ಭಾರತದಲ್ಲಿ ಕೋವಿಡ್-19 ಸೋಂಕು ಇಳಿಮುಖ

Update: 2021-01-18 04:05 GMT

ಹೊಸದಿಲ್ಲಿ, ಜ.18: ದೇಶದಲ್ಲಿ ಕಳೆದ ಏಳು ದಿನಗಳಲ್ಲಿ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 16.6ರಷ್ಟು ಕಡಿಮೆಯಾಗಿದೆ. ಇದು ದೇಶದಲ್ಲಿ ಈ ಮಾರಕ ಸಾಂಕ್ರಾಮಿಕ ಆರಂಭವಾದ ಬಳಿಕ ಕಂಡುಬಂದ ಎರಡನೇ ಗರಿಷ್ಠ ಇಳಿಕೆಯಾಗಿದೆ.

ದೇಶದಲ್ಲಿ ಸತತ 10ನೇ ವಾರ ಹಾಗೂ ದೇಶದಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪಿದ ಸೆಪ್ಟಂಬರ್ ಎರಡನೇ ವಾರದ ಬಳಿಕ ಕಳೆದ 18 ವಾರಗಳ ಪೈಕಿ 17 ವಾರ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ದಾಖಲಿಸಿದೆ.

ಜನವರಿ 11-17ರ ವರೆಗಿನ ಏಳು ದಿನಗಳಲ್ಲಿ ದೇಶದಲ್ಲಿ ಒಟ್ಟು ದಾಖಲಾದ ಪ್ರಕರಣಗಳು 1.05 ಲಕ್ಷ ಆಗಿದ್ದು, ಇದು ಜೂನ್ 15-21ರ ಬಳಿಕ ದಾಖಲಾದ ಕನಿಷ್ಠ ಸಂಖ್ಯೆಯಾಗಿದೆ. ಹಿಂದಿನ ವಾರ ದಾಖಲಾದ 1,26,043 ಪ್ರಕರಣಗಳಿಗೆ ಹೋಲಿಸಿದರೆ ಈ ವಾರ ದಾಖಲಾದ ಪ್ರಕರಣಗಳ ಸಂಖ್ಯೆ 21 ಸಾವಿರದಷ್ಟು ಕಡಿಮೆ. ಡಿಸೆಂಬರ್ 14-20ರ ಅವಧಿಯಲ್ಲಿ ಶೇಕಡ 17.3ರಷ್ಟು ಇಳಿಕೆ ಕಂಡುಬಂದಿದ್ದು, ಇದುವರೆಗಿನ ಗರಿಷ್ಠ ಇಳಿಕೆ ಎನಿಸಿಕೊಂಡಿದೆ.

ಸೆಪ್ಟಂಬರ್ 17ರಂದು ಅಂದರೆ ನಾಲ್ಕು ತಿಂಗಳ ಮೊದಲು ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಪ್ರಕರಣ ದಾಖಲಾಗಿತ್ತು. ಕಳೆದ ವಾರ ದಾಖಲಾದ ಸರಾಸರಿ ಸಂಖ್ಯೆ 15,020 ಆಗಿದ್ದು, ಇದು ಸೆಪ್ಟಂಬರ್‌ನಲ್ಲಿ ದಾಖಲಾದ ಸಂಖ್ಯೆಯ ಶೇಕಡ 16ರಷ್ಟು.

ಕಳೆದ ವಾರದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕೂಡಾ ಶೇಕಡ 16.6ರಷ್ಟು ಇಳಿಕೆಯಾಗಿದೆ. ಈ ವಾರ 1,259 ಮಂದಿ ಮೃತಪಟ್ಟಿದ್ದು, ಕಳೆದ ವಾರ 1,509 ಸಾವು ಸಂಭವಿಸಿತ್ತು. ಕಳೆದ ವರ್ಷದ ಮೇ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಾವಿನ ಸಂಖ್ಯೆ ದಿನಕ್ಕೆ 200ರಿಂದ ಕೆಳಗಿಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News