ವೈದ್ಯರು ಸೂಚಿಸಿದರೆ ಲಸಿಕೆ ಪಡೆಯಲು ಸಿದ್ಧ: ಸಿಎಂ ಯಡಿಯೂರಪ್ಪ

Update: 2021-01-16 12:35 GMT

ಬೆಂಗಳೂರು, ಜ. 16: ಕೋವಿಡ್-19 ಸೋಂಕು ನಿಯಂತ್ರಣ ಲಸಿಕೆ ನೀಡಿಕೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಹತ್ತು ಮಂದಿ ಕೋವಿಡ್ ಯೋಧರಿಗೆ ಲಸಿಕೆ ನೀಡುವ ಲಸಿಕೆ ವಿತರಣೆ ಅಭಿಯಾನಕ್ಕೆ ಮೂಲಕ ಚಾಲನೆ ನೀಡಿದರು.

ಶನಿವಾರ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾಲಯದಲ್ಲಿ ಪ್ರಧಾನಿ ಮೋದಿ ಆನ್‍ಲೈನ್ ಮೂಲಕ ಕೊರೋನ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ಕೋವಿಡ್ ಸಮಯದಲ್ಲಿ ಅವಿರತವಾಗಿ ದುಡಿದ ಬೆಂಗಳೂರಿನ ನಾಗರತ್ನ ಕೆ.ಅವರಿಗೆ ಮೊದಲ ಲಸಿಕೆ ನೀಡಲಾಯಿತು.

ಲಸಿಕೆ ಪಡೆಯಲು ಸಿದ್ಧ: ಕೊರೋನ ಲಸಿಕೆಯನ್ನು ವೈದ್ಯರು ನನಗೆ ಯಾವಾಗ ತೆಗೆದುಕೊಳ್ಳಲು ಸೂಚಿಸುತ್ತಾರೋ ಆಗ ಲಸಿಕೆಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ ಎಂದು ಪ್ರಕಟಿಸಿದ ಯಡಿಯೂರಪ್ಪ, ದೇಶದ ಇತಿಹಾಸದಲ್ಲಿ ಇದೊಂದು ಚಾರಿತ್ರಿಕ ದಿನ. ಇಡೀ ಜಗತ್ತೇ ಕೊರೋನ ಅಭಿಯಾನ ಭಾರತದಲ್ಲಿ ಆರಂಭವಾಗುವುದನ್ನು ಗಮನಿಸುತ್ತಿದೆ ಎಂದರು.

ವೈದ್ಯರು ಸೂಚಿಸಿದರೆ ನಾನು ಲಸಿಕೆ ಪಡೆದುಕೊಳ್ಳಲು ಸಿದ್ಧ.  ಈಗಾಗಲೇ ಲಸಿಕೆಯಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಜನಸಾಮಾನ್ಯರು ಹೆದರುವ ಅಗತ್ಯವಿಲ್ಲ. ಆತಂಕಪಡದೆ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಧಾನಿ ಮೋದಿ ವಿಶೇಷ ಶ್ರಮವಹಿಸಿ ದೇಶಿಯವಾಗಿಯೇ ಕೊರೋನ ಲಸಿಕೆ ಅಭಿವೃದ್ದಿಯಾಗುವಂತೆ ನೋಡಿಕೊಂಡಿದ್ದಾರೆ. ಕೊರೋನದಿಂದ ದೇಶದ ಜನರನ್ನು ಮುಕ್ತಗೊಳಿಸಿ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಹಾಕಿರುವ ಶ್ರಮ ಶ್ಲಾಘನೀಯ. ದೇಶ ಹಾಗೂ ರಾಜ್ಯದ ಜನರ ಪರವಾಗಿ ಅವರಿಗೆ ಅಭಿನಂದನೆ ಎಂದು ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಬಿಡದಿಯ ಕುರುಬರಹಳ್ಳಿಯ ನಾಗರತ್ನ ಎಂಬ ಮಹಿಳೆ ಮೊದಲ ಲಸಿಕೆ ತೆಗೆದುಕೊಂಡಿದ್ದಾರೆ. ಅವರ ಜತೆಗೆ ಹಿರಿಯ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಅವರು ಲಸಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಆರೋಗ್ಯ ರಕ್ಷಿಸಿಕೊಳ್ಳಲು ಲಸಿಕೆ ತೆಗೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದಲ್ಲಿ 243 ಕಡೆ ಕೊರೋನ ಲಸಿಕೆ ನೀಡಿಕೆ ಆರಂಭವಾಗಿದೆ. ಪ್ರತಿ ಕೇಂದ್ರದಲ್ಲೂ ನಿತ್ಯ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆ ನೀಡುವ ಸಂಖ್ಯೆ ಹೆಚ್ಚಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

ಮೊದಲ ಹಂತದಲ್ಲಿ ದೇಶಾದ್ಯಂತ 3 ಕೋಟಿ ಜನರಿಗೆ ಲಸಿಕೆ ನೀಡುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದಾರೆ. ಮಾರ್ಗಸೂಚಿಯಂತೆ ರಾಜ್ಯದಲ್ಲೂ ಲಸಿಕೆ ವಿತರಣೆ ಆಂದೋಲನ ನಡೆಯಲಿದೆ. ಲಸಿಕೆ ಆಂದೋಲನ ಸುಗಮವಾಗಿ ನಡೆಯಲು ವ್ಯವಸ್ಥೆಗಳು ಕಲ್ಪಿಸಲಾಗಿದೆ. ಲಸಿಕೆ ಪಡೆಯುವವರ ಮಾಹಿತಿ ಆನ್‍ಲೈನ್‍ನಲ್ಲಿ ಹಾಕಲಾಗಿದೆ. ದೇಶದಲ್ಲೇ ಅತಿಹೆಚ್ಚು ಆರೋಗ್ಯ ಕಾರ್ಯಕರ್ತರು ಲಸಿಕೆಗಾಗಿ ನೋಂದಣಿ ಮಾಡಿಕೊಂಡಿರುವ ರಾಜ್ಯ ಕರ್ನಾಟಕ ಎಂದು ಅವರು ಹೇಳಿದರು.

ಇದೇ ವೇಳೆ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಈ ಕುರಿತ ವಿಶೇಷ ಅಂಚೆ ಚೀಟಿಯನ್ನು ಲೋಕಾರ್ಪಣೆ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಶಾಸಕ ಝಮೀರ್ ಅಹ್ಮದ್ ಖಾನ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News