ಫೆ.8ಕ್ಕೆ ಟ್ರಂಪ್ ವಾಗ್ದಂಡನೆ ವಿಚಾರಣೆ ಆರಂಭ

Update: 2021-01-23 04:57 GMT

ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಗ್ದಂಡನೆ ವಿಚಾರಣೆಯನ್ನು ಅಮೆರಿಕದ ಸೆನೆಟ್ ಫೆಬ್ರವರಿ ಎರಡನೇ ವಾರದಲ್ಲಿ ಆರಂಭಿಸಲಿದೆ ಎಂದು ಸೆನೆಟ್ ಮುಖಂಡ ಚುಕ್ ಶೇಮರ್ ಹೇಳಿದ್ದಾರೆ.

ಅಧ್ಯಕ್ಷ ಜೋ ಬೈಡನ್ ಅವರ ಸಂಪುಟಕ್ಕೆ ದೃಢೀಕರಣ ನೀಡುವ ನಿಟ್ಟಿನಲ್ಲಿ ಪ್ರಮುಖ ನಡಾವಳಿಗಳನ್ನು ನಿರ್ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಟ್ರಂಪ್ ವಿರುದ್ಧದ ವಿಚಾರಣೆಯ ಬಹುಪಾಲನ್ನು ಎರಡು ವಾರಗಳ ಕಾಲ ಮುಂದೂಡಿರುವುದು ಇದರಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ.

ಟ್ರಂಪ್ ಅಧಿಕಾರದಿಂದ ನಿರ್ಗಮಿಸುವ ಒಂದು ವಾರ ಮುಂಚಿತವಾಗಿ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆ ಜನವರಿ 13ರಂದು ಎರಡನೇ ಬಾರಿಗೆ ವಾಗ್ದಂಡನೆ ವಿಧಿಸಿತ್ತು. ಟ್ರಂಪ್ ವಿರುದ್ಧದ ವಾಗ್ದಂಡನೆ ವಿಧಿಯನ್ನು ಸೋಮವಾರ ಸಂಜೆ 7 ಗಂಟೆಗೆ ಸೆನೆಟ್‌ನಲ್ಲಿ ಓದಲಾಗುತ್ತದೆ. ಸೆನೆಟ್‌ನ 100 ಮಂದಿ ಸದಸ್ಯರು ಮರುದಿನ ವಿಚಾರಣಾ ತೀರ್ಪುಗಾರರಾಗಿ ಪ್ರಮಾಣವಚನ ಸ್ವೀಕರಿಸುವರು ಎಂದು ಶೆಮೆರ್ ವಿವರಿಸಿದರು.

ಸ್ಪೀಕರ್ ನ್ಯಾನ್ಸಿ ಫೆಲೋಸಿಯವರು ನಿಯೋಜಿಸಿದ ವಾಗ್ದಂಡನೆ ವ್ಯವಸ್ಥಾಪಕರು ಮತ್ತು ಟ್ರಂಪ್ ಇನ್ನೂ ನೇಮಿಸಬೇಕಿರುವ ಪ್ರತಿವಾದ ತಂಡದ ಸದಸ್ಯರಿಗೆ ಬಳಿಕ ತಮ್ಮ ಕಾನೂನಾತ್ಮಕ ವಿವರಣೆಗಳನ್ನು ನೀಡಲು ಸಮಯಾವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ವಿವರಣೆಯ ಕರಡು ಸಿದ್ಧಪಡಿಸಿದ ಬಳಿಕ ಫೆ. 8ರಂದು ಉಭಯ ಪಕ್ಷಗಳು ಅದನ್ನು ಸದನದಲ್ಲಿ ಪ್ರಸ್ತುತಪಡಿಸುವರು ಎಂದು ಸೆನೆಟ್‌ನಲ್ಲಿ ವೇಳಾಪಟ್ಟಿಯ ವಿವರ ನೀಡಿದರು.

ಎರಡು ವಾರಗಳ ಮಧ್ಯಂತರ ಅವಧಿಯಲ್ಲಿ ಸೆನೆಟ್ ಬೈಡನ್ ಸಂಪುಟಕ್ಕೆ ನಾಮಕರಣಗೊಂಡವರ ಹೆಸರುಗಳನ್ನು ಅನುಮೋದಿಸುವ ಹಾಗೂ ಸಾಂಕ್ರಾಮಿಕದ ವೇಳೆ ತೊಂದರೆಗೀಡಾದ ಲಕ್ಷಾಂತರ ಅಮೆರಿಕನ್ನರಿಗೆ ಕೋವಿಡ್ ಪರಿಹಾರ ನೀಡುವ ಪ್ರಸ್ತಾಪವನ್ನು ಅನುಮೋದಿಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News