ಭಾರತದ 5.62 ಲಕ್ಷ ಫೇಸ್‌ ಬುಕ್‌ ಬಳಕೆದಾರರ ಖಾಸಗಿ ಮಾಹಿತಿ ಕದ್ದ ಬ್ರಿಟಿಷ್‌ ಕಂಪೆನಿ: ಪ್ರಕರಣ ದಾಖಲಿಸಿದ ಸಿಬಿಐ

Update: 2021-01-22 06:12 GMT

ಹೊಸದಿಲ್ಲಿ,ಜ.22: ಭಾರತದ 5.62 ಲಕ್ಷ ಮಂದಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದ್ದ ಆರೋಪದಲ್ಲಿ ಬ್ರಿಟನ್‌ ನ ರಾಜಕೀಯ ಸಲಹಾ ಕಂಪೆನಿಯಾಗಿರುವ ಕೇಂಬ್ರಿಡ್ಜ್‌ ಅನಾಲಿಟಿಕಾದ ವಿರುದ್ಧ ಕೇಂದ್ರ ತನಿಖಾ ಸಮಿತಿ (ಸಿಬಿಐ)ಯು ಪ್ರಕರಣ ದಾಖಲಿಸಿದೆ ಎಂದು ndtv.cm ವರದಿ ಮಾಡಿದೆ. ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ ಎಂಬ ಇನ್ನೊಂದು ಕಂಪೆನಿಯನ್ನು ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯು ಹೆಸರಿಸಿದೆ ಎಂದು ತಿಳಿದು ಬಂದಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಈ ಕುರಿತಾದಂತೆ ಪಾರ್ಲಿಮೆಂಟ್‌ ನಲ್ಲಿ, "ಫೇಸ್‌ ಬುಕ್‌ ನಿಂದ ವೈಯಕ್ತಿಕ ಮಾಹಿತಿ ಕದ್ದ ಆರೋಪದಲ್ಲಿ ಕೇಂಬ್ರಿಡ್ಜ್‌ ಅನಾಲಿಟಿಕಾ ಕಂಪೆನಿಯ ವಿರುದ್ಧ ಸಿಬಿಐ ತನಿಖೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದರು. 

ಸಿಬಿಐಗೆ ಪ್ರತಿಕ್ರಿಯಿಸಿದ ಸಂಸ್ಥೆಯು, "ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ ಸಂಸ್ಥೆಯು ಕಾನೂನು ಬಾಹಿರವಾಗಿ ಕೇಂಬ್ರಿಡ್ಜ್‌ ಅನಾಲಿಟಿಕಾದೊಂದಿಗೆ ಭಾರತದ 5.62 ಲಕ್ಷ ಫೇಸ್‌ ಬುಕ್‌ ಬಳಕೆದಾರರ ಮಾಹಿತಿ ಹಂಚಿತ್ತು. ಈ ಸಂಸ್ಥೆಯು ಈ ಮಾಹಿತಿಗಳನ್ನು ಭಾರತದ ಚುನಾವಣೆಯ ಸಂದರ್ಭದಲ್ಲಿ ಬಳಸಿತ್ತು ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

ಮಾರ್ಚ್‌ 2018ರಲ್ಲಿ ಹಲವಾರು ಅಂತಾರಾಷ್ಟ್ರೀಯ ಕಂಪೆನಿಗಳು ಮಾತ್ರವಲ್ಲದೇ ಕೇಂಬ್ರಿಡ್ಜ್‌ ಅನಾಲಿಟಿಕಾದ ಮಾಜಿ ಉದ್ಯೋಗಿಗಳು ಹಾಗೂ ಸಹಾಯಕರು, "ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯು ಒಟ್ಟು 50 ಮಿಲಿಯನ್‌ ಫೇಸ್‌ ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಅವರ ಅನುಮತಿಯಿಲ್ಲದೇ ಸಂಗ್ರಹಿಸಿದ್ದಾರೆ" ಎಂದು ಆರೋಪಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News