ನಾಲ್ಕು ರಾಷ್ಟ್ರ ರಾಜಧಾನಿಗಳಿಗಾಗಿ ಮಮತಾ ಬ್ಯಾನರ್ಜಿ ಆಗ್ರಹ

Update: 2021-01-23 17:12 GMT

ಕೋಲ್ಕತಾ,ಜ.23: ದೇಶದಲ್ಲಿ ನಾಲ್ಕು ರಾಷ್ಟ್ರ ರಾಜಧಾನಿಗಳಿಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಆಗ್ರಹಿಸಿದ್ದಾರೆ.

ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,‘ಒಂದೇ ರಾಷ್ಟ್ರ ರಾಜಧಾನಿಯೇಕಿರಬೇಕು? ಉತ್ತರ,ದಕ್ಷಿಣ,ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಹೀಗೆ ನಾಲ್ಕು ರಾಜಧಾನಿಗಳೇಕೆ ಇರಬಾರದು? ಈ ರಾಜಧಾನಿಗಳು ಸರದಿಯಂತೆ ಕಾರ್ಯ ನಿರ್ವಹಿಸಬಹುದು. ಪ್ರತಿಯೊಂದನ್ನೂ ದಿಲ್ಲಿಗೇ ಏಕೆ ಸೀಮಿತಗೊಳಿಸಲಾಗುತ್ತಿದೆ? ನಾಲ್ಕು ರಾಷ್ಟ್ರ ರಾಜಧಾನಿಗಳ ಬೇಡಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ನಾನು ನಮ್ಮ ಪಕ್ಷದ ಸಂಸದರಿಗೆ ಸೂಚಿಸಲಿದ್ದೇನೆ. ನಮ್ಮ ಚಿಂತನಾ ಕ್ರಮವನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಒಬ್ಬನೇ ನಾಯಕ,ಒಂದೇ ರಾಷ್ಟ್ರ ಎಂಬ ನೀತಿ ಸಲ್ಲದು. ನೇತಾಜಿಯವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕೇಂದ್ರವು ‘ಪರಾಕ್ರಮ ’ಶಬ್ದವನ್ನೇಕೆ ಬಳಸುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ’ಎಂದರು.

ನೇತಾಜಿಯವರ ಜನ್ಮದಿನವಾದ ಜ.23ನ್ನು ಕೇಂದ್ರವು ‘ಪರಾಕ್ರಮ ದಿವಸ್ ’ಎಂದು ಘೋಷಿಸಿದೆ. ಈ ದಿನವನ್ನು ‘ದೇಶಪ್ರೇಮ ದಿವಸ್ ’ ಅನ್ನಾಗಿ ಆಚರಿಸಬೇಕು ಎಂದು ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಬಯಸಿದೆ.

ನೇತಾಜಿ ಪೋರ್ಟ್‌ನ ಹೆಸರನ್ನು ಶ್ಯಾಮಪ್ರಸಾದ ಮುಖರ್ಜಿ ಡಾಕ್ ಎಂದು ಬದಲಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಬ್ಯಾನರ್ಜಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News