ಕೋವಿಡ್-19 ನಿರೋಧಕ ಲಸಿಕೆ ಯಾರ್ಯಾರು ಪಡೆಯುವಂತಿಲ್ಲ ?

Update: 2021-01-19 03:31 GMT

ಹೊಸದಿಲ್ಲಿ : ದೇಹದ ಪ್ರತಿರೋಧ ವ್ಯವಸ್ಥೆ ದುರ್ಬಲವಾಗಿರುವವರು ಅಥವಾ ಪ್ರತಿರೋಧ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಔಷಧ ತೆಗೆದುಕೊಳ್ಳುತ್ತಿರುವವರು ಕೊವ್ಯಾಕ್ಸಿನ್ ಪಡೆಯುವಂತಿಲ್ಲ ಎಂದು ಕಂಪನಿ ಎಚ್ಚರಿಕೆ ನೀಡಿದೆ.

ಕೋವಿಡ್-19 ನಿರೋಧಕ ಲಸಿಕೆ ಕುರಿತು ಭಾರತ್ ಬಯೋಟೆಕ್ ಕಂಪನಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ.

ಇದಕ್ಕೂ ಮುನ್ನ ಸರ್ಕಾರ, ಪ್ರತಿರೋಧ ಶಕ್ತಿ ಕೊರತೆ ಇರುವವರು ಲಸಿಕೆ ಪಡೆಯಬಹುದಾದರೂ, ಅಂಥವರಲ್ಲಿ ಲಸಿಕೆಯ ಪರಿಣಾಮ ಕಡಿಮೆ ಎಂದು ಹೇಳಿತ್ತು. ಸಾಮಾನ್ಯವಾಗಿ ಕಿಮೋಥೆರಪಿ ಮೇಲಿರುವ ಕ್ಯಾನ್ಸರ್ ರೋಗಿಗಳು, ಎಚ್‌ಐವಿ ಪಾಸಿಟಿವ್ ರೋಗಿಗಳು ಹಾಗೂ ಸ್ಟಿರಾಯ್ಡಿಯುಕ್ತ ಔಷಧಿ ಸೇವಿಸುತ್ತಿರುವವರಲ್ಲಿ ಪ್ರತಿರೋಧ ಶಕ್ತಿ ಕಡಿಮೆ. ಇಂಥ ರೋಗಿಗಳಲ್ಲಿ ಸೋಂಕು ಸಾಧ್ಯತೆ ಅತ್ಯಧಿಕ ಹಾಗೂ ಲಸಿಕೆಯ ಕ್ಷಮತೆ ಕೂಡಾ ಇವರಲ್ಲಿ ಕನಿಷ್ಠ ಎಂದು ವೈದ್ಯರು ಹೇಳಿದ್ದಾರೆ.

ರಕ್ತಸ್ರಾವ ಸಮಸ್ಯೆ ಇರುವವರು ಅಥವಾ ರಕ್ತ ತೆಳುವಾಗಿಸಲು ಔಷಧಿ ಪಡೆಯುತ್ತಿರುವವರು ಕೂಡಾ ಲಸಿಕೆ ಪಡೆಯದಂತೆ ಕಂಪನಿ ಸಲಹೆ ಮಾಡಿದೆ. ವಾಸ್ತವವಾಗಿ ಅಸ್ವಸ್ಥರು, ಜ್ವರ ಇರುವವರು, ಅಲರ್ಜಿ ಇತಿಹಾಸ ಹೊಂದಿರುವವರು, ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಕೂಡಾ ಲಸಿಕೆ ಪಡೆಯಬಾರದು.

ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಕೋವಿಡ್-19 ಲಕ್ಷಣಗಳು ಕಂಡುಬಂದರೆ ಅದನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶದ ಪುರಾವೆಯೊಂದಿಗೆ ವ್ಯತಿರಿಕ್ತ ಘಟನೆ ಎಂದು ದಾಖಲಿಸುವಂತೆಯೂ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News