್ ಟಿವಿಯೇ ಟಾಪ್ ಚಾನೆಲ್ ಎಂದು ತೋರಿಸುವ ನಿಟ್ಟಿನಲ್ಲಿ ಟಿಆರ್ಪಿ ತಿರುಚಿದ ಆರೋಪ  ಇವರ ಮೇಲಿತ್ತು.

ಜನವರಿ 4ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದಾಸಗುಪ್ತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ತಮ್ಮ ಎರಡು ರಿಪಬ್ಲಿಕ್ ಚಾನೆಲುಗಳು ಟಿಆರ್ಪಿ ರ್ಯಾಂಕಿಂಗ್‍ನಲ್ಲಿ ಅಗ್ರ ಸ್ಥಾನ ಹೊಂದಿವೆ ಎಂದು ತೋರಿಸಲು ದಾಸಗುಪ್ತಾ ಅವರಿಗೆ ಹಣ ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಶುಕ್ರವಾರದಂದು ಅರ್ನಬ್‌ ಗೋಸ್ವಾಮಿ ಹಾಗೂ ಪಾರ್ಥೊ ದಾಸಗುಪ್ತಾ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್‌ ಚಾಟ್‌ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News