ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿಕೆ

Update: 2021-01-23 16:41 GMT

ಹೊಸದಿಲ್ಲಿ, ಜ.23: ಪೆಟ್ರೋಲ್, ಡೀಸೆಲ್ ದರ ಒಂದೇ ವಾರದಲ್ಲಿ ಸತತ ನಾಲ್ಕನೇ ಬಾರಿ ಏರಿಕೆಯಾಗಿದ್ದು ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೇರಿದೆ. ಶನಿವಾರ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 25 ಪೈಸೆ ಏರಿಕೆಯಾಗಿದೆ ಎಂದು ತೈಲ ಮಾರಾಟ ಸಂಸ್ಥೆಗಳು ಹೇಳಿವೆ.

ಇದರೊಂದಿಗೆ ಈ ವಾರ ಪೆಟ್ರೋಲ್, ಡೀಸೆಲ್ ಬೆಲೆ 1 ರೂ. ಹೆಚ್ಚಾಗಿದೆ. ಶನಿವಾರದ ಬೆಲೆ ಏರಿಕೆಯ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 85.70 ರೂ, ಡೀಸೆಲ್ ಬೆಲೆ 75.88 ರೂ., ಮುಂಬೈಯಲ್ಲಿ 92.28 ರೂ ಮತ್ತು 82.66 ರೂ.ಗೆ ತಲುಪಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಆಧಾರದಲ್ಲಿ ತೈಲ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.

ಇದೀಗ ತೈಲ ದರ ಶತಕದತ್ತ ಧಾವಿಸುತ್ತಿರುವುದರಿಂದ ರಾಜ್ಯಗಳು ಮಾರಾಟ ತೆರಿಗೆ ಕಡಿತಗೊಳಿಸುವ ಮೂಲಕ ಜನರ ಮೇಲಿನ ಹೊರೆಯನ್ನು ಇಳಿಸಬೇಕು ಎಂಬ ಆಗ್ರಹ ಹೆಚ್ಚಿದೆ. ಸೌದಿ ಅರೆಬಿಯಾ ತೈಲ ಉತ್ಪಾದನೆ ಕಡಿಮೆಗೊಳಿಸಿರುವುದು ತೈಲ ದರ ಹೆಚ್ಚಳಕ್ಕೆ ಕಾರಣ ಎಂದು ಕೆಲ ದಿನಗಳ ಹಿಂದೆ ಕೇಂದ್ರದ ತೈಲ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಆದರೆ ತೈಲದ ಮೇಲಿನ ತೆರಿಗೆ ಕಡಿತದ ಕುರಿತ ಪ್ರಶ್ನೆಗೆ ಅವರು ನೇರ ಉತ್ತರ ನೀಡಿರಲಿಲ್ಲ. 2018ರ ಅಕ್ಟೋಬರ್ 4ರಂದು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದಾಗ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಪ್ರತೀ ಲೀಟರ್ ಮೇಲಿನ ತೆರಿಗೆಯಲ್ಲಿ 1.50 ರೂ. ಕಡಿತಗೊಳಿಸಿ ಜನರ ಮೇಲಿನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸಿತ್ತು. ಆದರೆ ಈ ಬಾರಿ ತೆರಿಗೆ ಕಡಿತಗೊಳಿಸುವ ಬಗ್ಗೆ ಸರಕಾರ ಯಾವುದೇ ಸೂಚನೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News