ಹಝ್ರತ್ ಹಮೀದ್ ಶಾ ಐಟಿಐ ಸಂಸ್ಥೆಗೆ ಸರಕಾರದ ಮಾನ್ಯತೆ: ಜಿ.ಎ.ಬಾವಾ

Update: 2021-01-23 16:08 GMT

ಬೆಂಗಳೂರು, ಜ.23: ಹಝ್ರತ್ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ಆವರಣದಲ್ಲಿರುವ ಎಚ್.ಎಚ್.ಎಸ್ ಮತ್ತು ಎಚ್.ಎಂ.ಎಸ್ ಐಟಿಐ ಸಂಸ್ಥೆಗೆ ರಾಜ್ಯ ಸರಕಾರ ಹಾಗೂ ಹೊಸದಿಲ್ಲಿಯ ಎನ್.ಸಿ.ವಿ.ಟಿ.ಯ ಮಾನ್ಯತೆ ಲಭ್ಯವಾಗಿದೆ ಎಂದು ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಹರ್ಷ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕಬ್ಬನ್‍ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಶಾ ದರ್ಗಾ ಕಾಂಪ್ಲೆಕ್ಸ್ ನಲ್ಲಿನ ಎಚ್.ಎಚ್.ಎಸ್ ಮತ್ತು ಎಚ್.ಎಂ.ಎಸ್ ಐಟಿಐ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಯ ಕೌಶಲ್ಯ ಕರ್ನಾಟಕ ಯೋಜನೆ(ಸಿಎಂಕೆಕೆವೈ)ಯ ಕುರಿತು ಎನ್‍ಜಿಒಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ರಾಜ್ಯದಲ್ಲಿ ಸರಕಾರದಿಂದ ಮಾನ್ಯತೆ ಪಡೆದಂತಹ ಇಂತಹ ಏಕೈಕ ಸಂಸ್ಥೆ ಇದಾಗಿದೆ. ನಮ್ಮ ಸಂಸ್ಥೆಯ ವತಿಯಿಂದ ರಾಜ್ಯದ ಯಾವುದೇ ಮೂಲೆಯಲ್ಲಾದರೂ ಇಲ್ಲಿ ಲಭ್ಯವಿರುವ ಕೋರ್ಸುಗಳನ್ನು ಮುಂದಿಟ್ಟು ಸಂಸ್ಥೆಗಳನ್ನು ತೆರೆಯಬಹುದಾಗಿದೆ. ಇಂದು ನಮ್ಮ ಸಮುದಾಯದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಮುದಾಯದಲ್ಲಿ ಶಾಲೆಯಿಂದ ಹೊರಗುಳಿಯುವ ಯುವಕ, ಯುವತಿಯರ ಪ್ರಮಾಣ ಹೆಚ್ಚುತ್ತಿದೆ. ಅವರಲ್ಲಿ ಇರುವ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಲು ಮುಖ್ಯಮಂತ್ರಿಯ ಕೌಶಲ್ಯ ಕರ್ನಾಟಕ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ನಾವು ಬಯಸಿದ್ದೇವೆ ಎಂದು ಬಾವಾ ತಿಳಿಸಿದರು.

ಎಚ್.ಎಚ್.ಎಸ್ ಮತ್ತು ಎಚ್.ಎಂ.ಎಸ್ ಐಟಿಐ ಸಂಸ್ಥೆಯಲ್ಲಿ ಈಗಾಗಲೆ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ರೆಫ್ರಿಜರೇಟರ್ ಮತ್ತು ಏರ್ ಕಂಡಿಷಿಂಗ್, ಎಲೆಕ್ಟ್ರೀಷಿಯನ್, ಫಿಟ್ಟರ್ ಹಾಗೂ ವೆಲ್ಡರ್ ಕೋರ್ಸುಗಳಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ಶುಲ್ಕವಾಗಲಿ, ಡೊನೇಷನ್‍ಗಾಗಲಿ ಅವಕಾಶವೇ ಇಲ್ಲ ಎಂದು ಅವರು ಹೇಳಿದರು.

ಈ ವರ್ಷ ಹೊಸದಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಯಾಲಿಸಿಸ್ ಟೆಕ್ನಿಶಿಯನ್, ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಮ್ ಹೆಲ್ತ್ ಏಡ್, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಫೀಲ್ಡ್ ಇಂಜಿನಿಯರ್ ಎಸಿ ಮತ್ತು ರೆಫ್ರಿಜರೇಷನ್, ಸಿಸಿಟಿವಿ ಅಳವಡಿಕೆ ಟೆಕ್ನಿಶಿಯನ್, ಸಹಾಯಕ ಎಲೆಕ್ಟ್ರಿಶಿಯನ್ ಹಾಗೂ ಭದ್ರತಾ ಸಿಬ್ಬಂದಿಯ ತರಬೇತಿಗಳನ್ನು ನೀಡಲು ಉದ್ದೇಶಿಸಿದ್ದೇವೆ ಎಂದು ಬಾವಾ ಹೇಳಿದರು.

ಸೀಮಿತ ಸೀಟುಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಕೆಲಸದ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5.30ರವರೆಗೆ ಮೊಬೈಲ್ ಸಂಖ್ಯೆ 9986020170ಗೆ ಕರೆ ಮಾಡಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದು ಬಾವಾ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಡಿಸಿಪಿ ಎಂ.ಡಿ.ಮುಲ್ಲಾ, ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಕಾರ್ಯದರ್ಶಿ ಸೈಯದ್ ಮುನವ್ವರ್, ಸದಸ್ಯರಾದ ಡಾ.ಇಕ್ಬಾಲ್ ಹುಸೇನ್ ವಾಸಿ, ರಶೀದ್, ಐಟಿಐ ಸಂಸ್ಥೆಯ ವಿಶೇಷ ಅಧಿಕಾರಿ ಕಲೀಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News