ರಾಮಮಂದಿರಕ್ಕೆ ದೇಣಿಗೆಗೆ ಒತ್ತಾಯ ಆರೋಪ: ಪೌರ ಕಾರ್ಮಿಕರ ದಿಢೀರ್ ಪ್ರತಿಭಟನೆ

Update: 2021-01-22 05:10 GMT

ಶಹಜಹಾನ್‌ಪುರ, ಜ.22: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ಪ್ರತಿಯೊಬ್ಬ ಪೌರ ಕಾರ್ಮಿಕರು ಕಡ್ಡಾಯವಾಗಿ 100 ರೂ. ದೇಣಿಗೆ ನೀಡಬೇಕು ಎಂದು ನಿರೀಕ್ಷಕರು ಒತ್ತಡ ತಂದಿದ್ದಾರೆ ಎಂದು ಆಪಾದಿಸಿ ಜಲಾಲಾಬಾದ್ ನಗರ ಪಾಲಿಕೆಯ ನೈರ್ಮಲ್ಯ ಕಾರ್ಮಿಕರು ಗುರುವಾರ ಪಾಲಿಕೆ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಕಾರ್ಮಿಕರನ್ನು ಕೆಲಸಕ್ಕೆ ಗೈರುಹಾಜರು ಎಂದು ಪರಿಗಣಿಸುವುದಾಗಿ ನೈರ್ಮಲ್ಯ ನಿರೀಕ್ಷಕರು ಬೆದರಿಕೆ ಹಾಕಿದ್ದಾರೆ ಎಂದು ನೈರ್ಮಲ್ಯ ಕಾರ್ಮಿಕ ಮುಖಂಡ ಪ್ರೇಮ್ ಪ್ರಕಾಶ್ ವಾಲ್ಮೀಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಡಿಯೊ ತುಣುಕಿನಲ್ಲಿ ಆಪಾದಿಸಿದ್ದಾರೆ.

ನೈರ್ಮಲ್ಯ ಕಾರ್ಮಿಕರ ವೇತನ ತೀರಾ ಕಡಿಮೆ ಇರುವ ಕಾರಣ ದೇಣಿಗೆ ನೀಡುವ ಸ್ಥಿತಿಯಲ್ಲಿ ಕಾರ್ಮಿಕರು ಇಲ್ಲ ಎಂದು ವಾಲ್ಮೀಕಿ ಸ್ಪಷ್ಟಪಡಿಸಿದರು. ಪಾಲಿಕೆ ಕಾರ್ಯನಿರ್ವಹಣಾಧಿಕಾರಿ ದಯಾಶಂಕರ್ ವರ್ಮಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲಸಕ್ಕೆ ಹಾಜರಾದ ಎಲ್ಲ ಕಾರ್ಮಿಕರಿಗೆ ಹಾಜರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ.

"ದೇಣಿಗೆ ನೀಡಬೇಕೇ ಬೇಡವೇ ಎನ್ನುವುದು ಅವರ ವೈಯಕ್ತಿಕ. ಸರಕಾರಿ ಮಟ್ಟದಲ್ಲಿ ಯಾವುದೇ ದೇಣಿಗೆ ಕೇಳಿಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News