"ಮಹಿಳೆ ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳಿದ್ದಾಳೆ,ನಾವಾಗಲೀ ಪೋಷಕರಾಗಲೀ ಅದನ್ನು ಹತ್ತಿಕ್ಕುವಂತಿಲ್ಲ"

Update: 2021-01-19 17:50 GMT

ಮುಂಬೈ,ಜ.19: ಮಹಿಳೆಯು ತನ್ನಿಷ್ಟದಂತೆ ಸುತ್ತಾಡಲು ಸ್ವತಂತ್ರಳಿದ್ದಾಳೆ ಮತ್ತು ನ್ಯಾಯಾಲಯವಾಗಲೀ ಆಕೆಯ ಪೋಷಕರಾಗಲೀ ಈ ಸ್ವಾತಂತ್ರವನ್ನು ಮೊಟಕುಗೊಳಿಸುವಂತಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಹೇಳಿದೆ.

ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಯೋರ್ವ ತನ್ನ 23ರ ಹರೆಯದ ಸಂಗಾತಿಯ ಪೋಷಕರ ವಿರುದ್ಧ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಮನೀಷ ಪಿತಳೆ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಈ ಜೋಡಿ ನೆರವು ಕೋರಿ ಮೊದಲು ಪೊಲೀಸರನ್ನು ಸಂಪರ್ಕಿಸಿತ್ತಾದರೂ ಅವರಿಗೆ ನೆರವಾಗುವ ಬದಲು ಯುವತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಿದ್ದರು.

ನ್ಯಾಯಾಲಯಕ್ಕೆ ತನ್ನ ಅಹವಾಲು ಹೇಳಿಕೊಂಡ ಯುವತಿ,ತಾನು ಕಳೆದ ಐದು ವರ್ಷಗಳಿಂದಲೂ ಅರ್ಜಿದಾರನೊಂದಿಗೆ ಸಂಬಂಧವನ್ನಿಟ್ಟುಕೊಂಡಿದ್ದು,ಉಳಿದ ಬದುಕನ್ನೂ ಆತನೊಂದಿಗೆ ಕಳೆಯಲು ಬಯಸಿದ್ದೇನೆ. ತಮ್ಮಿಬ್ಬರ ಸಂಬಂಧದ ಬಗ್ಗೆ ಹೆತ್ತವರಿಗೆ ಗೊತ್ತಾದಾಗ ಅವರು ತನಗೆ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿಕೊಂಡಳು. ಏನಿದು ವಿಷಯ ಎಂದು ನ್ಯಾ.ಶಿಂದೆ ಸರಕಾರಿ ವಕೀಲರನ್ನು ಪ್ರಶ್ನಿಸಿದಾಗ,ಆಕೆ ಮದುವೆಯಾಗದೆ ಆತನೊಂದಿಗೆ ಜೀವನ ಸಾಗಿಸುವ ಕುರಿತು ಮಾತನಾಡುತ್ತಿದ್ದಾಳೆ ಎಂದು ಅವರು ವಿವರಿಸಿದರು.

‘ಯುವತಿಯು ಪ್ರಾಪ್ತವಯಸ್ಕಳಾಗಿದ್ದಾಳೆ. ನಾವಾಗಲೀ ಪೋಷಕರಾಗಲೀ ಆಕೆಯನ್ನು ನಿರ್ಬಂಧಿಸುವಂತಿಲ್ಲ. ತಾನು ಅಕ್ರಮ ಬಂಧನದಲ್ಲಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಯಾವುದೇ ನಿರ್ಬಂಧವಿಲ್ಲದೆ ತನ್ನಿಷ್ಟದಂತೆ ತಿರುಗಾಡಬಹುದು. ಕಾನೂನು ಹಾಗಿದೆ ’ಎಂದು ನ್ಯಾ.ಶಿಂದೆ ಹೇಳಿದರು.

ಕೊನೆಯ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಪೀಠವು ಜೋಡಿಗೆ ಸೂಚಿಸಿದಾಗ ಯುವತಿ ತನ್ನ ಪ್ರಿಯಕರನಿಂದ ದೂರ,ತನ್ನ ಹೆತ್ತವರ ಬಳಿ ಕುಳಿತುಕೊಳ್ಳುವಂತೆ ಮಹಿಳಾ ಪೊಲೀಸ್ ಎಚ್ಚರಿಕೆ ವಹಿಸಿದ್ದರು.

 ಈ ಸಂಬಂಧ ತನಗೆ ಸಮಾಧಾನ ನೀಡಿಲ್ಲ ಮತ್ತು ಅವರ ಮದುವೆಯನ್ನು ತಾನು ಒಪ್ಪುವುದಿಲ್ಲ ಎಂದು ಯವತಿಯ ತಂದೆ ತಿಳಿಸಿದರು. ಅವರಿಗೆ ಹಿಂದಿಯಲ್ಲಿ ವಿವರಿಸಲು ಪ್ರಯತ್ನಿಸಿದ ನ್ಯಾಯಾಧೀಶರು,‘ನಿಮ್ಮ ಉದ್ದೇಶ ಮತ್ತು ಸದಾಶಯಗಳು ನಮಗೆ ಅರ್ಥವಾಗುತ್ತವೆ,ಆದರೆ ನಿಮ್ಮ ಪುತ್ರಿ ಪ್ರಾಪ್ತವಯಸ್ಕಳಾಗಿದ್ದಾಳೆ. ನಾಳೆ ನ್ಯಾಯಾಧೀಶರೋರ್ವರು ಸಹ ನ್ಯಾಯಾಲಯವನ್ನು ಸಂಪರ್ಕಿಸಿದರೆ ಮತ್ತು ಅವರ ಪುತ್ರಿ ಪ್ರಾಪ್ತವಯಸ್ಕಳಾಗಿದ್ದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ’ಎಂದು ಹೇಳಿದರು. ಅರ್ಜಿಯನ್ನು ವಿಲೇವಾರಿಗೊಳಿಸಿದ ನ್ಯಾಯಾಲಯವು ಯುವಜೋಡಿಗೆ ಅವರ ತಾಣದವರೆಗೆ ರಕ್ಷಣೆಯನ್ನು ಒದಗಿಸುವಂತೆ ಪೊಲೀಸರಿಗೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News