5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಹೂಡಿಕೆ ಆಕರ್ಷಣೆ, 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ: ಜಗದೀಶ್ ಶೆಟ್ಟರ್

Update: 2021-01-19 18:19 GMT

ಬೆಂಗಳೂರು, ಜ.19: ರಾಜ್ಯ ಸರಕಾರವು ಪರಿಚಯಿಸಿರುವ ‘ಹೊಸ ಕೈಗಾರಿಕಾ ನೀತಿ 2020-2025’ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ.ಮೌಲ್ಯದ ಬಂಡವಾಳ ಹೂಡಿಕೆ ಆಕರ್ಷಣೆ ಮತ್ತು 20 ಲಕ್ಷ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸ ಕೈಗಾರಿಕಾ ನೀತಿ 2020-25 ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ನೂತನ ನೀತಿಯು ಕೈಗಾರಿಕೆಗೆ ಸಮ್ಮಿಲಿತವಾದ ವಾತಾವರಣ ನಿರ್ಮಾಣ ಮಾಡುವುದರೊಂದಿಗೆ ಸಮೃದ್ಧ ಕರ್ನಾಟಕ ರೂಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಹೊಸ ಕೈಗಾರಿಕಾ ನೀತಿ 2020-25ರ ಉತ್ತೇಜನಾ ಕ್ರಮ ಹಾಗೂ ರಿಯಾಯಿತಿ ಪ್ಯಾಕೇಜ್ 2020ರ ಆಗಸ್ಟ್ 13 ರಿಂದಲೇ ಅನ್ವಯವಾಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಅಥವಾ ಮುಂದಿನ ನೀತಿ ಘೋಷಣೆ ಆಗುವವರೆಗೆ ಜಾರಿಯಲ್ಲಿರುತ್ತದೆ ಎಂದರು. 

ಜಾಗತಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಭದ್ರಪಡಿಸುವ ಜತೆಗೆ ಇನ್ನೂ ಉನ್ನತ ಸಾಧನೆ ಮಾಡುವ ಮೂಲಕ ವಾರ್ಷಿಕವಾಗಿ ಶೇ.10ರಷ್ಟು ಕೈಗಾರಿಕಾ ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವುದು ಹೊಸ ಕೈಗಾರಿಕಾ ನೀತಿಯ ಪ್ರಮುಖ ಧ್ಯೇಯ. ಹೊಸ ಕೈಗಾರಿಕಾ ನೀತಿ ಸೇರಿದಂತೆ ಇಲಾಖೆ ಮತ್ತು ಹೂಡಿಕೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನೊಳಗೊಂಡ ಸಮಗ್ರ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ಇದು ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ನೂತನ ಕೈಗಾರಿಕಾ ನೀತಿ 2020-25 ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವುದು ನಮ್ಮ ಉದ್ದೇಶ. ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಜೋನ್-1 ಹಾಗೂ 2ರಡಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರಿರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಜೋನ್-3 ರಲ್ಲಿ ವರ್ಗೀಕರಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ ಧಾರವಾಡದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್, ಯಾದಗಿರಿಯ ಜಿಲ್ಲೆಯಲ್ಲಿ ಫಾರ್ಮಾ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗಿದೆ. ಜತೆಗೆ, ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್‍ಶಿಪ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದರು. 

ವಾಹನ ಮತ್ತು ವಾಹನಗಳ ಬಿಡಿಭಾಗಗಳು, ಔಷಧಿ ಮತ್ತು ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ ಹಾಗೂ ವಿದ್ಯುತ್‍ಚಾಲಿತ ವಾಹನಗಳು ಮೊದಲಾದ ವೈದ್ಯಕೀಯ ಉಪಕರಣಗಳು, ಎಂಜಿನಿಯರಿಂಗ್ ಮತ್ತು ಯಂತ್ರೋಪಕರಣ ಬಿಡಿಭಾಗಗಳು, ಜ್ಞಾನ ಆಧಾರಿತ ಕೈಗಾರಿಕೆಗಳು, ಪ್ರಮುಖ ವಲಯಗಳ ಮೇಲೆ ನೀತಿಯು ಗಮನ ಕೇಂದ್ರೀಕರಿಸಿದೆ. ಹೆಚ್ಚುವರಿಯಾಗಿ, ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಸಾಧ್ಯವಾಗುವಂತೆ ಏಕೀಕೃತ ತಂತ್ರಜ್ಞಾನ ವೇದಿಕೆ ‘ಸಮರ್ಥ' ಎಂಬ ಉಪಕ್ರಮವನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನೂತನ ಕೈಗಾರಿಕಾ ನೀತಿಯಡಿ, ಎಲ್ಲ ಉದ್ಯಮಗಳಿಗೆ ವಹಿವಾಟು ಆಧಾರಿತ ಪ್ರೋತ್ಸಾಹ ನೀಡಲಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಜತೆಗೆ,  ಸೆಲ್ಫ್ ಫೈನಾನ್ಸಿಂಗ್ ಸಂಸ್ಥೆಗಳು ಸಮಗ್ರ ಬ್ಲ್ಯಾಕೆಂಟ್ ಇನ್ವೆಸ್ಟ್‍ಮೆಂಟ್ ಪ್ರೊಮೋಷನ್ ಸಬ್ಸಿಡಿಗೆ ಅರ್ಹವಾಗುವುದು. 4.0 ಉದ್ದಿಮೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಉತ್ಪಾದನಾ ನವೀಕರಣ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾವೀನ್ಯತೆಯನ್ನು ಆದ್ಯತೆಯ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಹೊಸ ನೀತಿಯಡಿ, ಸಾಂಪ್ರದಾಯಿಕ ಉತ್ಪಾದನೆ ಹಾಗೂ ನವೀನ ತಂತ್ರಜ್ಞಾನಗಳ ನಡುವಿನ ಕಂದಕವನ್ನು ಬೆಸೆಯಲು, ತರಬೇತಿ ಮತ್ತು ಕೌಶಲ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ಸರಕಾರ ಬೆಂಬಲಿಸುತ್ತದೆ. ಇದಲ್ಲದೇ, ಆಧುನೀಕರಣಗೊಳ್ಳುವ ಘಟಕಗಳು ರಾಜ್ಯದಲ್ಲಿ ಮೂಲಧನ ಸಬ್ಸಿಡಿಗೆ ಅರ್ಹವಾಗುತ್ತದೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.

ಎಲ್ಲ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳ ಒಟ್ಟಾರೆ ಆಧಾರದ ಮೇಲೆ ಕನಿಷ್ಠ ಒಟ್ಟಾರೆ ಶೇ.70 ಮತ್ತು ಗ್ರೂಪ್ 'ಡಿ'ಯಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‍ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರಕಾರ 1,701.81 ಕೋಟಿ ರೂ.ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಹೇಳಿದರು.

ಭೂ ಖರೀದಿ ಸರಳ: ಕರ್ನಾಟಕವನ್ನು ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪಿಸಲು ಭೂ ಖರೀದಿಯನ್ನು ಸರಕಾರ ಸರಳಗೊಳಿಸಿದೆ. ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 109 ಹಾಗೂ 79 ‘ಎ’ ಮತ್ತು ‘ಬಿ’ಗೆ ತಿದ್ದುಪಡಿ ತಂದು, ಸಂಭಾವ್ಯ ಹೂಡಿಕೆದಾರರಿಗೆ ಎಲ್ಲ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ವ್ಯವಸ್ಥಿತ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ. ಕೃಷಿ ಉದ್ದೇಶಕ್ಕೆ ಭೂಮಿ ಹೊಂದಿರುವ ಮಾಲಕರು ಆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತಿಸಲು ಇಚ್ಛಿಸಿದರೆ, ಆನ್‍ಲೈನ್ ಮೂಲಕ ಆ ವಿಧಾನವನ್ನು ಸರಳೀಕರಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಮತ್ತು ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಒಪ್ಪಿಗೆ ಪಡೆದ ಬಳಿಕೆ 30 ದಿನದೊಳಗೆ ಅನುಮತಿ ದೊರೆಯುತ್ತದೆ. ಇಲ್ಲದಿದ್ದರೆ ಅದನ್ನು ಡೀಮ್ಡ್ ಪರಿವರ್ತನೆ ಎಂದು ಪರಿಗಣಿಸಲಾಗುತ್ತದೆ. ರೈತರು, ಖಾಸಗಿ ವ್ಯಕ್ತಿ/ ಸಂಸ್ಥೆಗಳಿಂದ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಧನದ ಬದಲು ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಪಾಲು ಕೊಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇ.75 ರಷ್ಟು ರಿಯಾಯಿತಿ ನೀಡಲು ಸರಕಾರ ಮುಂದಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. 

ಈಸ್ ಆಫ್ ಡೂಯಿಂಗ್: ಹೊಸ ನೀತಿ ರಾಜ್ಯದಲ್ಲಿ ಸುಲಲಿತ ವ್ಯವಹಾರ(ಈಸ್ ಆಫ್ ಡೂಯಿಂಗ್)ಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಸ್ವಯಂ ಘೋಷಣೆ ಪತ್ರ ಮುಖೇನ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದಾಗಿದ್ದು, ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ ಎಂದು ಅವರು ತಿಳಿಸಿದರು.

ಆರ್ಥಿಕತೆ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ರಾಜ್ಯ ಸರಕಾರದ ಮೊದಲ ಆದ್ಯತೆ. ಕೊವಿಡ್ ನಡುವೆಯೂ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆರ್ಥಿಕ ಪುನಶ್ಚೇತನಗೊಳಿಸಲು ರಾಜ್ಯ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿಯೇ ಕರ್ನಾಟಕ ಈಗಲೂ ಹೂಡಿಕೆದಾರರ ಮೆಚ್ಚಿನ ತಾಣ. ಕೊವಿಡ್ ನಂತರ ಕೈಗಾರಿಕಾ ಕಾರ್ಯಾಚರಣೆ ಆರಂಭಿಸಿದ ಮೊದಲ ರಾಜ್ಯ ನಮ್ಮದು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತಾತ್ಮಕವಾಗಿ ಹಾಗೂ ನೀತಿ ನಿಯಮಗಳಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ. ಕೈಗಾರಿಕೆ ಮೂಲ ಸೌಕರ್ಯ ತಿದ್ದುಪಡಿ, ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಉದ್ಯಮ ಪ್ರಸ್ತಾಪಗಳ ತ್ವರಿತ ಅನುಮೋದನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಈಗ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕೇಂದ್ರ ಸರಕಾರದ ಡಿಪಿಐಐಟಿ ಇಲಾಖೆಯು ಹೊರಡಿಸಿರುವ ಅಧಿಕೃತ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2020ರ ಜನವರಿಯಿಂದ ಅಕ್ಟೋಬರ್‍ವರೆಗಿನ ಅವಧಿಯಲ್ಲಿ 1,54,937 ಕೋಟಿ ರೂಪಾಯಿ ಮೊತ್ತದ 95 ಹೂಡಿಕೆ ಪ್ರಸ್ತಾವನೆಗಳು ನೊಂದಣಿಯಾಗಿದ್ದು, ಇದು ಶೇ.41ರಷ್ಟಿದೆ. ದೇಶದಲ್ಲೇ ಪ್ರಥಮ ಸ್ಥಾಪ ಪಡೆದಿದೆ. 2019ರ ಆಗಸ್ಟ್ 2020 ಡಿಸೆಂಬರ್‍ವರೆಗೆ ರಾಜ್ಯ ಸರಕಾರದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಒಟ್ಟು 410 ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಂದ 82,015 ಕೋಟಿ ರೂ.ಬಂಡವಾಳ ಆಕರ್ಷಿಸಲಾಗಿದ್ದು, 2,27,147 ಜನರಿಗೆ ಉದ್ಯೋಗ ಅವಕಾಶ ಲಭ್ಯವಾಗಲಿದೆ.ಅಲ್ಲದೆ, 2019ರ ಅಕ್ಟೋಬರ್‍ನಿಂದ 2020ರ ಸೆಪ್ಟೆಂಬರ್ ಅವಧಿಯಲ್ಲಿ 58,204 ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯವು ಮೂರನೇ ಸ್ಥಾನದಲ್ಲಿದೆ ಎಂದು ಅವರು ವಿವರಣೆ ನೀಡಿದರು. 

ಕಾರ್ಯಕ್ರಮದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಎಂಎಸ್‍ಎಂಇ ಆಯುಕ್ತೆ ವಿನೋದ್ ಪ್ರಿಯಾ ಸೇರಿದಂತೆ ಉದ್ಯಮಿಗಳು, ಕೈಗಾರಿಕೆ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕೈಗಾರಿಕೆಗಳ ತ್ವರಿತ ಅಭಿವೃದ್ಧಿಯನ್ನು ಖಾತರಿಪಡಿಸಲಿಕ್ಕಾಗಿ ಸರಕಾರವು ಕ್ಲಸ್ಟರ್‍ಗಳ ಅಭಿವೃದ್ಧಿ ಪ್ರಕ್ರಿಯೆಗೆ ಒತ್ತು ನೀಡಲಿದೆ. ಬಂಡವಾಳ ಆಕರ್ಷಿಸಲು ವಲಯ ನಿರ್ದಿಷ್ಟ ಕ್ಲಸ್ಟರ್‍ಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಆಟಿಕೆ, ಜವಳಿ, ಕೃಷಿ ಉಪಕರಣಗಳು, ಇಎಸ್‍ಡಿಎಂ, ಎಫ್‍ಎಂಸಿಜಿ ಮತ್ತು ವೆಲ್ನೆಸ್ ಕ್ಲಸ್ಟರ್ ಸ್ಥಾಪಿಲು ರಾಜ್ಯ ಸರಕಾರ ಕ್ರಮ ಕೈಗೊಂಡಿದೆ. ಆಟಿಕೆ, ಜವಳಿ ಮತ್ತು ಇಎಸ್‍ಡಿಎಂ ಕ್ಲಸ್ಟರ್‍ಗಳಿಗೆ ಈಗಾಗಲೇ ಪ್ರತ್ಯೇಕ ನೀತಿ ರೂಪಿಸಲಾಗಿದ್ದು, ಕೃಷಿ ಉಪಕರಣಗಳು, ಎಫ್‍ಎಂಸಿಜಿ ಮತ್ತು ವೆಲ್ನೆಸ್ ಕ್ಲಸ್ಟರ್‍ಗಳ ನೀತಿ ಹೊರತರಲು ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ

ಹೂಡಿಕೆ, ಯೋಜನಾ ಸ್ಥಳ, ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗಳಿಗೆ ಮಾತ್ರ ಸೂಕ್ತ ಆದ್ಯತೆ ನೀಡುವುದರೊಂದಿಗೆ ಅಲ್ಟ್ರಾ ಮತ್ತು ಸೂಪರ್ ಮೆಗಾ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್‍ಗಳು, ರಿಯಾಯಿತಿಗಳನ್ನು ನೀಡಲಾಗುವುದು. ಖಾಸಗಿ ಕೈಗಾರಿಕಾ ಪಾರ್ಕ್‍ಗಳು ಅಂದರೆ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಪಾರ್ಕ್, ವಲಯ ನಿರ್ದಿಷ್ಟ ಪಾರ್ಕ್(ಸೆಕ್ಟರ್ ಸ್ಪೆಸಿಫಿಕ್ ಪಾರ್ಕ್), ಲಾಜಿಸ್ಟಿಕ್ಸ್ ಪಾರ್ಕ್ ಹಾಗೂ ಫ್ಲಾಂಟೆಡ್ ಫ್ಯಾಕ್ಟರಿಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಕೈಗಾರಿಕಾ ಉತ್ಪಾದನೆಗೆ ಅಡಚಣೆ ಆಗದಂತೆ ಉತ್ಪಾದನಾ ಕೈಗಾರಿಕೆಗಳು ತಮ್ಮ ಆವರಣದಲ್ಲೆ ನೀರಿನ ಕೊಯ್ಲು, ಉಳಿತಾಯ ಕ್ರಮಗಳನ್ನು ಅಳವಡಿಸಲು ಪ್ರೋತ್ಸಾಹಕವಾಗಿ ಆರ್ಥಿಕ ಉತ್ತೇಜನವನ್ನೂ ನೀಡಲಾಗುವುದು. ಉತ್ಪಾದನಾ ಕೈಗಾರಿಕೆಗಳಲ್ಲಿ ಮಾಲಿನ್ಯ, ನಿವಾರಣೆ, ಪ್ರತಿಬಂಧ ಹಾಗೂ ತ್ಯಾಜ್ಯಪ್ರಮಾಣ ನಿಯಂತ್ರಿಸುವುದನ್ನು ಪ್ರೋತ್ಸಾಹಿಸಲು ‘ಶೂನ್ಯ ವಿಸರ್ಜನಾ ಪ್ರಕ್ರಿಯೆ’ಯ ಕೈಗಾರಿಕೆಗಳಿಗೆ ಉತ್ತೇಜನ ಧನವನ್ನೂ ನೀಡಲಾಗುವುದು.
-ಗುಂಜನ್ ಕೃಷ್ಣ, ಕೈಗಾರಿಕೆ ಇಲಾಖೆ ಆಯುಕ್ತೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News