ಬೇಜವಾಬ್ದಾರಿಯುತ ಹೇಳಿಕೆ ನೀಡುವ ರಾಜಕಾರಣಿಗಳನ್ನು ಗುಂಪು ಥಳಿಸಿ ಹತ್ಯೆಗೈದರೆ ಆಶ್ಚರ್ಯವಾಗಲಾರದು: ದಿಲ್ಲಿ ಹೈಕೋರ್ಟ್

Update: 2021-01-21 18:41 GMT

ಹೊಸದಿಲ್ಲಿ: ರಾಜಕೀಯ ನಾಯಕರು ನಾಗರಿಕರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರ ರಾಜಕೀಯ ಕಾರ್ಯಸೂಚಿಗಾಗಿ ಎಲ್ಲಾ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹ ರಾಜಕಾರಣಿಗಳನ್ನು ಸಾರ್ವಜನಿಕರೇ ಗುಂಪಾಗಿ ಥಳಿಸಿ ಹತ್ಯೆಗೈ ದರೆ ಆಶ‍್ಚರ್ಯವಾಗುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಗುರುವಾರ ಹೇಳಿದೆ.

ನಾವು ಏನು ಮಾಡಲು ಬಂದಿದ್ದೇವೆ?ನಾವು ಯಾವ ರೀತಿಯ ದೇಶ, ಸಮಾಜವನ್ನು ನಿರ್ಮಿಸುತ್ತಿದ್ದೇವೆ? ಜನರು ಎಲ್ಲ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಹಾಗೂ ರಾಜಕೀಯ ಕಾರ್ಯಸೂಚಿಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಸಮಾಜ ಹಾಗೂ  ಜನತೆಗೆ ಯಾವ ರೀತಿಯ ಹಾನಿ ಉಂಟು ಮಾಡುತ್ತಿದ್ದಾರೆ  ಎಂಬ ಅರಿವು ಇಲ್ಲ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ನ ನೌಕರರಿಗೆ ಸಂಬಳ ಪಾವತಿಸದಿರುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜಕೀಯ ವರ್ಗವು ಪ್ರಬುದ್ದರಾಗಿರಬೇಕಲ್ಲವೇ? ಇದೇ ಹಾದಿಯಲ್ಲಿ ಮುಂದುವರಿದರೆ ಸಾರ್ವಜನಿಕರು ರಾಜಕಾರಣಿಗಳನ್ನು ಸಾರ್ವಜಿಕವಾಗಿ ಗುಂಪು ಹತ್ಯೆ ನಡೆಸಿದರೂ ಆಶ್ಚರ್ಯಪಡಬೇಕಾಗಿಲ್ಲಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News