ಯುವಸಬಲೀಕರಣ ಖಾತೆ ಯಾರಿಗೂ ಬೇಡವಾಗಿದೆ: ಸಾಹಿತಿ ಕೈ.ವೈ.ನಾರಾಯಣಸ್ವಾಮಿ

Update: 2021-01-23 13:59 GMT

ಬೆಂಗಳೂರು, ಜ.23: ಪ್ರತಿಬಾರಿ ಮಂತ್ರಿ ಮಂಡಲ ವಿಸ್ತರಣೆ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾವ ರಾಜಕಾರಣಿಯೂ ಮುಂದೆ ಬರುವುದಿಲ್ಲ ಎಂದು ಹಿರಿಯ ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂವಾದದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ಮತ್ತು ರಾಜಾರಾಮ್ ಚಲ್ಲೂರ್ ಕಾಲೇಜಿನ ಲಲನಾ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಯುಜವನರ ಹಕ್ಕುಗಳ ಯುವಾಂದೋಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಜನರು ದೇಶದ ಸಂಪತ್ತು ಎಂಬ ವಾಕ್ಯವನ್ನು ರಾಜಕಾರಣಿಗಳು ಅತಿಹೆಚ್ಚು ಬಳಸಿ ಆ ವಾಕ್ಯಕ್ಕೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಯುವಜನರು ನಿಜವಾಗಿಯೂ ಮಹತ್ವದ ಸಂಪತ್ತು ಎಂಬ ಅರಿವು ಅವರಿಗೆ ಇದ್ದಿದ್ದರೆ, ಯುವಜನ ಖಾತೆಯನ್ನು ನನಗೆ ಕೊಡಿ, ನನಗೆ ಕೊಡಿ ಎಂದು ರಾಜಕಾಣಿಗಳೆಲ್ಲರೂ ಜಗಳ ಮಾಡಬೇಕಿತ್ತು. ಆದರೆ, ಈ ವಾಕ್ಯ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿದ್ದರಿಂದ ರಾಜ್ಯದ ಯುವ ಸಂಪನ್ಮೂಲ ಕಡೆಗಣಿಸಲ್ಪಟ್ಟಿದೆ ಎಂದು ಟೀಕಿಸಿದರು.

ಯುವಜನರನ್ನು ರಾಜಕಾರಣಿಗಳು ಕೇವಲ ದುಡಿಯುವ ಕೈಗಳನ್ನಾಗಿ ನೋಡಿದರೆ ಸಾಲದು. ಅವರಿಗೆ ಮಿಡಿಯುವ ಹೃದಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಂದಿನ ಶಿಕ್ಷಣವು ವಿದ್ಯಾರ್ಥಿ ಯುವಜನರನ್ನು ಉತ್ಪಾದನಾ ಯಂತ್ರಗಳನ್ನಾಗಿ ಉತ್ಪಾದಿಸುತ್ತದೆ. ಸರಕಾರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಕ್ಕುಗಳನ್ನು ಘೋಷಣೆ ಮಾಡಿದಂತೆ ಯುವಜನರಿಗೂ ಹಕ್ಕುಗಳನ್ನು ಘೋಷಣೆ ಮಾಡಬೇಕು. ಯುವಜನರ ಸಬಲೀಕರಣಕ್ಕೆ ನಿಗಮ ಸ್ಥಾಪಿಸಬೇಕು. ಅದಕ್ಕಾಗಿ ಸಂವಾದ, ಯುವ ಮುನ್ನಡೆ ಸೇರಿದಂತೆ ಸಂಘಟನೆಗಳು ಆಂದೋಲನ ನಡೆಸುತ್ತಿದ್ದು, ಅದಕ್ಕೆ ಸಾಂಸ್ಕತಿಕ ವಲಯ ಬೆಂಬಲಿಸಬೇಕಿದೆ ಎಂದು ಹೇಳಿದರು.

ಮನುಕುಲದಲ್ಲಿಯೇ ಯುವಜನ ಸಮುದಾಯ ಅತಿಹೆಚ್ಚು ತಾರತಮ್ಯಗಳಿಗೆ ಒಳಗಾಗಿದೆ. ದೇಶದಲ್ಲಿ ನಡೆಯುತ್ತಿರುವ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.40ರಷ್ಟು ಯುವಜನರದ್ದೆ. ಯುವಜನರ ಹಕ್ಕುಗಳು ಇಷ್ಟೊಂದು ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿರುವುದರಿಂದಲೇ ಇಷ್ಟೊಂದು ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು, ಸಮಾಜದಲ್ಲಿ ನಮಗೆ ಅರಿವಿಲ್ಲದಂತೆ ಪ್ರತಿದಿನವೂ ಯುವಜನರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಒಬ್ಬ ವಿದ್ಯಾರ್ಥಿ ಮೊಬೈಲ್ ಇಲ್ಲದ ಕಾರಣಕ್ಕೆ ಆನಲೈನ್ ಕ್ಲಾಸ್‍ಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅದು ಆತನ ಶಿಕ್ಷಣದ ಹಕ್ಕನ್ನು ಉಲ್ಲಂಘಿಸಿದಂತೆ ಎಂದರು.

ಹಾಸ್ಟೆಲ್ ಇಲ್ಲದಿದ್ದರೆ, ಬೋಧಕರಿರದಿದ್ದರೆ, ಪ್ರಶ್ನೆ ಕೇಳದಂತೆ ಹತ್ತಿಕ್ಕಿದರೆ, ಶಾಲಾ ಆವರಣದಲ್ಲಿ ಹುಡುಗ ಹುಡುಗಿಯನ್ನು ಮಾತಾಡಲು ನಿಷೇಧಿಸಿದರೆ, ಇವೆಲ್ಲವೂ ಯುವಜನರ ಹಕ್ಕುಗಳ ಉಲ್ಲಂಘನೆಗಳೇ ಆಗಿವೆ. ಅಷ್ಟೇ ಅಲ್ಲದೇ ಇವತ್ತು ಧರ್ಮದ ಭಯ, ಜಾತಿಯ ಭಯ, ದೇವರ ಭಯ, ಹೆಣ್ಣು ಅನ್ನೋ ಕಾರಣಕ್ಕೆ ಭಯ. ಹೀಗೆ ಹಲವಾರು ಭಯಗಳನ್ನು ಸೃಷ್ಟಿಸುವ ಮೂಲಕ ಸಮಾಜ ಯುವಜನರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದರು.

ಜೀವಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಯುವಜನರನ್ನು ಗುಮಾನಿಯಿಂದ ನೋಡಲಾಗುತ್ತಿದೆ. ನಿನ್ನೊಳಗಿನ ಮೆದುಳಿಗೆ ಮತ್ತು ಹೃದಯಕ್ಕೆ ಸಂಘರ್ಷ ನಡೆದರೆ ನೀನು ನಿನ್ನ ಹೃದಯದ ಮಾತು ಕೇಳು. ಆಗ ನೀನು ಹೆಚ್ಚು ಸಂವೇದನಾಶೀಲ ವ್ಯಕ್ತಿಯಾಗುತ್ತಿಯಾ ಎಂದು ವಿವೇಕಾನಂದರು ಹೇಳಿದ್ದರು. ಆದರೆ ಇಂದು ಯುವಜನರ ಮೆದುಳಿಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಅವರ ಹೃದಯಕ್ಕೆ ಗಮನ ನೀಡುತ್ತಿಲ್ಲ. ಇಂದಿನ ಶಿಕ್ಷಣವು ತಾಂತ್ರಿಕತೆಗೆ ಮಾತ್ರ ಹೆಚ್ಚು ಗಮನ ನೀಡುತ್ತಿದೆ ಎಂದರು.

ಯುವಾಂದೋಲನದ ಕಾರ್ಯಕರ್ತೆ ಪೂಜಾ ನಾರಾಯಣ ಮಾತನಾಡಿ, ಯುವಜನರಿಗಾಗಿ ನಿಗಮ ಸ್ಥಾಪಿಸುವುದಾಗಿ 2013ರಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ತಾನೆ ಹೇಳಿಕೊಂಡಂತೆ ಯುವಜನರ ಸಮಗ್ರ ಸಬಲೀಕರಣಕ್ಕಾಗಿ ನಿಗಮವೊಂದನ್ನು ಸ್ಥಾಪಿಸಬೇಕು. ಯುವ ನೀತಿ ಜಾರಿಗೆ ತಂದು ಯುವಜನರ ಹಕ್ಕುಗಳನ್ನು ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಕುಲಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿಲೀಪ್, ಅವಿನಾಶ್, ಉಪನ್ಯಾಸಕರಾದ ಸಂಚಿತಾ ಭೋಪಯ್ಯ, ಪ್ರೇಮಾವತಿ ಎಸ್.ಕೆ., ಶ್ರೀಲಕ್ಷ್ಮಿ, ಶ್ರೀಕಾಂತ ರಾಮಕ್ಕ, ಜ್ಯೋತಿ, ಹನುಮಂತ ಹಾಲಿಗೇರಿ, ಮಾನಸ, ಸಹನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News