ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್‍ಐಆರ್: ಸರಕಾರದ ನಡೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2021-01-23 16:11 GMT
ಶಾಸಕಿ ಸೌಮ್ಯಾ ರೆಡ್ಡಿ

ಬೆಂಗಳೂರು, ಜ.23: ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ನ್ಯಾಯಯುತ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಶಾಸಕಿ ಸೌಮ್ಯಾರೆಡ್ಡಿ ಅವರ ವಿರುದ್ಧ ಆಧಾರ ರಹಿತ ಎಫ್‍ಐಆರ್ ದಾಖಲಿಸುವ ಮೂಲಕ ಸೇಡಿನ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ರೇಸ್‍ಕೋರ್ಸ್ ನ ಕಾಂಗ್ರೆಸ್ ಭವನದ ಮುಂಭಾಗ ಜಮಾಯಿಸಿದ ಬೆಂಗಳೂರು ಮಹಾನಗರ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು, ಹೋರಾಟಗಾರರ ವಿರುದ್ಧ ಸುಳ್ಳಿನ ದೂರನ್ನು ದಾಖಲಿಸಿಕೊಳ್ಳುವ ಮೂಲಕ ಬಿಜೆಪಿ ಸರಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು.

ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ನಡೆಸಿ ಹಗರಣ ನಡೆಸಿ ನ್ಯಾಯಾಲಯದಿಂದ ನಿಂದನೆಗೆ ಒಳಗಾಗಿ ತನಿಖೆ ಎದುರಿಸುತ್ತಿರುವವರ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ. ರೈತ ಮಹಿಳೆಯರ ವಿರುದ್ಧ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧವೇ ದೌರ್ಜನ್ಯದಿಂದ ವರ್ತಿಸಿರುವ ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ರೈತಪರ ಹೋರಾಟದಲ್ಲಿ ಶಾಸಕಿ ಸೌಮ್ಯರೆಡ್ಡಿ ಅವರ ವಿರುದ್ಧ ಕೆಲವು ಮಹಿಳಾ ಪೊಲೀಸ್ ಪೇದೆಗಳು ಹಾಗೂ ಪೊಲೀಸ್ ಸಿಬ್ಬಂದಿ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸಿ ಅವರನ್ನು ನೆಲಕ್ಕೆ ತಳ್ಳಿ ಎಳೆದಾಡಿ ಅವಮಾನಿಸಿರುವ ವಿಡಿಯೊ ಚಿತ್ರಗಳು ಲಭ್ಯವಿದ್ದರೂ ಅದನ್ನು ಮರೆಮಾಚಲು ಹೋರಾಟ ನಡೆದ 2 ದಿನ ನಂತರ ಎಫ್‍ಐಆರ್ ದಾಖಲಿಸಿರುವುದು ಬಿಜೆಪಿಯ ರಾಜಕೀಯ ಬಣ್ಣ ಬಹಿರಂಗವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ಧನ್ ಎ.ಆನಂದ್ ಎಲ್.ಜಯಸಿಂಹ ಎಂ.ಎ ಸಲೀಂ, ಈ.ಶೇಖರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News